Asianet Suvarna News Asianet Suvarna News

ಸೋನಿಯಾ ಗಾಂಧಿಗೆ ಪ್ರಧಾನಿ ಪಟ್ಟ ತಪ್ಪಿಸಿದ್ದ Mulayam Singh Yadav..!

1967 ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಮುಲಾಯಂ ಸಿಂಗ್ ಯಾದವ್‌ 3 ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಹಾಗೂ, ಕೇಂದ್ರ ಸಚಿವರೂ ಆಗಿದ್ದರು.

mulayam singh yadav had stopped sonia gandhi from becoming prime minister ash
Author
First Published Oct 11, 2022, 9:51 AM IST

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಪಟ್ಟಕ್ಕೆ ಏರುವ ಮೊದಲ ಅವಕಾಶವನ್ನು ತಪ್ಪಿಸಿದ್ದು ಶರದ್‌ ಪವಾರ್‌ ಅಲ್ಲದೆ, ಸ್ವತಃ ಮುಲಾಯಂ ಸಿಂಗ್‌. 1999ರ ಏಪ್ರಿಲ್‌ 1 ರಂದು ಅಂದಿನ ಪ್ರಧಾನಿ ವಾಜಪೇಯಿ ಲೋಕಸಭೆಯಲ್ಲಿ ವಿಶ್ವಾಸಮತದಲ್ಲಿ ಸೋಲನ್ನಪ್ಪಿದ ಬಳಿಕ, ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದ ಸೋನಿಯಾ ನೇತೃತ್ವದ ಕಾಂಗ್ರೆಸ್‌ ನಿಯೋಗ, ನಮ್ಮ ಬಳಿಕ 272 ಸದಸ್ಯ ಬಲವಿದೆ. ಇನ್ನಷ್ಟು ಬಲ ಪಡೆಯುವ ವಿಶ್ವಾಸವಿದೆ ಎನ್ನುವ ಮೂಲಕ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು. 

ಆದರೆ ಆ ವೇಳೆ ಲೋಕಸಭೆಯಲ್ಲಿ 20 ಸದಸ್ಯ ಬಲ ಹೊಂದಿದ್ದ ಮುಲಾಯಂ ಬೆಂಬಲ ಅತ್ಯಗತ್ಯವಾಗಿತ್ತು. ಈ ಹಂತದಲ್ಲಿ ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಸಿಪಿಎಂನ ಜ್ಯೋತಿಬಸು ಪ್ರಧಾನಿಯಾಗಲಿ ಎನ್ನುವ ಪ್ರಸ್ತಾಪ ಮುಂದಿಡುವ ಮೂಲಕ ಸೋನಿಯಾ ಪ್ರಧಾನಿ ಆಸೆಗೆ ಮುಲಾಯಂ ತಣ್ಣೀರೆರಚಿದ್ದರು. ಇದಾದ ತಿಂಗಳಿನಲ್ಲೇ ಆಗ ಕಾಂಗ್ರೆಸ್‌ ನಾಯಕರಾಗಿದ್ದ ಶರದ್‌ ಪವಾರ್‌, ಸೋನಿಯಾರ ವಿದೇಶಿ ಮೂಲ, ಕಾಂಗ್ರೆಸ್‌ ಅಧ್ಯಕ್ಷೆಯ ಪ್ರಧಾನಿ ಪಟ್ಟದೆಡೆಗಿನ ಹಾದಿಗೆ ಮತ್ತಷ್ಟು ಅಡ್ಡಿಯಾಗಿದ್ದರು.

ಇದನ್ನು ಓದಿ: Mulayam Singh Yadav Death: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಸಂಸ್ಥಾಪಕ ಇನ್ನಿಲ್ಲ

3 ಬಾರಿ ಉತ್ತರ ಪ್ರದೇಶದ ಚುಕ್ಕಾಣಿ ಹಿಡಿದಿದ್ದ ಕುಸ್ತಿಪಟು ಮುಲಾಯಂ 
ಸ್ವಾತಂತ್ರ್ಯಾನಂತರದಲ್ಲಿ ಉತ್ತರಪ್ರದೇಶ ಕಂಡ ಪ್ರಮುಖ ರಾಜಕೀಯ ನಾಯಕರ ಪೈಕಿ ಮುಲಾಯಂ ಕೂಡಾ ಒಬ್ಬರು. ಎಟಾವಾ ಜಿಲ್ಲೆಯ ಸೈಫೈ ಗ್ರಾಮದ ಬಡ ಕುಟುಂಬದ 6 ಮಕ್ಕಳ ಪೈಕಿ ಒಬ್ಬರಾಗಿದ್ದ ಮುಲಾಯಂಗೆ ಬಾಲ್ಯದಲ್ಲಿ ಇದ್ದಿದ್ದು ಕುಸ್ತಿಪಟುವಾಗುವ ಕನಸು. ಈ ನಿಟ್ಟಿನಲ್ಲಿ ತರಬೇತಿ ಕೂಡಾ ಪಡೆದಿದ್ದರು. ಆದರೆ ಬಾಲ್ಯದಲ್ಲೇ ರಾಮ್‌ ಮನೋಹರ್‌ ಲೋಹಿಯಾ ಮತ್ತು ರಾಜ್‌ ನಾರಾಯಣ್‌ ಅವರ ಚಿಂತನೆಗಳಿಗೆ ಮನಸೋತ ಮುಲಯಾಂ ಕೇವಲ 15ನೇ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗಲು ಆರಂಭಿಸಿದರು. ಇದೇ ಗುಂಗಿನಲ್ಲೇ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿಯನ್ನೂ ಪಡೆದುಕೊಂಡರು.

ರಾಜಕೀಯ ಪ್ರವೇಶ
1967ರಲ್ಲಿ ಮುಲಾಯಂ ಜಸ್ವಂತ್‌ನಗರ್‌ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ನಂತರ 7 ಬಾರಿ ಇದೇ ಕ್ಷೇತ್ರದಿಂದ ಮತ್ತು ಒಮ್ಮೆ ಸಹಸ್ವಾನ್‌ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. 1980ರಲ್ಲಿ ಮುಲಾಯಂ ಲೋಕದಳ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗದರು. 1982ರಲ್ಲಿ ಯುಪಿ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾದರು. 1985ರಲ್ಲಿ ಲೋಕದಳ ವಿಭಜನೆಯಾದಾಗ ತಮ್ಮದೇ ಆದ ಕ್ರಾಂತಿಕಾರಿ ಮೋರ್ಚಾ ಪಕ್ಷ ಸ್ಥಾಪಿಸಿದರು. ಇದೇ ಪಕ್ಷದಿಂದ 1989ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ 1990ರಲ್ಲಿ ಕೇಂದ್ರದಲ್ಲಿ ವಿ.ಪಿ.ಸಿಂಗ್‌ ಸರ್ಕಾರ ಪತನಗೊಂಡ ಬಳಿಕ, ಚಂದ್ರಶೇಖರ್‌ ಅವರ ಜನತಾ ದಳ (ಸಮಾಜವಾದಿ)ಪಕ್ಷವನ್ನು ಮುಲಾಯಂ ಸೇರಿ, ಮುಖ್ಯಮಂತ್ರಿಯಾಗಿ ಮುಂದುವರೆದರು. 1991ರಲ್ಲಿ ಕಾಂಗ್ರೆಸ್‌, ಚಂದ್ರಶೇಖರ್‌ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದ ಬಳಿಕ, ಯುಪಿಯಲ್ಲೂ ಸರ್ಕಾರ ಪತನಗೊಂಡಿತು. 1991ರಲ್ಲಿ ನಡೆದ ಮಧ್ಯಂತರ ಯುಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. 1993ರಲ್ಲಿ ಕಾಂಗ್ರೆಸ್‌- ಜನತಾದಳ ಬೆಂಬಲದೊಂದಿಗೆ 2ನೇ ಬಾರಿ ಮುಖ್ಯಮಂತ್ರಿಯಾದರು. ಆದರೆ 2002ರಲ್ಲಿ ಬಿಜೆಪಿ ಮತ್ತು ಬಿಎಸ್‌ಪಿ ಜತೆಗೂಡಿ ಸರ್ಕಾರ ರಚಿಸಿದರು. ಈ ನಡುವೆ 2003ರಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯಿತು. ಈ ವೇಳೆ ಬಿಎಸ್‌ಪಿಯ ಹಲವು ಬಂಡಾಯ, ಪಕ್ಷೇತರ ಶಾಸಕರ ಬೆಂಬಲದೊಂದಿಗೆ 3ನೇ ಬಾರಿ ಸಿಎಂ ಪದವಿ ಏರಿದರು.

