Asianet Suvarna News Asianet Suvarna News

ಸಾಧನಾ ಗುಪ್ತಾ, ಮುಲಾಯಂ ಪ್ರೀತಿಗೆ ನಾಂದಿಯಾಯ್ತು ಆ ಘಟನೆ, ವರ್ಷಾನುಗಟ್ಟಲೇ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ!

* ಉತ್ತರ ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್‌ಗೆ ಪತ್ನಿ ವಿಯೋಗ

* ಹಲವಾರು ವರ್ಷ ಸಮಾಜದಿಂದ ತಮ್ಮಿಬ್ಬರ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ

* ಮೊದಲ ಪತ್ನಿ ಮೃತಪಟ್ಟಾಗಲೇ ಸಾಧನಾಗೆ ಪತ್ನಿಯ ಸ್ಥಾನಮಾನ ನೀಡಿದ್ದ ಮುಲಾಯಂ ಸಿಂಗ್ ಯಾದವ್

Love Story Of UP Former CM Mulayam Singh yadav And Sadhana Gupta pod
Author
Bangalore, First Published Jul 9, 2022, 4:22 PM IST

ಲಕ್ನೋ(ಜು.09): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಶನಿವಾರ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು. ಸಾಧನಾ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಸುಮಾರು 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಜುಲೈ 9 ಶನಿವಾರದಂದು ಕೊನೆಯುಸಿರೆಳೆದರು. ಸಿಕ್ಕಿರುವ ಮಾಹಿತಿಯ ಪ್ರಕಾರ ಸಾಧನಾ ಗುಪ್ತಾ ಅವರ ಅಂತಿಮ ವಿಧಿವಿಧಾನಗಳು ಇಟಾವಾದಲ್ಲಿ ನಡೆಯಲಿದೆ. ಆದರೆ, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.

1986 ರಲ್ಲಿ ಸಾಧನಾ ಅವರ ಮೊದಲ ಮದುವೆ

ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರು ಯುಪಿಯ ಇಟಾವಾಹ್‌ನ ಬಿಧುನಾ ತೆಹಸಿಲ್‌ ಮೂಲದವರು. 1986 ರಲ್ಲಿ, ಅವರು ಫರೂಕಾಬಾದ್‌ನ ಚಂದ್ರಪ್ರಕಾಶ್ ಗುಪ್ತಾ ಅವರನ್ನು ವಿವಾಹವಾದರು. ಮದುವೆಯ ನಂತರ ಸಾಧನಾ ಪ್ರತೀಕ್ ಎಂಬ ಮಗನಿಗೆ ಜನ್ಮ ನೀಡಿದರು. ಪ್ರತೀಕ್ ಯಾದವ್ ಹುಟ್ಟಿದ ಎರಡು ವರ್ಷಗಳ ನಂತರ ಸಾಧನಾ ಮತ್ತು ಚಂದ್ರಪ್ರಕಾಶ್ ಬೇರ್ಪಟ್ಟರು. ಇಬ್ಬರೂ ವಿಚ್ಛೇದನ ಪಡೆದರು. ಇದಾದ ನಂತರ ಸಾಧನಾ ಗುಪ್ತಾ ಅವರು ಆಗಿನ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸಂಪರ್ಕಕ್ಕೆ ಬಂದರು. ವಾಸ್ತವವಾಗಿ ಸಾಧನಾ ಸಹ ಸಮಾಜವಾದಿ ಪಕ್ಷದ ಕಾರ್ಯಕರ್ತೆ. ಮತ್ತೊಂದೆಡೆ, ಅಖಿಲೇಶ್ ಯಾದವ್ ಅವರ ಜೀವನಚರಿತ್ರೆ 'ಬದ್ಲಾವ್ ಕಿ ಲೆಹರ್' ನಲ್ಲಿಯೂ ಮುಲಾಯಂ ಸಿಂಗ್ ಮತ್ತು ಸಾಧನಾ ನಡುವಿನ ಸಂಬಂಧವನ್ನು ಉಲ್ಲೇಖಿಸಲಾಗಿದೆ. ಮುಲಾಯಂ ಅವರ ತಾಯಿ ಮೂರ್ತಿದೇವಿ ಅವರು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಆಗ ಸಾಧನಾ ಗುಪ್ತಾ ಮೂರ್ತಿ ದೇವಿಯ ಆರೈಕೆ ಮಾಡುತ್ತಿದ್ದರು.

