* ಮುಂಗಾರು ಮಳೆ ಹಿಗ್ಗಿದ್ದು, ಇಡೀ ದೇಶವನ್ನೇ ವ್ಯಾಪಿಸಿದೆ* ಜುಲೈನಲ್ಲಿ ಉತ್ತಮ ಮಳೆ ಸಾಧ್ಯತೆ: ಐಎಂಡಿ* ಉಷ್ಣ ಅಲೆಯಲ್ಲಿ ತತ್ತರಿಸುತ್ತಿದ್ದ ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಮಳೆ 

ನವದೆಹಲಿ(ಜು.03): ನಿಗದಿತ ದಿನಾಂಕಕ್ಕಿಂತ ಆರು ದಿನಗಳ ಮೊದಲೇ ಮುಂಗಾರು ಮಳೆ ಹಿಗ್ಗಿದ್ದು, ಇಡೀ ದೇಶವನ್ನೇ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

‘ಈ ಹಿಂದೆ ಅಂದಾಜಿಸಿದಂತೆ ಜು. 8ರ ಬದಲು ಆರು ದಿನಗಳ ಮೊದಲೇ ನೈಋುತ್ಯ ಮಾನ್ಸೂನ್‌ ಶನಿವಾರ ಇಡೀ ದೇಶವನ್ನೇ ವ್ಯಾಪಿಸಿದೆ’ ಎಂದು ಐಎಂಡಿ ತಿಳಿಸಿದೆ.

ಈ ಹಿಂದೆಯೂ ಕೂಡಾ ಜೂ.1 ರಂದು ಕೇರಳವನ್ನು ನೈಋುತ್ಯ ಮಾನ್ಸೂನ್‌ ಪ್ರವೇಶಿಸಲಿದೆ ಎಂದು ಐಎಂಡಿ ಅಂದಾಜಿಸಿತ್ತು. ಆದರೆ ಅದಕ್ಕೂ 3 ದಿನ ಮೊದಲೇ ಮೇ. 29 ರಂದು ಕೇರಳಕ್ಕೆ ಮಾನ್ಸೂನ್‌ ಪ್ರವೇಶವಾಗಿತ್ತು. ನೈಋುತ್ಯ ಮಾನ್ಸೂನ್‌ ಪ್ರವೇಶದೊಂದಿಗೆ ಉಷ್ಣ ಅಲೆಯಲ್ಲಿ ತತ್ತರಿಸುತ್ತಿದ್ದ ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಮಳೆ ಆರಂಭವಾಗಿದೆ.

ಕೃಷಿಯಾಧಾರಿತ ದೇಶವಾದ ಭಾರತಕ್ಕೆ ನೈಋುತ್ಯ ಮುಂಗಾರು ಮಳೆಯು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ದೇಶವು ಶೇ. 8ರಷ್ಟುಮಳೆಯ ಕೊರತೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಾನ್ಸೂನ್‌ ಮಳೆಯು ಇನ್ನಷ್ಟುಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹಮಾಮಾನ ತಜ್ಞರು ಜುಲೈನಲ್ಲಿ ಉತ್ತಮ ಮಳೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ.

ದೇಶದಲ್ಲಿ ಜೂನ್‌ನಲ್ಲಿ ಶೇ.8ರಷ್ಟುಮಳೆ ಕೊರತೆ

ಕಳೆದ 2 ವರ್ಷ ಜೂನ್‌ ತಿಂಗಳಲ್ಲಿ ಹೆಚ್ಚಾಗಿ ಸುರಿದಿದ್ದ ಮುಂಗಾರು ಮಳೆ ಈ ವರ್ಷ ದೇಶದಲ್ಲಿ ಶೇ.8ರಷ್ಟುಕುಂಠಿತಗೊಂಡಿದೆ. ಈ ವರ್ಷದ ಜೂನ್‌ನಲ್ಲಿ ದೇಶದಲ್ಲಿ ಸರಾಸರಿ 15.23 ಸೆಂ.ಮೀ. ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತಲೂ ಕಡಿಮೆಯಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಭಾರತದ ಸರಾಸರಿ ಮಳೆಯ ಪ್ರಮಾಣ 16.53 ಸೆಂ.ಮೀ.

ಇನ್ನು ಕರ್ನಾಟದಲ್ಲೂ ಜೂನ್‌ನಲ್ಲಿ ಮಳೆಯ ಕೊರತೆ ಎದುರಾಗಿದ್ದು, ಒಟ್ಟಾರೆ 14.5 ಸೆಂ.ಮೀ. ಮಳೆಯಾಗಿದೆ. ಕರ್ನಾಟಕದಲ್ಲಿ ಸಾಮಾನ್ಯ ಮಳೆಯ ಪ್ರಮಾಣ ಶೇ.19.1 ಸೆಂ.ಮೀ ಆಗಿದೆ.

ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು 18 ರಾಜ್ಯಗಳು ಈ ಬಾರಿ ಮಳೆಯ ಕೊರತೆ ಎದುರಿಸಿವೆ. ಇದು ಕಳೆದ 7 ವರ್ಷಗಳಲ್ಲೇ ಜೂನ್‌ನಲ್ಲಿ ಬಿದ್ದ ಕಡಿಮೆ ಮಳೆ ಪ್ರಮಾಣವಾಗಿದೆ. ಈ ಬಾರಿ ನೈಋುತ್ಯ ಮಾನ್ಸೂನ್‌ ಮೇ 29ರಂದು ಕೇರಳಕ್ಕೆ ಪ್ರವೇಶ ಪಡೆದರೂ, ಅದರ ಪ್ರಗತಿ ಮಂದಗತಿಯಲ್ಲಿದೆ. ಈ ಬಾರಿ ದಕ್ಷಿಣ ಪರ್ಯಾಯ ದ್ವೀಪ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಭಾರತಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ.

ಭಾರತದಲ್ಲಿ ಮಾನ್ಸೂನ್‌ ಮಳೆ ಹೆಚ್ಚಾಗಿ ಬೀಳುವ ತಿಂಗಳು ಜೂನ್‌ ಆಗಿದೆ. ಈ ತಿಂಗಳಿನಲ್ಲಿ ಮಳೆಯ ಏರಿಳಿತ ಹೆಚ್ಚಾಗಿರುತ್ತದೆ. ಜುಲೈನಲ್ಲಿ ಮಳೆ ಹೆಚ್ಚಾಗಬಹುದು ಎಂದು ಹವಾಮಾನ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿಯಲ್ಲಿ ಈ ವರ್ಷದ ಜೂನ್‌ನಲ್ಲಿ ಶೇ.-70ರಷ್ಟುಮಳೆ ಕೊರತೆಯಾಗಿದೆ. ಉಳಿದಂತೆ ಗುಜರಾತ್‌ನಲ್ಲಿ ಶೇ.-54, ಜಾರ್ಖಂಡ್‌ನಲ್ಲಿ ಶೇ.-49, ಒಡಿಶಾದಲ್ಲಿ ಶೇ.-37, ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಶೇ.-34, ಮಹಾರಾಷ್ಟ್ರದಲ್ಲಿ ಶೇ.-30, ಉತ್ತರಾಖಂಡದಲ್ಲಿ ಶೇ.-29, ಮಿಜೋರಾಂನಲ್ಲಿ ಶೇ.-26ರಷ್ಟುಮಳೆಯಾಗಿದೆ.