ಬ್ರಾಹ್ಮಣರು, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ತಮ್ಮ 'ಪ್ರತ್ಯೇಕತೆಯನ್ನು' ಬಿಟ್ಟು 'ಭಾರತ ಮಾತೆಯ ಪುತ್ರರು' ಎಂದು ಬಂದರೆ ಆರ್‌ಎಸ್‌ಎಸ್ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಭಾಗವತ್ ಹೇಳಿದರು. 

ಬೆಂಗಳೂರು (ನ.9): ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ತಮ್ಮ ಮಾತನ್ನು ಮುಂದುವರಿಸಿದ ಅವರು, ಹಿಂದೂ ಒಂದು ಧರ್ಮವಲ್ಲ, ಆದರೆ ಭಾರತದ ಸ್ಥಳೀಯರಾಗಿರುವ ಯಾರಾದರೂ ಹಿಂದೂ ಎಂದು ಪ್ರತಿಪಾದಿಸಿದ್ದಾರೆ. ಬ್ರಾಹ್ಮಣರು, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ತಮ್ಮ "ಪ್ರತ್ಯೇಕತೆಯನ್ನು" ಬಿಟ್ಟು "ಭಾರತ ಮಾತೆಯ ಪುತ್ರರು" ಎಂದು ಬಂದರೆ ಆರ್‌ಎಸ್‌ಎಸ್ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಭಾಗವತ್ ಹೇಳಿದರು.

ಬೆಂಗಳೂರಿನಲ್ಲಿ '100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಆರೆಸ್ಸೆಸ್‌ ಸೇರಲು ಅವಕಾಶ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದರು.

"ಸಂಘದಲ್ಲಿ ಬ್ರಾಹ್ಮಣರಿಗೆ ಅವಕಾಶವಿಲ್ಲ. ಸಂಘದಲ್ಲಿ ಬೇರೆ ಯಾವುದೇ ಜಾತಿಗೆ ಅವಕಾಶವಿಲ್ಲ. ಯಾವುದೇ ಮುಸ್ಲಿಮರಿಗೆ ಅವಕಾಶವಿಲ್ಲ, ಸಂಘದಲ್ಲಿ ಕ್ರಿಶ್ಚಿಯನ್ನರಿಗೆ ಅವಕಾಶವಿಲ್ಲ. ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ಮುಸ್ಲಿಮರು, ಕ್ರಿಶ್ಚಿಯನ್ನರು, ಯಾವುದೇ ಪಂಗಡದವರು - ವಿವಿಧ ಪಂಗಡಗಳ ಜನರು ಸಂಘಕ್ಕೆ ಬರಬಹುದು ಆದರೆ ನಿಮ್ಮ ಪ್ರತ್ಯೇಕತೆಯನ್ನು ಹೊರಗಿಟ್ಟು ಬರಬೇಕು" ಎಂದು ಅವರು ಹೇಳಿದರು.

"ನಿಮ್ಮ ವಿಶೇಷತೆಗೆ ಸ್ವಾಗತ. ಆದರೆ ನೀವು ಶಾಖೆ ಒಳಗೆ ಬಂದಾಗ, ನೀವು ಭಾರತ ಮಾತೆಯ ಪುತ್ರನಾಗಿ, ಈ ಹಿಂದೂ ಸಮಾಜದ ಸದಸ್ಯರಾಗಿ ಬರುತ್ತೀರಿ. ಮುಸ್ಲಿಮರು ಶಾಖೆಗೆ ಬರುತ್ತಾರೆ, ಕ್ರಿಶ್ಚಿಯನ್ನರು ಶಾಖೆಗೆ ಬರುತ್ತಾರೆ, ಹಿಂದೂ ಸಮಾಜ ಎಂದು ಕರೆಯಲ್ಪಡುವ ಎಲ್ಲಾ ಇತರ ಜಾತಿಗಳಂತೆ, ಅವರು ಸಹ ಶಾಖೆಗೆ ಬರುತ್ತಾರೆ. ಆದರೆ ನಾವು ಅವರನ್ನು ಲೆಕ್ಕಿಸುವುದಿಲ್ಲ, ಮತ್ತು ಅವರು ಯಾರೆಂದು ನಾವು ಕೇಳುವುದಿಲ್ಲ. ನಾವೆಲ್ಲರೂ ಭಾರತ ಮಾತೆಯ ಪುತ್ರರು. ಸಂಘವು ಹೀಗೆ ಕಾರ್ಯನಿರ್ವಹಿಸುತ್ತದೆ..." ಎಂದಿದ್ದಾರೆ.

