ಅಶೋಕ ನಗರ(ಫೆ.22): ಫೋನ್‌ ನೆಟ್‌ವರ್ಕ್ಗಾಗಿ ಜಾತ್ರೆಯಲ್ಲಿ ಇಡಲಾಗಿದ್ದ 50 ಅಡಿ ಎತ್ತರದ ತೂಗುಯ್ಯಾಲೆ (ತೊಟ್ಟಿಲು) ಮೊರೆ ಹೋದ ಮಧ್ಯಪ್ರದೇಶದ ಸಚಿವ ಬ್ರಜೇಂದ್ರ ಸಿಂಗ್‌ ಯಾದವ್‌ ಸದ್ಯ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ.

ಹೌದು, ಇಲ್ಲಿನ ಅಶೋಕ ನಗರ ಜಿಲ್ಲೆಯ ಅಂಖೋ ಗ್ರಾಮದಲ್ಲಿ ‘ಭಗವತ್‌ ಕಥಾ’ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. 50 ಅಡಿ ಎತ್ತರದ ತೂಗುಯ್ಯಾಲೆ ಈ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಈ ಕಾರ‍್ಯಕ್ರಮದಲ್ಲಿ ಹಾಜರಿದ್ದ ರಾಜ್ಯ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್‌ ಸಚಿವ ಯಾವದ್‌ ಅವರಿಗೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದರು. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಕರೆ ಮಾಡಲು ನೆಟ್‌ವರ್ಕ್ ಸರಿಯಾಗಿ ಇರದ ಕಾರಣ ಸಚಿವರು 50 ಅಡಿ ಎತ್ತರ ತೂಗುಯ್ಯಾಲೆ ಏರಿದ್ದರು.

ಸಚಿವರ ಈ ಫೋಟೋ ಮತ್ತು ವಿಡಿಯೋ ಸದ್ಯ ವೈರಲ್‌ ಆಗಿದ್ದು, ‘ಬಿಜೆಪಿ ಸರ್ಕಾರ ಡಿಜಿಟಲ್‌ ಇಂಡಿಯಾ ಬಗ್ಗೆ ಮಾತನಾಡುತ್ತದೆ. ಆದರೆ ವಾಸ್ತವ ಸ್ಥಿತಿ ಇದು’ ಎಂದು ನೆಟ್ಟಿಗರು ಆಡಿಕೊಂಡಿದ್ದಾರೆ.