ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದು ಕರೆದ ಮಧ್ಯಪ್ರದೇಶದ ಸಚಿವ ಕುನ್ವರ್‌ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಇನ್ನೊಂದೆಡೆ ಸಚಿವರ ಹೇಳಿಕೆಗೆ ಮಹಿಳಾ ಆಯೋಗ, ಬಿಜೆಪಿ ನಾಯಕರೂ ಕಿಡಿ ಕಾರಿದ್ದಾರೆ, ಈ ನಡುವೆ ಕ್ಷಮೆ ಕೇಳಲು ಸಿದ್ಧ ಎಂದು ಸಚಿವ ಕುನ್ವರ್‌ ಹೇಳಿದ್ದಾರೆ.

ನವದೆಹಲಿ (ಮೇ.15): ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದು ಕರೆದ ಮಧ್ಯಪ್ರದೇಶದ ಸಚಿವ ಕುನ್ವರ್‌ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಇನ್ನೊಂದೆಡೆ ಸಚಿವರ ಹೇಳಿಕೆಗೆ ಮಹಿಳಾ ಆಯೋಗ, ಬಿಜೆಪಿ ನಾಯಕರೂ ಕಿಡಿ ಕಾರಿದ್ದಾರೆ, ಈ ನಡುವೆ ಕ್ಷಮೆ ಕೇಳಲು ಸಿದ್ಧ ಎಂದು ಸಚಿವ ಕುನ್ವರ್‌ ಹೇಳಿದ್ದಾರೆ.

ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಕುನ್ವರ್‌, ‘ನಮ್ಮ ದೇಶದ ಪುತ್ರಿಯರ ಸಿಂದೂರ ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು’ ಎಂದು ಹೇಳಿದ್ದರು.

ಕರ್ನಲ್ ಸೋಫಿಯಾ ಕುರಿತ ಅವಹೇಳನಕಾರಿ ಮತ್ತು ಕೋಮು ಹೇಳಿಕೆ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್‌ ಗರಂ ಆಗಿದೆ. ಹೇಳಿಕೆ ಕುರಿತು ಸ್ವಯಂ ವಿಚಾರಣೆ ನಡೆಸಿದ ನ್ಯಾಯಾಲಯ ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಜೊತೆಗೆ ರಾಜ್ಯ ಪೊಲೀಸ್‌ ನಿರ್ದೇಶಕಗೆ ಪ್ರಾಥಮಿಕ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.

ಈ ನಡುವೆ ಶಾ ಹೇಳಿಯನ್ನು ಸ್ವಪಕ್ಷೀಯರೇ ವಿರೋಧಿಸಿದ್ದು ಬಿಜೆಪಿ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಬಿಜೆಪಿ ಸಚಿವರನ್ನು ಮೂರ್ಖ ಎಂದು ಕರೆದಿದ್ದಾರೆ. ‘ಕೆಲವು ಜನರು ಉತ್ಸಾಹದಲ್ಲಿ ಪ್ರಜ್ಞೆ ಕಳೆದುಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಖಂಡನೀಯ. ಶಾ ನಗುವ ವಸ್ತುವಾಗಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Colonel Sofiya Qureshi ಕುಟುಂಬಸ್ಥರ ಮೇಲೆ ದಾಳಿ ಎಂದು ಫೇಕ್ ಪೋಸ್ಟ್; ಕಿಡಿಗೇಡಿ ಅನೀಸ್ ಉದ್ದೀನ್ ಪತ್ತೆಗೆ ಮುಂದಾದ ಪೊಲೀಸರು

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್‌ ಎಕ್ಸ್‌ನಲ್ಲಿ ಈ ಬಗ್ಗೆ ಕಿಡಿ ಕಾರಿದ್ದು, ‘ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಮಹಿಳೆಯರ ಬಗ್ಗೆ ಈ ರೀತಿ ಅವಹೇಳನಕಾರಿ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ನೀಡುವುದು ದುರಾದೃಷ್ಟಕರ. ಇದು ಕೇವಲ ನಮ್ಮ ಸಮಾಜದಲ್ಲಿ ಮಹಿಳೆಯ ಗೌರವಕ್ಕೆ ದಕ್ಕೆ ತರುವುದಲ್ಲದೆ, ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರದ ಹೆಣ್ಣು ಮಕ್ಕಳಿಗೆ ಅವಮಾನ’ ಎಂದಿದ್ದಾರೆ.

ತಮ್ಮ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಲು ಸಿದ್ಧ ಎಂದು ಸಚಿವರು ಹೇಳಿದ್ದಾರೆ. ‘ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ 10 ಸಲ ಕ್ಷಮೆಯಾಚಿಸಲು ಸಿದ್ಧ, ಆಕೆಯನ್ನು ನನ್ನ ಸಹೋದರಿಗಿಂತ ಹೆಚ್ಚಾಗಿ ಗೌರವಿಸುವೆ’ ಎಂದಿದ್ದಾರೆ.