ಇದನ್ನೂ ಓದಿ: ಸಾಧನಾ ಗುಪ್ತಾ, ಮುಲಾಯಂ ಪ್ರೀತಿಗೆ ನಾಂದಿಯಾಯ್ತು ಆ ಘಟನೆ, ವರ್ಷಾನುಗಟ್ಟಲೇ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ!

ಸಮಾಜವಾದಿ ಪಕ್ಷ ಸ್ಥಾಪನೆ
1992ರಲ್ಲಿ ಮುಲಾಯಂ ತಮ್ಮದೇ ಆದ ಸಮಾಜವಾದಿ ಪಕ್ಷ ಸ್ಥಾಪಿಸಿದರು. 1993ರಲ್ಲಿ ಬಿಎಸ್‌ಪಿ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಅಂತಿಮವಾಗಿ ಜನತಾದಳ ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆ ಸಿಎಂ ಪದವಿ ಏರಿದರು.

ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ
ರಾಷ್ಟ್ರ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸುವ ಕನಸಿನೊಂದಿಗೆ ಮುಲಾಯಂ 1996ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಜೊತೆಗೆ 1996ರಲ್ಲಿ ರಕ್ಷಣಾ ಸಚಿವರಾಗಿಯೂ ನೇಮಕಗೊಂಡರು. ಬಳಿಕ 1998ರಲ್ಲಿ ನಡೆದ ಲೋಕಸಭೆ ಉಪಚುನಾವಣೆ, 1999, 2004, 2009, 2014, 2019ರಲ್ಲೂ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು.

3 ಬಾರಿ ಸಿಎಂ, ಕೇಂದ್ರ ಸಚಿವ
ಮುಲಾಯಂ 1989-91, 1993-95, 2003-07ರವರೆಗೆ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ. 1996-98, 1998-2004, 2009-14, 2014-19. 2019-2022ರವರೆಗೆ ಲೋಕಸಭಾ ಸದಸ್ಯ. 1996-98 ರಕ್ಷಣಾ ಸಚಿವ.

19 ತಿಂಗಳು ಸೆರೆಮನೆವಾಸ
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವೇಳೆ ಮುಲಾಯಂ ಸಿಂಗ್‌ ಸುಮಾರು 19 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು.

ಇಬ್ಬರು ಪತ್ನಿಯರು, ಒಬ್ಬನೇ ಪುತ್ರ
ಮುಲಾಯಂ ಮೊದಲ ಪತ್ನಿ ಹೆಸರು ಮಾಲತಿ ದೇವಿ. ಈ ದಂಪತಿ ಪುತ್ರನೇ ಅಖಿಲೇಶ್‌. ಆದರೆ ಮಗುವಿನ ಜನನದ ವೇಳೆ ಉಂಟಾದ ಆರೋಗ್ಯ ಸಮಸ್ಯೆಗೆ ಸಿಕ್ಕಿಕೊಂಡ ಮಾಲತಿ, 1973ರಿಂದ 2003ರವರೆಗೂ ಕೋಮಾದಲ್ಲಿ ಇದ್ದು ಬಳಿಕ ಸಾವನ್ನಪ್ಪಿದ್ದರು. ಇನ್ನು ಸಾಧನಾ ಗುಪ್ತಾರನ್ನೂ ಮುಲಾಯಂ ರಹಸ್ಯವಾಗಿ ಮದುವೆಯಾಗಿದ್ದರು. ಸಾಧನಾಗೆ ಮೊದಲ ಪತಿಯಿಂದ ಪ್ರತೀಕ್‌ ಯಾದವ್‌ ಎಂಬ ಪುತ್ರನಿದ್ದ. ಈತನ ಪತ್ನಿ ಅಪರ್ಣಾ ಯಾದವ್‌. ಸಾಧನಾ ಕೂಡಾ 2022ರಲ್ಲಿ ಸಾವನ್ನಪ್ಪಿದ್ದರು.

Follow Us:
Download App:
  • android
  • ios