ಮಹಾರಾಷ್ಟ್ರ ಮೈತ್ರಿ ಅಯೋಮಯ: NCP, ಕಾಂಗ್ರೆಸ್ ನಿರ್ಧಾರ ಇಲ್ಲ!

ಮಹಾ ಸರ್ಕಾರ ಇನ್ನೂ ನಿಗೂಢ| ಸೋನಿಯಾ-ಪವಾರ್‌ ಭೇಟಿ ಬಳಿಕವೂ ಅಂತಿಮ ನಿರ್ಧಾರವಿಲ್ಲ| ಕಾಂಗ್ರೆಸ್‌-ಎನ್‌ಸಿಪಿ ಚರ್ಚೆ ಮುಂದುವರಿಕೆ, ಆ ಬಳಿಕ ಮುಂದಿನ ತೀರ್ಮಾನ: ಪವಾರ್‌| ಸಂಸತ್ತಿನಲ್ಲಿ ಎನ್‌ಸಿಪಿ ಹೊಗಳಿದ ಮೋದಿ ನಡೆಯಿಂದಲೂ ಅನುಮಾನ| ಎನ್‌ಸಿಪಿ ಜತೆಗೂಡಿ ಸರ್ಕಾರ ರಚನೆಗೆ ಬಿಜೆಪಿ ಯತ್ನಿಸುತ್ತಾ ಎಂಬ ಊಹಾಪೋಹಕ್ಕೆ ನಾಂದಿ

More Talks Needed On Maharashtra Sharad Pawar After Meeting Sonia Gandhi

ಮುಂಬೈ[ನ.19]: ‘ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರ ನಡುವಿನ ಭೇಟಿಯ ಬಳಿಕ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ನಡುವಿನ ಮೈತ್ರಿ ಘೋಷಣೆ ಆಗಬಹುದು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸ್ಪಷ್ಟಚಿತ್ರಣ ಸಿಗಬಹುದು’ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಈ ಭೇಟಿಯ ಬಳಿಕವೂ ಯಾವುದೇ ಅಂತಿಮ ನಿರ್ಧಾರ ಹೊರಬೀಳದೇ ಇರುವುದರಿಂದ ಮೈತ್ರಿ ಆಗುತ್ತಾ-ಇಲ್ಲವಾ ಎಂಬ ಬಗ್ಗೆ ಮತ್ತಷ್ಟುಕುತೂಹಲ ಸೃಷ್ಟಿಯಾಗಿದೆ. ಈ ನಡುವೆ, ಸಂಸತ್ತಿನಲ್ಲಿ ಎನ್‌ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ ಕಾರಣ ‘ಎನ್‌ಸಿಪಿ-ಬಿಜೆಪಿ ಮೈತ್ರಿ ಏರ್ಪಡುತ್ತಾ’ ಎಂಬ ಅನುಮಾನ ಉಂಟಾಗಿದೆ.

ಸೋಮವಾರ ಸೋನಿಯಾ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪವಾರ್‌, ‘ಸರ್ಕಾರ ರಚನೆ, ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಹಾಗೂ ಶಿವಸೇನೆ ಬಗ್ಗೆ ನಾವು ಏನೂ ಚರ್ಚಿಸಲಿಲ್ಲ. ಮಹಾರಾಷ್ಟ್ರದಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಿದೆವು. ಕಾಂಗ್ರೆಸ್‌-ಎನ್‌ಸಿಪಿ ನಾಯಕರರು ಮತ್ತೆ ಸಭೆ ಸೇರಿ ಭವಿಷ್ಯದ ರಾಜಕೀಯದ ಬಗ್ಗೆ ಚರ್ಚಿಸಲಿದ್ದಾರೆ’ ಎಂದಷ್ಟೇ ಹೇಳಿದರು. ಈ ಮೂಲಕ ಇನ್ನೂ ಯಾವುದೂ ಇತ್ಯರ್ಥವಾಗಿಲ್ಲ ಎಂಬ ಸುಳಿವು ನೀಡಿದರು.

ಮಹಾ ಬಿಕ್ಕಟ್ಟಿನ ನಡುವೆಯೂ ಎನ್ ಸಿಪಿ ಹಾಡಿ ಹೊಗಳಿದ ಮೋದಿ!

