ನವದೆಹಲಿ(ಜೂ.11): ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನ ಭಾಗಶಃ ಆನ್‌ಲೈನ್‌ನಲ್ಲಿ ನಡೆಯುವ ಸಾಧ್ಯತೆಯಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಹೈಬ್ರೀಡ್‌ ಸೀಟಿಂಗ್‌’ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದ ಸಿದ್ಧತೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ಈ ಕುರಿತು ಸುಳಿವು ನೀಡಿದ್ದಾರೆ.

ಅಧಿಕಾರಿಗೆ ಕೊರೋನಾ ಸಂಸತ್ತಿನ 2 ಮಹಡಿ ಸೀಲ್‌ಡೌನ್‌!

ಮುಂಗಾರು ಅಧಿವೇಶನ ಸಾಮಾನ್ಯವಾಗಿ ಜುಲೈ ಮೊದಲ ವಾರ ಆರಂಭವಾಗುತ್ತದೆ. ಅದರಂತೆ ಈಗ ಸಿದ್ಧತೆ ಆರಂಭವಾಗಿದ್ದು, ಆಯಾ ದಿನ ಯಾವ ಸಂಸದರು ಕಲಾಪದಲ್ಲಿ ಪಾಲ್ಗೊಳ್ಳುವುದು ಅಗತ್ಯವಿದೆಯೋ ಅವರಿಗೆ ಮಾತ್ರ ಭೌತಿಕವಾಗಿ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. ಅಂದರೆ, ಯಾವ ಸಂಸದರು ಪ್ರಶ್ನೆ ಕೇಳಲು ಅಥವಾ ವಿಷಯ ಪ್ರಸ್ತಾಪಿಸಲು ಅವಕಾಶ ಕೇಳಿದ್ದಾರೋ ಅವರನ್ನು ಮತ್ತು ಯಾವ ಸಂಸದರನ್ನು ರಾಜಕೀಯ ಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲು ನಿಯೋಜಿಸಿವೆಯೋ ಅವರನ್ನು ಮಾತ್ರ ಕಲಾಪಕ್ಕೆ ಕರೆಸಬೇಕು. ಇನ್ನುಳಿದವರು ಮನೆಯಿಂದಲೇ ಆನ್‌ಲೈನ್‌ ಮೂಲಕ ಕಲಾಪದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆದಿದೆ.

ಹೀಗೆ ಮಾಡಿದಾಗ ಲೋಕಸಭೆ ಮತ್ತು ರಾಜ್ಯಸಭೆಗೆ ಆಗಮಿಸುವ ಸಂಸದರ ಸಂಖ್ಯೆ ಕಡಿಮೆಯಾಗುತ್ತದೆ. ಆಗ ಸಾಮಾಜಿಕ ಅಂತರ ಕಾಯ್ದುಕೊಂಡು ‘ಹೈಬ್ರೀಡ್‌ ಸೀಟಿಂಗ್‌’ ರೀತಿಯಲ್ಲಿ ಸಂಸದರಿಗೆ ದೂರ-ದೂರ ಆಸನದ ವ್ಯವಸ್ಥೆ ಮಾಡಬಹುದು ಎಂದು ಯೋಜಿಸಲಾಗಿದೆ. ಮಂಗಳವಾರ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆ ಚೇರ್ಮನ್‌ ವೆಂಕಯ್ಯ ನಾಯ್ಡು ಅವರು ಉಭಯ ಸದನಗಳ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ಕುರಿತು ಸಲಹೆ ಬಂದಿದೆ. ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ.

ಈ ಬಾರಿ ಸಂಸತ್ ಅಧಿವೇಶನ ನಡೆಸಬೇಕಾ, ಬೇಡ್ವಾ? ದ್ವಂದದಲ್ಲಿ ಸರ್ಕಾರ

ಇಡೀ ಅಧಿವೇಶನವನ್ನು ಆನ್‌ಲೈನ್‌ ಮೂಲಕ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗವಾದ ಎನ್‌ಐಸಿ ಹೇಳಿದೆ. ಹೀಗಾಗಿ ಭಾಗಶಃ ಆನ್‌ಲೈನ್‌ ಅಧಿವೇಶನ ನಡೆಸುವ ಸಾಧ್ಯತೆಯೇ ಹೆಚ್ಚಿದೆ. ಈ ಹಿಂದೆ ರಾಜ್ಯಸಭೆಯ ಕಲಾಪವನ್ನು ಲೋಕಸಭೆಗೆ ಸ್ಥಳಾಂತರಿಸಿ, ಲೋಕಸಭೆಯ ಕಲಾಪವನ್ನು ಸೆಂಟ್ರಲ್‌ ಹಾಲ್‌ ಅಥವಾ ವಿಜ್ಞಾನ ಭವನದಲ್ಲಿ ನಡೆಸುವ ಬಗ್ಗೆ ಯೋಚಿಸಲಾಗಿತ್ತು. ಆದರೆ, ಆಗಲೂ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆ ಯೋಚನೆ ಕೈಬಿಡಲಾಗಿದೆ ಎಂದು ಹೇಳಲಾಗಿದೆ.