ಆಮ್ ಆದ್ಮಿ ಪಾರ್ಟಿಗೆ ಸಂಕಷ್ಟ ಹೆಚ್ಚಾಗಿದೆ. ಒಬ್ಬರ ಹಿಂದೊಬ್ಬರು ನಾಯಕರು ಜೈಲು ಸೇರುತ್ತಿದ್ದಾರೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಬಳಿಕ ಇದೀಗ ಸಂಸದ ಸಂಜಯ್ ಸಿಂಗ್ ಅರೆಸ್ಟ್ ಆಗಿದ್ದಾರೆ. 

ನವದೆಹಲಿ(ಅ.04) ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಸತ್ಯೇಂದ್ರ ಜೈನ್ ಹಾಗೂ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ. ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಂಸದ ಸಂಜಯ್ ಸಿಂಗ್ ಬಂಧನವಾಗಿದೆ. ದೆಹಲಿ ಅಬಕಾರಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಲಾಯ ಇಂದು ಸಂಸದ ಸಂಜಯ್ ಸಿಂಗ್ ಮನೆ ಮೇಲೆ ದಾಳಿ ನಡೆಸಿತ್ತು. ಇದೀಗ ಸಂಜೆ ವೇಳೆ ಸಂಜಯ್ ಸಿಂಗ್‌ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಸಂಜಯ್ ಸಿಂಗ್ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಳಗ್ಗೆಯಿಂದಲೇ ಸಂಜಯ್ ಸಿಂಗ್ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದರು. ಸತತ 10 ಗಂಟೆ ವಿಚಾರಣೆ ಬಳಿಕ ಸಂಜಯ್ ಸಿಂಗ್‌ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. 

ಸುಪ್ರೀಂ ಬೆನ್ನಲ್ಲೇ ಹೈಕೋರ್ಟ್‌ನಿಂದಲೂ ಆಪ್‌ಗೆ ಶಾಕ್, ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಣೆ!

ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ಚಾರ್ಜ್‌ಶೀಟ್‌ನಲ್ಲಿ ಸಂಜಯ್ ಸಿಂಗ್ ಹೆಸರೂ ಕೂಡ ಇದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮದ್ಯವರ್ತಿಯಾಗಿರುವ ದಿನೇಶ್ ಆರೋರ, ವಿಚಾರಣೆಯಲ್ಲಿ ಸಂಜಯ್ ಸಿಂಗ್ ಹೆಸರನ್ನೂ ಹೇಳಿದ್ದ. ಪಾರ್ಟಿಯೊಂದರಲ್ಲಿ ಸಂಸದ ಸಂಜಯ್ ಸಿಂಗ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಎಂದಿದ್ದ. ಇದಕ್ಕೆ ಪೂರಕ ದಾಖಲೆ ಕಲೆಹಾಕಿರುವ ಇಡಿ ಅಧಿಕಾರಿಗಳು ಇದೀಗ ಅಕ್ರಮ ಹಣವರ್ಗಾವಣೆ ಪ್ರಕರಣದಡಿ ಸಂಜಯ್ ಸಿಂಗ್‌ ಬಂಧಿಸಲಾಗಿದೆ.

ಸಂಜಯ್ ಸಿಂಗ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದರು. ಆಪ್ ನಾಯಕರ ಮೇಲೆ ಸತತ ದಾಳಿ ನಡೆಸಲಾಗುತ್ತಿದೆ. ಇದೀಗ ಸಂಜಯ್ ಸಿಂಗ್ ಮನೆ ಮೇಲೆ ದಾಳಿ ನಡೆಲಾಗಿದೆ. ಸತತ ಶೋಧ ನಡೆಸಿರುವ ಇಡಿ ಅಧಿಕಾರಿಗಳಿಗೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇದೀಗ ಅರವಿಂದ್ ಕೇಜ್ರಿವಾಲ್‌ಗೆ ಮುಖಭಂಗವಾಗಿದೆ. ಒಂದೆಡೆ ಹಲವು ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡಿರುವ ಇಡಿ ಅಧಿಕಾರಿಗಳು ಸಂಜಯ್ ಸಿಂಗ್‌ನನ್ನೂ ಬಂಧಿಸಿದ್ದಾರೆ.

ರಾಜಸ್ಥಾನ ಸಿಎಂ ಹಾಗೂ ಪುತ್ರನಿಗೆ ಸಂಕಷ್ಟ: ಬಿಜೆಪಿ ಸಂಸದರಿಂದ ಇ.ಡಿ.ಗೆ ದೂರು

ದೆಹಲಿ ಅಬಕಾರಿ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಮನೀಶ್ ಸಿಸೋಡಿಯಾರನ್ನು ಬಂದಿಸಲಾಗಿದೆ. ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಇದೀಗ ಜಾಮೀನಿಗಾಗಿ ಹರಸಾಹಸ ಪಡುತ್ತಿದ್ದಾರೆ.