ಕೆನಡಾದ ಟೊರೊಂಟೊದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸಿಧು ಮೂಸೆವಾಲಾ ಅವರ ಎರಡೂವರೆ ವರ್ಷದ ತಮ್ಮ ಸುಖ್‌ದೀಪ್ ಸಿಂಗ್ ಬಂದೂಕು ಸನ್ನೆ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಬಾಲಕನ ಪೋಷಕರ ವಿರುದ್ಧ ವಕೀಲರು ಮತ್ತು ಮಾನವ ಹಕ್ಕುಗಳ ಸಂಸ್ಥೆ ದೂರು ದಾಖಲಿಸಿದೆ. ಮಗುವಿಗೆ ಹಿಂಸಾಚಾರದ ಅನುಕರಣೆ ಮಾಡದಂತೆ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ಮನವಿ ಮಾಡಲಾಗಿದೆ.

ನಟ ಸಲ್ಮಾನ್​ ಖಾನ್​ ಜೊತೆ ಅತ್ಯಂತ ಸಮೀಪವರ್ತಿಯಾಗಿರುವ ಹಿನ್ನೆಲೆಯಲ್ಲಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಬಿಷ್ಣೋಯಿ ಗ್ಯಾಂಗ್​ 2022ರಲ್ಲಿ ಹತ್ಯೆ ಮಾಡಿತ್ತು. ಅವರ ಸಾವಿನ ನಂತರ ಅವರ ಅಪ್ಪ-ಅಮ್ಮನಿಗೆ ಮಗು ಹುಟ್ಟಿತ್ತು. ಅಂದರೆ ಸಿಧು ಅವರಿಗೆ ಸಹೋದರ ಹುಟ್ಟಿದ್ದ. ಅವನಿಗೆ ಈಗ ಎರಡೂವರೆ ವರ್ಷ ವಯಸ್ಸು. ಆದರೆ, ಈ ಬಾಲಕನ ಮೇಲೆ ಈಗ ಕೇಸ್​ ದಾಖಲಾಗಿದೆ! ಛೋಟಾ ಸಿಧು ಎಂದೇ ಬಿಂಬಿತ ಆಗಿರುವ ಅವರ ತಮ್ಮ ಸುಖ್‌ದೀಪ್ ಸಿಂಗ್ ಸಿಧು, ತಮ್ಮ ಅಣ್ಣನಂತೆಯೇ ಬಂದೂಕು ಸನ್ನೆ ಮಾಡಿರುವುದರಿಂದ ಈ ದೂರು!

ಕೆನಡಾದ ಟೊರೊಂಟೊದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಂದೂಕು ಸನ್ನೆ ಮಾಡಿದ್ದ ಬಾಲಕ. ಚಂಡೀಗಢ ಮೂಲದ ‘ವಕೀಲರು ಮತ್ತು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಸಂಸ್ಥೆ’ ಅಕ್ಟೋಬರ್ 17ರಂದು ಮಾನ್ಸಾ ಉಪ ಆಯುಕ್ತರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಧಿಕೃತ ದೂರು ಸಲ್ಲಿಸಿದೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ನವಕಿರಣ್ ಸಿಂಗ್ ಅವರು ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಮಗುವಿನ ಪೋಷಕರಾದ ಬಲ್ಕೌರ್ ಸಿಂಗ್ ಮತ್ತು ಚರಣ್ ಕೌರ್ ಅವರ ಹೆಸರಿನಲ್ಲಿ ಈ ದೂರು ದಾಖಲಿಸಿದ್ದಾರೆ. ಮಗುವಿಗೆ ಹಿಂಸಾಚಾರದ ಅನುಕರಣೆ ಮಾಡದಂತೆ ನೋಡಿಕೊಳ್ಳಲು ಪೋಷಕರಿಗೆ ಸೂಕ್ತ ಕೌನ್ಸಿಲಿಂಗ್ ನೀಡುವಂತೆ ಕೋರಿದೆ.

ಆಗಿದ್ದೇನು?

ಸುಖ್‌ದೀಪ್ ಸಿಂಗ್ ಸಿಧು, ಇದೇ 9ರಂದು ಕೆನಡಾದ ಟೊರೊಂಟೊದಲ್ಲಿ ನಡೆದ ‘ಸೈಂಡ್ ಟು ಗಾಡ್ ವರ್ಲ್ಡ್ ಟೂರ್’ನ ಆರಂಭಿಕ ಪ್ರದರ್ಶನದ ವೇಳೆ ವೇದಿಕೆಗೆ ಕರೆತರಲಾಗಿತ್ತು. ಈ ವೇಳೆ ಆತ ಪಿಸ್ತೂಲ್​ನಿಂದ ಗುಂಡು ಹಾರಿಸುವಂತಹ ಸನ್ನೆಗಳನ್ನು ಮಾಡಿ, ಬಂದೂಕಿನ ಶಬ್ದವನ್ನು ಅನುಕರಿಸಿದ್ದ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂಥ ಹಿಂಸಾಚಾರದ ಸನ್ನೆ ಸರಿಯಲ್ಲ ಎನ್ನುವುದು ದೂರುದಾರರ ವಾದ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೊಗಳಲ್ಲಿ, ಮಗುವಿನ ಸುತ್ತಮುತ್ತಲಿದ್ದ ಕೆಲವರು ಆತನನ್ನು ಅಂತಹ ಸನ್ನೆಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿದೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಹಿಂಸಾತ್ಮಕ ವರ್ತನೆಗಳನ್ನು ಪ್ರೋತ್ಸಾಹಿಸುವುದು ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು ಮತ್ತು ಹಿಂಸೆಯನ್ನು ಸಹಜವೆಂದು ಪರಿಗಣಿಸಲು ದಾರಿ ಮಾಡಿಕೊಡಬಹುದು ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಕೌನ್ಸಿಲಿಂಗ್ ವ್ಯವಸ್ಥೆಗೆ ಮನವಿ

ಮಗುವಿಗೆ ತನ್ನ ದಿವಂಗತ ಅಣ್ಣನ ನೆನಪಿನಾರ್ಥವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ತಮ್ಮ ಯಾವುದೇ ತಕರಾರಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ ಸಾರ್ವಜನಿಕ ವೇದಿಕೆಗಳಲ್ಲಿ ಗನ್ ಸನ್ನೆಗಳನ್ನು ಮಾಡಿಸುವುದನ್ನು ಮತ್ತು ಹಿಂಸಾಚಾರವನ್ನು ಪ್ರಚೋದಿಸುವುದನ್ನು ಮಾತ್ರ ವಿರೋಧಿಸುವುದಾಗಿ ತಿಳಿಸಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಅರ್ಹ ಮಕ್ಕಳ ಕೌನ್ಸಿಲರ್ ಮೂಲಕ ಪೋಷಕರಿಗೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡಬೇಕು ಮತ್ತು ಮಗು ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.