ಸಂಘ ನೀನು ಯಾರು ಎಂದು ಕೇಳುವುದಿಲ್ಲ. ಸಂಘ ಯಾರಿಗೂ ಏನನ್ನು ನೀಡುವುದಿಲ್ಲ. ಸಂಘ ಕೇವಲ ಕೇಳಿಸಿಕೊಳ್ಳುತ್ತದೆ. ಬ್ರಾಹ್ಮಣರಿಗೆ ಬೇರೆ ಶಾಲೆ, ಇತರರಿಗೆ ಬೇರೆ ಶಾಲೆ ಎಂದು ಡಿವೈಡ್ ಮಾಡುವುದಿಲ್ಲ. ಶಾಖೆಗೆ ಬನ್ನಿ. ಭಾರತ ಮಾತೆಗೆ ನೀವೂ ನಿಮ್ಮ ಕೆಲಸ ಮಾಡಿ ಎಂದಿದ್ದಾರೆ. ದೇಶದ 140 ಕೋಟಿ ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆಯೆ ಹಿಂದು ರಾಷ್ಟ್ರ ಆಗುತ್ತದೆ ಎಂದರು.

ನಾವು ಯಾರಿಗೂ ಬೇಲಿ ಹಾಕೋದಿಲ್ಲ

ಇದು ಹಿಂದುಸ್ತಾನ ಇದು ಹಿಂದು ರಾಷ್ಟ್ರ. ಇದನ್ನು ಯಾವತ್ತೂ ಬದಲಾವಣೆ ಮಾಡಲು ಆಗುವುದಿಲ್ಲ. ಇದು ನಮ್ಮ ಮೂಲ. ಸಂಘದ ಶಾಖೆಗೆ ತೃತಿಯಲಿಂಗಿಗಳು ಸಹ ಬರಬಹುದು. ಸಂಘದ ಪ್ರಾರ್ಥನೆ, ಧ್ವಜ ಪ್ರಣಾಮ ಮಾಡುತ್ತಾರೋ, ಯಾರೆಲ್ಲಾ ಇದನ್ನು ಹಿಂದುರಾಷ್ಟ್ರ ಎನ್ನೊತ್ತಾರೊ ಅವರೆಲ್ಲಾ ಸಂಘದ ಶಾಖೆಗೆ ಬರಬಹುದು. ನಾವು ಯಾರಿಗೂ ಬೇಲಿ ಹಾಕುವುದಿಲ್ಲ ಎಂದಿದ್ದಾರೆ.