ಸೋನಿಯಾ-ಪವಾರ್‌ ಸಭೆಯ ವೇಳೆ ಶಿವಸೇನೆ ಜತೆಗಿನ ಮೈತ್ರಿ ವಿರೋಧಿಸುವ ಕೇರಳದ ಕಾಂಗ್ರೆಸ್‌ ಮುಖಂಡ ಎ.ಕೆ. ಆ್ಯಂಟನಿ ಅವರೂ ಉಪಸ್ಥಿತರಿದ್ದುದು ಇಲ್ಲಿ ಗಮನಾರ್ಹ.

ಏತನ್ಮಧ್ಯೆ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪರ ಇರುವ ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳಬಾರದು’ ಎಂದು ಮುಸ್ಲಿಂ ಸಂಘಟನೆಯೊಂದು ಸೋನಿಯಾಗೆ ಪತ್ರ ಬರೆದಿದೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಇಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

ಎನ್‌ಸಿಪಿ ಹೊಗಳಿದ ಮೋದಿ!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಗ್ಗಂಟು ಸೃಷ್ಟಿಯಾಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಗ್ಗೆ ರಾಜ್ಯಸಭೆಯಲ್ಲಿ ಸೋಮವಾರ ಹೊಗಳಿಕೆಯ ಮಳೆ ಸುರಿಸಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಶಿವಸೇನೆ ಜತೆ ಸರ್ಕಾರ ರಚಿಸಲು ಕಾಂಗ್ರೆಸ್‌ ಜತೆಗೂಡಿ ಎನ್‌ಸಿಪಿ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲೇ ಮೋದಿ ಅವರು ಎನ್‌ಸಿಪಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಹಾ ಬಿಕ್ಕಟ್ಟಿನ ನಡುವೆಯೂ ಎನ್ ಸಿಪಿ ಹಾಡಿ ಹೊಗಳಿದ ಮೋದಿ!

ರಾಜ್ಯಸಭೆಯ 250ನೇ ಕಲಾಪದಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ, ‘ಎನ್‌ಸಿಪಿ ಹಾಗೂ ಬಿಜು ಜನತಾದಳದ ಸಂಸದರು ಯಾವತ್ತೂ ಸದನದ ಬಾವಿಗೆ ಇಳಿದಿಲ್ಲ. ಆದರೂ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸದೇ ಯಾವ ರೀತಿ ವಿಚಾರಗಳನ್ನು ಪ್ರಸ್ತಾಪಿಸಬೇಕು ಎಂಬುದನ್ನು ಎನ್‌ಸಿಪಿ ಹಾಗೂ ಬಿಜೆಡಿಯಿಂದ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಲಿಯಬೇಕು’ ಎಂದು ಹೇಳಿದರು.

ಪವಾರ್‌ ಮಾತುಗಳಿಂದಲೂ ಅನುಮಾನ:

ವಿಶೇಷ ಎಂದರೆ ಮೋದಿ ಅವರು ಈ ರೀತಿ ಹೊಗಳಿದ ಬೆನ್ನಲ್ಲೇ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ ನಡವಳಿಕೆ ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗಿನ ಭೇಟಿಗೂ ಮುನ್ನ ‘ಸೋನಿಯಾ ಜತೆ ಮಾತುಕತೆಗೆ ಹೋಗುತ್ತೀರಾ’ ಎಂದು ಸಂಸತ್ತಿನ ಬಳಿ ಸುದ್ದಿಗಾರರು ಪ್ರಶ್ನಿಸಿದರು. ಆಗ ಪವಾರ್‌ ಅವರು, ‘ಯಾವ ಮಾತುಕತೆ?’ ಎಂದು ಪ್ರಶ್ನೆ ಮಾಡಿದರು.

ಅಲ್ಲದೆ, ‘ಬಿಜೆಪಿ ಹಾಗೂ ಶಿವಸೇನೆ ಜತೆಯಾಗಿ ಚುನಾವಣೆ ಎದುರಿಸಿವೆ. ಆ ಎರಡೂ ಪಕ್ಷಗಳು ತಮ್ಮ ದಾರಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು’ ಎಂದೂ ಹೇಳಿದರು.

Latest Videos
Follow Us:
Download App:
  • android
  • ios