ಈ ಬಾರಿ ಸಂಸತ್ ಅಧಿವೇಶನ ನಡೆಸಬೇಕಾ, ಬೇಡ್ವಾ? ದ್ವಂದದಲ್ಲಿ ಸರ್ಕಾರ
ಮಾನ್ಸೂನ್ ಶುರು ಆದ ಮೇಲೆ ಜುಲೈ ಕೊನೆಯಲ್ಲಿ ಸೇರಬೇಕಾದ ಸಂಸತ್ತಿನ ಅಧಿವೇಶನವನ್ನು ಈ ಬಾರಿ ನಡೆಸಬೇಕಾ, ಬೇಡವಾ ಎಂಬ ಬಗ್ಗೆ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗಿಲ್ಲ.
ಬೆಂಗಳೂರು (ಮೇ. 29): ಮಾನ್ಸೂನ್ ಶುರು ಆದ ಮೇಲೆ ಜುಲೈ ಕೊನೆಯಲ್ಲಿ ಸೇರಬೇಕಾದ ಸಂಸತ್ತಿನ ಅಧಿವೇಶನವನ್ನು ಈ ಬಾರಿ ನಡೆಸಬೇಕಾ, ಬೇಡವಾ ಎಂಬ ಬಗ್ಗೆ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗಿಲ್ಲ.
ಮಾರ್ಚ್ ಕೊನೆಯ ವಾರದಿಂದ ಪ್ರತಿ ತಿಂಗಳು ನಡೆಯುವ ಸಂಸದರ ಸಲಹಾ ಸಮಿತಿ ಸಭೆಗಳು ಕೂಡ ನಡೆದಿಲ್ಲ. ಒಂದು ವೇಳೆ ಸಂಸದರ ಸಭೆಯೋ, ಅಧಿವೇಶನವೋ ನಡೆಯಬೇಕೆಂದರೆ ವಿಮಾನ ಹಾರಾಟ ಶುರು ಆಗಬೇಕು. ಅದು ಶುರು ಆದರೂ ಸಂಸದರು ವಿಮಾನದಲ್ಲಿ ಬಂದರೆ ಕ್ವಾರಂಟೈನ್‌ನಲ್ಲಿ ಇರಬೇಕು.
ತಬ್ಲೀಘಿ ಮುಖ್ಯಸ್ಥನನ್ನು ಬಂಧಿಸಲು ಸರ್ಕಾರ ಹಿಂದೇಟು ಹಾಕಲು ಇದು ಕಾರಣವಂತೆ!
ಆಕಸ್ಮಾತ್ ಒಬ್ಬರಿಗೆ ಸೋಂಕು ತಗುಲಿದರೆ ಅಧಿವೇಶನ ನಡೆದಾಗ ಪ್ರಧಾನಿ ಸೇರಿದಂತೆ ಎಲ್ಲರಿಗೂ ತಗಲುವ ಸಾಧ್ಯತೆ ಹೆಚ್ಚು. ಇನ್ನು ಪಾರ್ಲಿಮೆಂಟ್ ಅಧಿವೇಶನ ಶುರು ಆಗದೆ ವಿಧಾನಸಭೆ ಅಧಿವೇಶನ ಕರೆಯುವುದು ಸೂಕ್ತ ಅಲ್ಲ. ಹೀಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಎರಡು ಬಾರಿ ಸಭೆ ಸೇರಿದರೂ ನಿರ್ಣಯಕ್ಕೆ ಬರಲಾಗುತ್ತಿಲ್ಲ.
ಮಂತ್ರಿಗಳು ದಿಲ್ಲಿ ಬಿಡೋದಿಲ್ಲ!
ವಿಮಾನ ಶುರು ಆದ ಹುರುಪಿನಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಬಂದು ಮೊಮ್ಮಗು ನೋಡಿಕೊಂಡು ಸದಾನಂದ ಗೌಡರು ಅಷ್ಟೇ ವೇಗದಲ್ಲಿ ಮತ್ತೆ ದೆಹಲಿಗೆ ಮರಳಿದ್ದಾರೆ. ಇದನ್ನು ನೋಡಿ 60 ದಿನಗಳಿಂದ ದಿಲ್ಲಿಯಲ್ಲಿಯೇ ಉಳಿದು ಬೇಸತ್ತಿದ್ದ ಅನೇಕ ಕೇಂದ್ರ ಮಂತ್ರಿಗಳು ಕ್ಷೇತ್ರಕ್ಕೆ ಹೋಗುವ ಪ್ಲಾನ್ ಕ್ಯಾನ್ಸಲ್ ಮಾಡಿ ದಿಲ್ಲಿಯಲ್ಲಿಯೇ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.