ಸಾಧನಾ 2003 ರಲ್ಲಿ ಪತ್ನಿ ಸ್ಥಾನಮಾನವನ್ನು ಪಡೆದರು

ಅಖಿಲೇಶ್ ಯಾದವ್ ಅವರ ಜೀವನಚರಿತ್ರೆ 'ಬದ್ಲಾವ್ ಕಿ ಲೆಹರ್' ನಲ್ಲಿ ಒಮ್ಮೆ ಚಿಕಿತ್ಸೆಯ ಸಮಯದಲ್ಲಿ, ನರ್ಸ್ ಮೂರ್ತಿ ದೇವಿಗೆ ತಪ್ಪಾದ ಇಂಜೆಕ್ಷನ್ ನೀಡಲು ಹೊರಟಿದ್ದರು. ಆಗ ಅಲ್ಲೇ ಇದ್ದ ಸಾಧನಾ ಗುಪ್ತಾ ನರ್ಸ್‌ನ್ನು ತಡೆದಿದ್ದಾರೆ. ಅಂದು ಸಾಧನಾ ಅವರಿಂದಲೇ ಮುಲಾಯಂ ಅವರ ತಾಯಿಯ ಪ್ರಾಣ ಉಳಿದಿತ್ತು. ಮುಲಾಯಂ ಸಿಂಗ್ ಯಾದವ್ ಅವರಿಗೆ ಈ ವಿಷಯ ತಿಳಿದಾಗ, ಅವರು ತುಂಬಾ ಪ್ರಭಾವಿತರಾದರು ಮತ್ತು ಇದು ಅವರ ಸಂಬಂಧಕ್ಕೆ ನಾಂದಿಯಾಯಿತು. ಆ ಸಮಯದಲ್ಲಿ ಅಖಿಲೇಶ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಅಖಿಲೇಶ್ ಅವರ ತಾಯಿ, ಮುಲಾಯಂ ಸಿಂಗ್ ಅವರ ಮೊದಲ ಪತ್ನಿ ಮಾಲ್ತಿ ದೇವಿ ಅವರು 2003 ರಲ್ಲಿ ನಿಧನರಾದಾಗ, ಮುಲಾಯಂ ಸಿಂಗ್ ಸಾರ್ವಜನಿಕವಾಗಿ ಸಾಧನಾ ಗುಪ್ತಾ ಅವರಿಗೆ ತಮ್ಮ ಪತ್ನಿ ಸ್ಥಾನಮಾನವನ್ನು ನೀಡಿದರು. ಹೀಗಿರುವಾಗ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ತಮ್ಮ ತಂದೆಯ ಮೇಲೆ ತೀವ್ರ ಕೋಪಗೊಂಡಿದ್ದರು.

ಹಲವು ವರ್ಷಗಳಿಂದ ತೆರೆ ಹಿಂದೆ ಸಾಗಿತ್ತು ಮುಲಾಯಂ ಮತ್ತು ಸಾಧನಾ ಪ್ರೇಮಕಥೆ

1982 ರಿಂದ 1988 ರವರೆಗೆ ಮುಲಾಯಂ ಸಿಂಗ್ ಮತ್ತು ಸಾಧನಾ ಗುಪ್ತಾ ನಡುವೆ ಏನು ನಡೆಯುತ್ತಿದೆ ಎಂದು ತಿಳಿದಿದ್ದ ಏಕೈಕ ವ್ಯಕ್ತಿ ಅಮರ್ ಸಿಂಗ್. ಮುಲಾಯಂ ಪ್ರೀತಿಸುತ್ತಿರುವುದು ಅವರಿಗೆ ಚೆನ್ನಾಗಿ ಗೊತ್ತಿದ್ದರೂ ಯಾರ ಬಳಿಯೂ ಏನನ್ನೂ ಹೇಳಿರಲಿಲ್ಲ. ಮುಲಾಯಂ ಮನೆಯಲ್ಲಿ ಅವರ ಪತ್ನಿ ಮಾಲ್ತಿ ದೇವಿ ಮತ್ತು ಮಗ ಅಖಿಲೇಶ್ ಕೂಡ ಇದ್ದ ಕಾರಣ ಅಮರ್ ಸಿಂಗ್ ಮೌನ ವಹಿಸಿದದ್ದರು. ಆದರೆ 1988ರಲ್ಲಿ ಅನೇಕ ವಿಷಯಗಳು ಒಂದೇ ಬಾರಿಗೆ ಬದಲಾಯಿತು. ಈ ವೇಳೆ ಮುಲಾಯಂ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದು, ಸಾಧನಾ ಕೂಡ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಆ ವೇಳೆ ಅವರ ಮಡಿಲಲ್ಲಿ ಮಗುವೂ ಇತ್ತು. ಅಷ್ಟೇ ಅಲ್ಲ, ಇದೆಲ್ಲದರ ನಡುವೆ ಅಖಿಲೇಶ್ ಅವರನ್ನು ಸಾಧನಾಗೆ ಮುಲಾಯಂ ಪರಿಚಯಿಸಿದ್ದರು.

