ನವದೆಹಲಿ(ಮೇ.30): ರಾಜ್ಯಸಭೆ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕಿರುವುದು ಶುಕ್ರವಾರ ದೃಢಪಟ್ಟಿದೆ. ಈ ಮೂಲಕ ಸಂಸತ್‌ ಭವನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ವರ ಪೈಕಿ ಮೂವರಿಗೆ ಲಾಕ್‌ಡೌನ್‌ 2.0 ಅಂತ್ಯವಾಗಿ ಸಂಸತ್‌ ಕಚೇರಿ ಕೆಲಸ ಪುನಾರಂಭಿಸಿದ ಬಳಿಕ ಸೋಂಕು ತಗುಲಿದೆ. ಸದ್ಯ ನಿರ್ದೇಶಕ ಶ್ರೇಣಿಯ ಅಧಿಕಾರಿಯಲ್ಲಿ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆಯೇ ಸಂಸತ್‌ ಕಟ್ಟಡದ 2 ಅಂತಸ್ತನ್ನು ಸೀಲ್‌ ಮಾಡಿ, ಸೋಂಕು ನಿವಾರಕ ಔಷಧ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಸಂಸತ್ತಿಗೆ ಪ್ರವೇಶಿಸುವ ಎಲ್ಲರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಎಲ್ಲಾ ವಾಹನಗಳಿಗೂ ಸೋಂಕು ನಿವಾರಕ ಔಷಧ ಸಿಂಪಡಿಸಿ ಒಳಬಿಡಲಾಗುತ್ತಿದೆ.