ಒಬ್ಬ ಹಿರಿಯ ಮಂತ್ರಿ ಧೈರ್ಯ ಮಾಡಿ, ‘ಊರಿಗೆ ಹೋಗುತ್ತೇನೆ ಅನುಮತಿ ಕೊಡಿ’ ಎಂದು ಕೇಳಲು ಹೋಗಿದ್ದಕ್ಕೆ ಪ್ರಧಾನಿ, ‘ನೀವು ಇಡೀ ದೇಶಕ್ಕೆ ಮಂತ್ರಿಗಳು. ಕ್ಷೇತ್ರವನ್ನು ಇಲ್ಲಿಂದಲೇ ಕುಳಿತು ನೋಡಿಕೊಳ್ಳಿ. ಇಲಾಖೆ ಕೆಲಸ ಯಾರು ಮಾಡೋರು? ನಾನು ಹೇಳುವವರೆಗೆ ದಿಲ್ಲಿ ಬಿಡಬೇಡಿ’ ಎಂದರಂತೆ.
ಪಂಜಾಬ್‌ನಲ್ಲಿ ಮದ್ಯದಂಗಡಿ ಡ್ರಾಮಾ
ಪಂಜಾಬ್‌ನಲ್ಲಿ ಕಾಂಗ್ರೆಸ್ ಕ್ಯಾಬಿನೆಟ್ ಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿ ನಡುವೆ 20 ದಿನದಿಂದ ಮಹಾಭಾರತವೇ ನಡೆಯುತ್ತಿದೆ. ಮದ್ಯದ ಅಂಗಡಿಗಳನ್ನು ತೆರೆಯುವ ಕುರಿತಂತೆ ನಡೆದ ಕ್ಯಾಬಿನೆಟ್ ಸಭೆಯ ಚರ್ಚೆಯಲ್ಲಿ ಯಾವ ಪರಿ ಬಿಸಿ ಏರಿತು ಎಂದರೆ, ಮುಖ್ಯಮಂತ್ರಿ ಬಿಟ್ಟು ಉಳಿದ ಎಲ್ಲ ಮಂತ್ರಿಗಳು, ‘ಮುಖ್ಯ ಕಾರ್ಯದರ್ಶಿ ಕೆ.ಬಿ.ಎಸ್. ಸಿದ್ದು ಮೀಟಿಂಗ್‌ನಲ್ಲಿ ಇದ್ದರೆ ನಾವು ಬರೋದೇ ಇಲ್ಲ’ ಎಂದು ಹೊರಗೆದ್ದು ಹೋಗಿಯೇ ಬಿಟ್ಟಿದ್ದಾರೆ.
ತನ್ನ ನಂಬಿಕಸ್ಥ ಅಧಿಕಾರಿ ಜೊತೆ ನಿಲ್ಲುವುದೋ, ಮಂತ್ರಿಗಳ ಮಾತು ಕೇಳುವುದೋ ಗೊತ್ತಾಗದೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ನಿನ್ನೆ ಎಲ್ಲ ಕ್ಯಾಬಿನೆಟ್ ಮಂತ್ರಿಗಳನ್ನು ಮನೆಗೇ ಕರೆದು ಸಮಾಧಾನ ಮಾಡಿ ರಮಿಸಲು ಪ್ರಯತ್ನ ಮಾಡುತ್ತಿದ್ದಾರೆ. ಚೀಫ್ ಸೆಕ್ರೆಟರಿ ಸಾಹೇಬರು ಮದ್ಯದ ಅಂಗಡಿ ತೆರೆಯುವ ವಿಚಾರದಲ್ಲಿ ರಾಜಕಾರಣಿಗಳ ಬಗ್ಗೆ ಆಡಿದ ಒಂದು ಹಾಸ್ಯದ ಮಾತು ಮಂತ್ರಿಗಳ ಸಿಟ್ಟಿಗೆ ಕಾರಣವಂತೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