ಸ್ವತಂತ್ರ ಭಾರತದಲ್ಲಿ ನೋಂದಣಿ ಕಡ್ಡಾಯವಲ್ಲ

ಸಂಘ ಇನ್ನೂ ನೋಂದಣಿ ಆಗಿಲ್ಲವಲ್ಲ ಎನ್ನುವ ಪ್ರಶ್ನೆಗೆ, '1925 ರಲ್ಲಿ ಸಂಘ ಸ್ಥಾಪನೆಯಾಯಿತು. ಬ್ರಿಟಿಷರ ಕಾಲದಲ್ಲಿ ಸಂಘ ನೋಂದಣಿ ಆಗುವುದನ್ನು ನೀವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರ ವಿರುದ್ಧವೇ ನಾವು ಹೋರಾಟ ಮಾಡಿದ್ದು. ಸ್ವತಂತ್ರ ಭಾರತದಲ್ಲಿ ನೋಂದಣಿ ಕಡ್ಡಾಯವಲ್ಲ. ಆರೆಸ್ಸೆಸ್‌ ಸ್ವತಂತ್ರ ಸಂಸ್ಥೆ ಎಂದು ಐಟಿ, ಕೋರ್ಟ್‌ ಹೇಳಿದೆ. ಮೂರು ಸಲ ಬ್ಯಾನ್ ಆಗಿದ್ದೇವೆ. ಕೋರ್ಟ್ ಬ್ಯಾನ್ ತೆಗೆದುಹಾಕಿದೆ. ಸಂಘ ಅಸಂವಿಧಾನಿಕವಾಗಿಲ್ಲ. ಹಿಂದೂ ಧರ್ಮ ಕೂಡ ನೋಂದಣಿ ಆಗಿಲ್ಲ. ಬಲಿಷ್ಟ ಭಾರತ ಕಟ್ಟುವುದೇ ಗುರಿ. ಅದಕ್ಕಾಗಿ ಹಿಂದೂ ಸಮಾಜವನ್ನ ಸಿದ್ಧ ಮಾಡುತ್ತಿದ್ದೇವೆ ಎಂದಿದ್ದಾರೆ.

ಜಾತಿ, ಧರ್ಮಗಳ ಹೆಸರಲ್ಲಿ ಸಂಘ ಏನೂ ಮಾಡೋದಿಲ್ಲ

ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆ ಇರಬಾರದು. ಜಾತಿ, ಧರ್ಮಗಳ ಹೆಸರದಲ್ಲಿ ಸಂಘ ಏನೂ ಮಾಡುವುದಿಲ್ಲ. ಸಂಘದ ಬಗ್ಗೆ ಟೀಕೆ ಮಾಡುತ್ತಾರೆ. ಅನುಮಾನ ಸೃಷ್ಟಿಸುವ ರೀತಿ ಮಾತನಾಡುತ್ತಾರೆ. ಆದರೆ, ನಾವು ಎಲ್ಲದಕ್ಕೂ ಪ್ರತಿಕ್ರಿಯೆ ನೀಡೋದಿಲ್ಲ. ಮಾಡಲು ಸಾಕಷ್ಟು ಕೆಲಸವಿದೆ. ಟೀಕೆ ಫೇಮಸ್ ಆಗುತ್ತದೆ. ಕರ್ನಾಟಕದಲ್ಲೂ ಆದೇ ಆಗುತ್ತಿದೆ. ಅದಕ್ಕೆ ನಾವ್ಯಾಕೆ ಸಪೋರ್ಟ್ ಮಾಡಬೇಕು. ಸ್ವಯಂ ಸೇವಕರಿಗೆ ಎಲ್ಲ ರಾಜಕೀಯ ಪಕ್ಷಗಳ ಬಾಗಿಲು ಬಂದ್ ಆಗಿತ್ತು. ಹಾಗಾಗಿ ಬಿಜೆಪಿಗೆ ಹೋದರು. ಬೇರೆ ಪಕ್ಷಗಳಲ್ಲಿ ಸ್ವಯಂ ಸೇವಕರು ಯಾಕಿಲ್ಲ ಎಂದು ಆ ಪಕ್ಷದವರನ್ನೇ ಕೇಳಿ? ನಾವು ರಾಷ್ಟ ನೀತಿಯನ್ನ ಬೆಂಬಲಿಸುತ್ತೇವೆ. ರಾಜನೀತಿಯನ್ನಲ್ಲ ಎಂದಿದ್ದಾರೆ. 3700ಕ್ಕೂ ಹೆಚ್ಚು ಪ್ರಚಾರಕರಿದ್ದಾರೆ. ಪ್ರತಿ ವರ್ಷ 350ಕ್ಕೂ ಹೆಚ್ಚು ಜನ ಸೇರುತ್ತಾರೆ. 6 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ ಎಂದರು.

ಭಾರತ, ಪಾಕ್‌ ಜೊತೆ ಶಾಂತಿಯನ್ನೇ ಬಯಸುತ್ತದೆ

ಭಾರತ ಎಂದಿಗೂ ಪಾಕಿಸ್ತಾನದ ಜೊತೆ ಶಾಂತಿಯನ್ನೇ ಬಯಸುತ್ತದೆ. ಆದರೆ ಪಾಕಿಸ್ತಾನ ಅದನ್ನ ಬಯಸುವುದಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲೇ ನಾವು ಅರ್ಥ ಮಾಡಿಸಬೇಕಾಗುತ್ತದೆ. ಮುಂದೊಂದು ದಿನ ಪಾಕಿಸ್ತಾನ ಅರ್ಥ ಮಾಡಿಕೊಳ್ಳಬಹುದು. ದೇಶದ ಗಡಿ ಬಂದ್ ಮಾಡಿದ್ದಕ್ಕೆ ಮಣಿಪುರದಲ್ಲಿ ಗಲಾಟೆ ಸೃಷ್ಟಿಯಾಯಿತು. ಆದರೆ ಬೇರೆಯದೇ ರೀತಿಯಲ್ಲಿ ಅದನ್ನ ನಮ್ಮಲ್ಲಿನ ಕೆಲವರು ಬಿಂಬಿಸಿದರು. ಭಾರತದ ಗಡಿ ನಿರ್ಮಾಣ ಅಸ್ವಾಭಾವಿಕವಾಗಿದೆ. ಬಾಂಗ್ಲಾದಲ್ಲಿ ಅಡುಗಮನೆಯಾದರೆ, ಭಾರತದಲ್ಲಿ ಬಾತ್ ರೂಮ್ ಆಗಿದೆ. ಗಡಿ ರೇಖೆ ಬರೆದ ವ್ಯಕ್ತಿಯೇ ಪೆನ್‌ ತೆಗೆದುಕೊಂಡು ಗೆರೆ ಎಳೆದಿದ್ದೇನೆ ಎಂದಿದ್ದಾನೆ.

ಜಾತಿ ಜಾತಿಗಳ ವಿಭಜನೆ ಮಾಡೋದೇ ರಾಜಕಾರಣಿಗಳು

ರಾಜಕಾರಣಿಗಳು ಜಾತಿ ಜಾತಿಗಳ ವಿಭಜನೆ ಮಾಡುತ್ತಾರೆ. ನಾವೆಲ್ಲ ಒಂದೇ ಎಂದು ನೀವ್ಯಾಕೆ ಹೇಳಲ್ಲ. ಭಾರತೀಯ ನಾಗರೀಕರೆಲ್ಲರೂ ಇದನ್ನ ವಿರೋಧಿಸಬೇಕು. ಒಂದೇ ಶತಮಾನದಲ್ಲಿ ಮೂರು ಖಂಡ ಮತಾಂತರವಾಗಿದೆ. ಆದರೆ ಭಾರತ ಹಾಗಾಗಿಲ್ಲ. ಐನೂರು ವರ್ಷ ಕಳೆದರೂ, ಮತಾಂತರಿಗಳು ಇಂದಿಗೂ ಮೈನಾರಿಟಿ ಆಗಿದ್ದಾರೆ. ಒಂದು ಜಾತಿ ಒಂದು ಕೆಲಸ ಎಂಬ ಪದ್ದತಿ ಬೆಳೆದುಬಂದಿದೆ. ಆದರೆ ಈಗ ಯಾರು ಬೇಕಾದರೂ ಯಾವುದೇ ಕೆಲಸ ಮಾಡಬಹುದು. ಜಾತಿಯನ್ನ ಮರೆಯಬೇಕಿದೆ. ಸಂಘದಲ್ಲಿ ಜಾತಿಯಿಂದ ಗುರುತಿಸೋದಿಲ್ಲ. ನಮ್ಮ ಜಾತಿಯನ್ನೇ ಮರೆಯುತ್ತೇವೆ. ರಾಜಕೀಯ ಕಾರಣದಿಂದ ಜಾತಿ, ಅಸ್ಪೃಷ್ಯತೆ ಇಂದಿಗೂ ಇದೆ. ಮೀಸಲಾತಿ ಮುಂದುವರೆಯಬೇಕು. ಅಸ್ಪೃಷತೆ, ಅಸಮಾನತೆ ಎಲ್ಲ ಮೊದಲು ದೂರವಾಗಬೇಕು ಎಂದು ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

ಆರೆಸ್ಸೆಸ್‌ನ ರಾಜಕೀಯ ಪಕ್ಷವಿಲ್ಲ

ಆರೆಸ್ಸೆಸ್‌ನ ಯಾವುದೇ ಪೊಲಿಟಕಲ್ ಪಾರ್ಟಿ ಅಲ್ಲ. ಎಲ್ಲದೂ ನಮ್ಮದೆ ಪಕ್ಷ. ಆದರೆ ರಾಷ್ಟ್ರನೀತಿ ಯಾವ ಪಾರ್ಟಿಯಲ್ಲಿ ಇರುತ್ತದೆಯೊ ಅವರಿಗೆ ನಮ್ಮ ಬೆಂಬಲ. ನಾವು ಸಮಾಜಕ್ಕೆ ಹೇಳುತ್ತೇವೆ. ಇಂತವರಲ್ಲಿ ರಾಷ್ಟ್ರ ನೀತಿ ನೀತಿ ಇದೆ ಅಂತಾ. ಇವರಿಗೆ ಬೆಂಬಲ ನೀಡಿ ಎಂದು ಹೇಳುತ್ತೇವೆ ಎಂದಿದ್ದಾರೆ.

ಬ್ರಹ್ಮಚರ್ಯ ಮತ್ತು ಸನ್ಯಾಸಿ ಸಮಾಜದ ಒಂದು ಭಾಗ

ಗೃಹಸ್ಥಶ್ರಾಮ ಮುಖ್ಯವೊ ಬ್ರಹ್ಮಚರ್ಯ ಮುಖ್ಯವೊ ಎನ್ನೋದು ಮುಖ್ಯವಲ್ಲ. ಎಲ್ಲವೂ ಅಗತ್ಯ ಇದೆ. ನಾಲ್ಕು ಆಶ್ರಮ ಇದ್ದೆ ಇದೆ. ಅದು ಮುಂದೆಯೂ ಇರುತ್ತದೆ. ಗೃಹಸ್ಥ, ಸನ್ಯಾಸಿ, ಬ್ರಹ್ಮಚರ್ಯಮ ವಾನಪ್ರಸ್ಥ. ಬ್ರಹ್ಮಚರ್ಯ ಮತ್ತು ಸನ್ಯಾಸಿ ಸಮಾಜದ ಒಂದು ಭಾಗ. ಸಂಘದಲ್ಲಿ 3500 ಪ್ರಚಾರಕರು ಇದ್ದಾರೆ. ಎಲ್ಲಾ ಗೃಹಸ್ಥರು ಸನ್ಯಾಸಿ ಆಗಬೇಕು ಎಂದು ಸಂಘ ಹೇಳುವುದಿಲ್ಲ. ಪ್ರಚಾರಕ್ಕೆ ಫುಲ್ ಟೈಮ್ ಇದ್ದಾರೆ. ಅವರು ಓಡಾಟ ಮಾಡುತ್ತಾರೆ ಎಂದರು.

ನ್ಯೂಸ್ ಪೇಪರ್ ಓದುತ್ತೀರಾ? ಸೋಶಿಯಲ್ ಮೀಡಿಯಾ ನೋಡುತ್ತಿರಾ? ಎನ್ನುವ ಪ್ರಶ್ನೆಗೆ, ನಾನು ನ್ಯೂಸ್ ಪೇಪರ್ ಓದುತ್ತೇನೆ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು ಓದುತ್ತೇನೆ. ಸೋಶಿಯಲ್ ಮೀಡಿಯಾ ನೋಡೋದಿಲ್ಲ. ಮಾಧ್ಯಮ ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಮಾಧ್ಯಮ ಸಮಾಜದ ಒಂದು ಭಾಗ. ಮೊದಲು ವಿಕಿಪೀಡಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಈಗ ಸಾಕಷ್ಟು ಬೇರೆ ಬೇರೆ ವೆಬ್‌ಸೈಟ್‌ ಇದೆ. ಜನರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಇದೆ ಎಂದರು.