ಅಫಿಡವಿಟ್ ಸಲ್ಲಿಸಿದ ಬಳಿಕ ಹಲವು ರಹಸ್ಯಗಳು ಬಯಲು

ಇದೆಲ್ಲಾ ಮುಲಾಯಂ ಸಿಂಗ್ ಅವರ ಜೀವನದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ. ಆದರೆ ಈ ಮಧ್ಯೆ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 2, 2005 ರಂದು ಅಫಿಡವಿಟ್ ಸಲ್ಲಿಸಲಾಯಿತು. 1979ರಲ್ಲಿ 79 ಸಾವಿರ ಆಸ್ತಿ ಹೊಂದಿದ್ದ ಸಮಾಜವಾದಿ ಕೋಟಿಗಟ್ಟಲೆ ಆಸ್ತಿಯ ಒಡೆಯನಾದದ್ದು ಹೇಗೆ ಎಂದು ಪ್ರಶ್ನಿಸಲಾಗಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಮುಲಾಯಂ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. 2007ರ ವರೆಗೆ ಹಳೆಯ ಪುಟಗಳನ್ನು ಹುಡುಕಿದಾಗ ಮುಲಾಯಂ ಅವರಿಗೆ ಮತ್ತೊಬ್ಬ ಪತ್ನಿ ಮತ್ತು ಮಗು ಇರುವುದು ಬೆಳಕಿಗೆ ಬಂದಿದೆ. ಇದೆಲ್ಲ 1994 ರಿಂದಲೇ ಇತ್ತು ಎಂದೂ ಉಲ್ಲೇಖಿಸಲಾಗಿತ್ತು. 1994ರಲ್ಲಿಯೇ ಪ್ರತೀಕ್ ಗುಪ್ತಾ ಶಾಲೆಯ ದಾಖಲೆಗಳಲ್ಲಿ ಖಾಯಂ ವಿಳಾಸದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ  ಅಧಿಕೃತ ವಿಳಾಸವನ್ನು ಬರೆದಿದ್ದರು. ತಾಯಿಯ ಹೆಸರಿದ್ದಲ್ಲಿ ಸಾಧನಾ ಗುಪ್ತಾ ಮತ್ತು ತಂದೆಯ ಹೆಸರು ಎಂಎಸ್ ಯಾದವ್ ಎಂದು ಬರೆದಿದ್ದರು.

ಸಾಧನಾ ಗುಪ್ತಾ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ

ಮುಲಾಯಂ ಸಿಂಗ್ ಯಾದವ್ ಅವರು 2019 ರಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ ಸಾಧನಾ ಗುಪ್ತಾ ಅವರು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಸಾಧನಾ ಲಕ್ನೋದಲ್ಲಿ ಎರಡು ಮನೆಗಳನ್ನು ಹೊಂದಿದ್ದು, ಅವುಗಳ ಮೌಲ್ಯ ಸುಮಾರು 1.93 ಕೋಟಿ ಎಂದು ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಮುಲಾಯಂ ಸಿಂಗ್ ಅವರ ಅಫಿಡವಿಟ್ ಪ್ರಕಾರ, ಅವರ ಎರಡನೇ ಪತ್ನಿ ಸಾಧನಾ 2017-18ರ ಆರ್ಥಿಕ ವರ್ಷದಲ್ಲಿ ಸುಮಾರು 20 ಲಕ್ಷ ರೂಪಾಯಿ ಗಳಿಸಿದ್ದಾರೆ. ಆಸ್ತಿಯಿಂದ ಪಡೆದ ಬಾಡಿಗೆಯನ್ನು ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಅಫಿಡವಿಟ್‌ನಲ್ಲಿ ಸಾಧನಾ ಗುಪ್ತಾ ಗಳಿಸುವ ಮಾರ್ಗವನ್ನು ತಿಳಿಸಿದ್ದಾರೆ. ಇದರೊಂದಿಗೆ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟ ಹಣಕ್ಕೆ ಬಡ್ಡಿಯೂ ಸಿಗುತ್ತದೆ ಎಂದು ಉಲ್ಲೇಖಿಸಲಾಗಿದೆ. 

Follow Us:
Download App:
  • android
  • ios