ವಿಷಾನಿಲ ಸೋರಿಕೆ, 11 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!
ಕೊರೋನಾ ನಡುವೆ ಮತ್ತೊಂದು ಆತಂಕ| ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ| ಇಬ್ಬರು ಮಕ್ಕಳು ಸೇರಿ 11 ಸಾವು| ಇನ್ನೂರಕ್ಕೂ ಅಧಿಕ ಮಂದಿ ಆರೋಗ್ಯ ಗಂಭೀರ
ವಿಶಾಖಪಟ್ಟಣ(ಮೇ.07) ದೇಶದಾದ್ಯಂತ ಕೊರೋನಾ ತಾಂಡವವಾಡುತ್ತಿದ್ದು, ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೀಗ ಈ ಸಂಕಟದ ಬೆನ್ನಲ್ಲೇ ಆಂಧ್ರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದೆ. ಈ ದುರಂತದಲ್ಲಿ ಇಬ್ಬರು ಪುಟ್ಟ ಮಕ್ಕಳು ಸೇರಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಇನ್ನೂರಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
"
ವೈಜಾಕ್ ಗ್ಯಾಸ್ ದುರಂತ, ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಕರೆದ ಪ್ರಧಾನಿ!
ವಿಶಾಖಪಟ್ಟಣಂನ ಆರ್ಆರ್ ವೆಂಕಟಾಪುರಂ ಗ್ರಾಮದ ಬಳಿ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದೆ. ಇಲ್ಲಿನ ಎಲ್ಜಿ ಪಾಲಿಮರ್ಸ್ ಇಂಡಸ್ಟ್ರಿ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಆಸುಪಾಸಿನ ಪ್ರದೇಶಕ್ಕೆ ವಿಷಾನಿಲ ಹರಡಿದೆ. ಇದರಿಂದ ಮುಂಜಾನೆ ವಾಕಿಂಗ್ಗೆ ಹೊರಗೆ ಬಂದಿದ್ದ ಅನೇಕ ಮಂದಿರು ಅಸ್ವಸ್ಥರಾಗಿ ರಸ್ತೆಯಲ್ಲೇ ಬಿದ್ದಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. 200ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಷಾನಿಯಲ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ. ವಿನಯ್ ಚಾಂದ್ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಬೇಕಾದ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಸಾಯನಿಕದಿಂದ ಮೈ, ಕಣ್ಣು ತುರಿಕೆ, ಉರಿಯಿಂದ ಪರದಾಡುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಮಧ್ಯಾಹ್ನ 11.45ಕ್ಕೆ ವಿಶೇಷ ವಿಮಾನದ ಮೂಲಕ ವಿಶಾಖಪಟ್ಟಣಕ್ಕೆ ತೆರಳಲಿದ್ದಾರೆ.
ಮರುಕಳಿಸಿದ ಭೋಪಾಲ್ ದುರಂತದ ನೆನಪು
ಆಂಧ್ರಪ್ರದೇಶದ ಈ ವಿಷಾನಿಲ ಸೋರಿಕೆ ಪ್ರಕರಣ 1984ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಭೋಪಾಲ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ನಡೆದಿದ್ದ ಗ್ಯಾಸ್ ಸೋರಿಕೆಯ ಕರಾಳ ಘಟನೆಯನ್ನು ನೆನಪಿಸಿದೆ. ವಿಶ್ವದ ಅತ್ಯಂತ ಘೋರ ವಿಷಾನಿಲ ದುರಂತ ಎನ್ನಲಾಗುವ ಭೋಪಾಲ್ ಗ್ಯಾಸ್ ಟ್ರಾಜಿಡಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಇದರಿಂದ ಸಮಸ್ಯೆಗೀಡಾಗಿದ್ದರು.