ಭೋಪಾಲ್(ಏ.10)‌: ಆ್ಯಂಬುಲೆನ್ಸ್‌ನಲ್ಲಿ ಕೊರೋನಾ ರೋಗಿಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು ದಾರಿ ಮಧ್ಯೆ ವಾಹನವನ್ನು ನಿಲ್ಲಿಸಿ ಬೀದಿ ಬದಿಯ ವ್ಯಾಪಾರಿಯೊಬ್ಬನಿಂದ ಪಿಪಿಇ ಕಿಟ್‌ ಧರಿಸಿಯೇ ಕಬ್ಬಿನ ಹಾಲು ಕುಡಿದಿರುವ ಘಟನೆ ಮಧ್ಯ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಭೋಪಾಲ್‌ನ ರಾಜೇಂದ್ರ ಟಾಕೀಸ್‌ ಚೌಕದಲ್ಲಿ ಇಂಥದ್ದೊಂದು ಪ್ರಮಾದ ನಡೆದಿದ್ದು, ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಓರ್ವ ಆರೋಗ್ಯ ಸಿಬ್ಬಂದಿ ವ್ಯಾನ್‌ನಿಂದ ಇಳಿದುಬಂದು ಮಾಸ್ಕ್‌ ಅನ್ನು ತೆಗೆದು ಕಬ್ಬಿನ ಹಾಲನ್ನು ಸೇವಿಸಿದ್ದಾನೆ. ಈ ವೇಳೆ ಇನ್ನೊಬ್ಬ ಸಿಬ್ಬಂದಿ ವ್ಯಾನಿನ ಬಾಗಿಲನ್ನು ತೆರೆದು ಹೊರಗಡೆ ನಿಂತುಕೊಂಡಿದ್ದ. ಸ್ಥಳೀಯ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಆರೋಗ್ಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಆರೋಗ್ಯ ಸಿಬ್ಬಂದಿ, ‘ವ್ಯಾನ್‌ನಲ್ಲಿ ಇರುವ ವ್ಯಕ್ತಿಗೆ ಕೊರೋನಾ ಇದೆ. ನನಗೆ ಇಲ್ಲ. ಈಗ ನೆಮ್ಮದಿಯಿಂದ ಜ್ಯೂಸ್‌ ಕುಡಿಯಲು ಬಿಡು’ ಎಂದು ಉಡಾಫೆಯ ಉತ್ತರ ನೀಡಿದ್ದಾನೆ. ಈ ದೃಶ್ಯಗಳು ಮಾಧ್ಯಮಗಳು ಪ್ರಸಾರವಾಗುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿದೆ.