ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಕಷ್ಟಗಳ ಸರಮಾಲೆ ಶುರುವಾಗಿದೆ. ಸೂರತ್ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಬಿಹಾರದ ಪಾಟ್ನಾ ಕೋರ್ಟ್ ಏಪ್ರಿಲ್ 2 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಪಾಟ್ನಾ ಕೋರ್ಟ್‌ನಲ್ಲಿರುವ ಪ್ರಕರಣ ಏನು? ಇಲ್ಲಿದೆ ವಿವರ.

ಪಾಟ್ನಾ(ಮಾ.30): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿದೆ. ಈ ಕುರಿತು 4 ವರ್ಷಗಳ ಬಳಿಕ ಸೂರತ್ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಪ್ರಕರಣದ ಹಗ್ಗಜಗ್ಗಾಟ ಇನ್ನೂ ಮುಗಿದಿಲ್ಲ. ಇದರ ನಡುವೆ ಪಾಟ್ನಾ ಕೋರ್ಟ್, ಏಪ್ರಿಲ್ 2 ರಂದು ಖುದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇದು ಕೂಡ ಮೋದಿ ಸಮುದಾಯವನ್ನು ಅವಮಾನಿಸಿದ ಪ್ರಕರಣ. ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಡಿಫಮೇಶನ್ ಕೇಸ್ ದಾಖಲಿಸಿದ್ದರು. ಇದರ ವಿಚಾರಣೆಗೆ ಹಾಜರಾಗಲು ಪಾಟ್ನಾ ಕೋರ್ಟ್ ರಾಹುಲ್ ಗಾಂಧಿಗೆ ಸೂಚನೆ ನೀಡಿದೆ.

ರಾಹುಲ್ ಗಾಂಧಿ 2019ರ ಚುನಾವಣೆಯಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಎಲ್ಲಾ ಕಳ್ಳರು ಮೋದಿ ಹೆಸರಲ್ಲೇ ಯಾಕಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ. ಇನ್ನು ಹುಡುಕಿದರೆ ಮತ್ತೆ ಕೆಲ ಮೋದಿ ಸಿಗುತ್ತಾರೆ ಎಂದು ಮೋದಿ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದರು. ಈ ಪ್ರಕರಣದ ವಿರುದ್ಧ ಗುಜರಾತ್ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಈ ಪ್ರಕರಣದ ತೀರ್ಪು ಈಗ ರಾಜಕೀಯ ಬಡಿದಾಟಕ್ಕೆ ಕಾರಣವಾಗಿದೆ. ಇದೇ ಹೇಳಿಕೆ ವಿರುದ್ಧ ಸುಶೀಲ್ ಕುಮಾರ್ ಮೋದಿ, 2019ರಲ್ಲಿ ಪಾಟ್ನಾ ಕೋರ್ಟ್‌ನಲ್ಲಿ ಕ್ರಿಮಿನಲ್ ಡಿಫಮೇಶ್ ಕೇಸ್ ದಾಖಲಿಸಿದ್ದಾರೆ.

ಅನರ್ಹ ಹೇಳಿಕೆ ನೀಡಿದ ಕೋಲಾರದಿಂದ ರಾಹುಲ್ ಗಾಂಧಿ ಕರ್ನಾಟಕ ಚುನಾವಣಾ ಪ್ರಚಾರ!

ಈ ಪ್ರಕರಣದಲ್ಲಿ ಜುಲೈ 6 ರಂದು ರಾಹುಲ್ ಗಾಂಧಿಗೆ ಪಾಟ್ನಾ ಕೋರ್ಟ್ ಜಾಮೀನು ಮಂಜುರು ಮಾಡಿತ್ತು. ಇದೀಗ ಎಪ್ರಿಲ್ 2 ರಂದು ಖುದ್ದು ವಿಚಾರಣಗೆ ಹಾಜರಾಗುವಂತೆ ಕೋರಿ ಸೂಚನೆ ನೀಡಿದೆ. ರಾಹುಲ್ ಗಾಂಧಿ ಹಿಂದುಳಿದ ವರ್ಗವನ್ನು ನಿಂದಿಸಿದ್ದಾರೆ. ಹಿಂದುಳಿದ ಸಮುದಾಯದವರೆಲ್ಲರು ಕಳ್ಳರು ಎಂದಿದ್ದಾರೆ. 2019ರಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ. ಜಾಮೀನು ಪಡೆದಿರುವ ರಾಹುಲ್ ಗಾಂಧಿಗೆ ಕೋರ್ಟ್ ಸೂಚನೆ ನೀಡಿದೆ. ಏಷ್ಟೇ ವರ್ಷಗಳಾದರೂ ಸತ್ಯ ಹೊರಬರಲಿದೆ. ಇದಕ್ಕೆ ಕಾಂಗ್ರೆಸ್ ಬೆಲೆ ತೆರಲೇಬೇಕು ಎಂದು ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಸೂರತ್ ಕೋರ್ಟ್ ತೀರ್ಪಿನಿಂದ ರಾಹುಲ್ ಗಾಂಧಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿಗೆ ಅಧಿಕೃತ ಸರ್ಕಾರಿ ಬಂಗಲೇ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು. 2005ರಲ್ಲಿ ಅಧಿಕೃತ ಸರ್ಕಾರಿ ಬಂಗಲೆ ಪಡೆದುಕೊಂಡಿದ್ದ ರಾಹುಲ್ ಗಾಂಧಿ, ಇದೀಗ ಅನಿವಾರ್ಯವಾಗಿ ತೆರವು ಮಾಡಿದ್ದಾರೆ.

ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!

ಇತ್ತ ಪಾಟ್ನಾ ಕೋರ್ಟ್ ಮೋದಿ ಸರ್ನೇಮ್ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗಲು ಸೂಚಿಸಿರುವುದು ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ. ಇದೂ ಕೂಡ ಕ್ರಿಮಿನಲ್ ಕೇಸ್ ಆಗಿರುವ ಕಾರಣ ರಾಹುಲ್ ಗಾಂಧಿ ತಲೆನೋವು ಹೆಚ್ಚಾಗಿದೆ. ಇತ್ತ ಕಾಂಗ್ರೆಸ್ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದೆ. ಸದ್ಯ ನಡೆಯುತ್ತಿರುವ ಪ್ರತಿಭಟನೆಯನ್ನು ದೊಡ್ಡ ಮಟ್ಟದಲ್ಲಿ ಮಾಡಲು ಮುಂದಾಗಿದೆ.