2019ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಭಾರಿ ಬೆಲೆ ತೆತ್ತಿದ್ದಾರೆ. 2 ವರ್ಷ ಜೈಲು ಶಿಕ್ಷೆ, ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ವಿವಾದ ಎಬ್ಬಿಸಿದ ಕೋಲಾರದಿಂದಲೇ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.
ನವದೆಹಲಿ(ಮಾ.29): ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಕರ್ನಾಟಕದಲ್ಲಿನ ಪ್ರಚಾರ ದಿನಾಂಕವನ್ನೂ ಕಾಂಗ್ರೆಸ್ ಘೋಷಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ಮೋದಿ ಸಮುದಾಯ ನಿಂದಿಸಿ ನೀಡಿದ ಹೇಳಿಕೆಗೆ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಇದೀಗ ಅದೇ ಕೋಲಾರದಿಂದ ರಾಹುಲ್ ಗಾಂಧಿ ಪ್ರಚಾರ ಕಾರ್ಯ ಆರಂಭಿಸುತ್ತಿದ್ದಾರೆ. ಏಪ್ರಿಲ್ 5 ರಂದು ರಾಹುಲ್ ಗಾಂಧಿ ಕೋಲಾರದಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಸತ್ಯಮೇವ ಜಯತೆ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಈ ಕುರಿತು ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಕೋಲಾರದಲ್ಲಿ ನೀಡಿದ ಹೇಳಿಕೆಯನ್ನು ಬಿಜೆಪಿ ಬಳಸಿಕೊಂಡು ರಾಹುಲ್ ಗಾಂಧಿಯನ್ನು ಅನರ್ಹ ಮಾಡಿದೆ. ಇದೀಗ ಕೋಲಾರದಿಂದಲೇ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಆರಂಭಿಸಲು ಮನವಿ ಮಾಡಿದ್ದೇವೆ.ಕೋಲಾರದ ಈ ಬಾರಿ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ದಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!
ಕೋಲಾರದಿಂದಲೂ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕೋಲಾರದಿಂದಲೂ ಸ್ಪರ್ಧಿಸುವಂತೆ ತೀವ್ರ ಒತ್ತಡ ಬರುತ್ತಿದೆ. ಹೀಗಾಗಿ, ವರುಣ ಕ್ಷೇತ್ರದ ಜತೆ ಕೋಲಾರದಿಂದಲೂ ಸ್ಪರ್ಧಿಸಲು ಅವಕಾಶ ಕೇಳಿದ್ದೇನೆ. ಈ ಸಂಬಂಧ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆ ಮೂಲಕ ಈ ಬಾರಿಯೂ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಕುರಿತು ಸುಳಿವು ನೀಡಿದ್ದಾರೆ.
ಎಚ್.ಡಿ.ಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ವರುಣ ನನ್ನ ಹುಟ್ಟೂರು ಭಾಗದ ಕ್ಷೇತ್ರ. ನನ್ನ ಕೊನೆಯ ಚುನಾವಣೆ ಹುಟ್ಟೂರಿನಲ್ಲಿಯೇ ಆಗಬೇಕು ಎಂಬುದು ನನ್ನ ಆಸೆ. ಯಾವ ಕ್ಷೇತ್ರವೂ ಅದೃಷ್ಟಅಂತ ಇಲ್ಲ. ಆದರೆ, ಈ ಕ್ಷೇತ್ರದಿಂದ ನಾನು ಗೆದ್ದಾಗಲೇ ಮುಖ್ಯಮಂತ್ರಿ ಆಗಿದ್ದು’ ಎಂದರು. 2ನೇ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ ಕೋಲಾರದಿಂದಲೂ ಟಿಕೆಟ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೋಲಾರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಕೋಲಾರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭಿಸಿ, ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.
ಚುನಾವಣಾ ಆಯೋಗದಿಂದ ಮತ್ತೊಂದು ಘೋಷಣೆ, 4 ರಾಜ್ಯಗಳ ಉಪಚುನಾವಣೆ ದಿನಾಂಕ ಪ್ರಕಟ!
ಕೋಲಾರ ಕಾಂಗ್ರೆಸ್ ಪಕ್ಷದಲ್ಲಿರುವ ಬಣ ರಾಜಕೀಯ ಬದಿಗೆ ಸರಿಸಿ ಒಗ್ಗಟ್ಟಿನ ಮಂತ್ರ ಪಠಿಸಲು ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಪ್ರಚಾರ ಆರಂಭಿಸುವುದು ಸೂಕ್ತ ಅನ್ನೋದು ರಾಜ್ಯ ನಾಯಕರ ಅಭಿಪ್ರಾಯ.
