‘ಪೊಂಗಲ್‌ ಹಬ್ಬವು ‘ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌’ದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಭಾನುವಾರ ಕೇಂದ್ರ ಸಚಿವ ಡಾ. ಎಲ್‌. ಮುರುಗನ್‌ ಅವರ ದಿಲ್ಲಿ ಮನೆಯಲ್ಲಿ ತಮಿಳುನಾಡಿನ ಪ್ರಸಿದ್ಧ ‘ಪೊಂಗಲ್‌’ (ಸಂಕ್ರಾಂತಿ) ಹಬ್ಬದ ಆಚರಣೆಯಲ್ಲಿ ಮೋದಿ ಭಾಗಿಯಾಗಿದ್ದರು.

ಚೆನ್ನೈ/ನವದೆಹಲಿ: ‘ಪೊಂಗಲ್‌ ಹಬ್ಬವು ‘ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌’ದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಕೇಂದ್ರ ಸಚಿವ ಡಾ. ಎಲ್‌. ಮುರುಗನ್‌ ಅವರ ದಿಲ್ಲಿ ಮನೆಯಲ್ಲಿ ತಮಿಳುನಾಡಿನ ಪ್ರಸಿದ್ಧ ‘ಪೊಂಗಲ್‌’ (ಸಂಕ್ರಾಂತಿ) ಹಬ್ಬದ ಆಚರಣೆಯಲ್ಲಿ ಮೋದಿ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಅವರು ತಮಿಳುನಾಡಿನ ಪ್ರತಿಯೊಂದು ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತುಂಬಿರಲಿ’ ಎಂದು ಹಾರೈಸಿದರು. ಇದೇ ವೇಳೆ ‘ಕೋಲಂ’ (ರಂಗೋಲಿ) ನಿಂದ ಚಿತ್ರಗಳನ್ನು ಮೋದಿ ಬಿಡಿಸಿದರು.

ದೇಶದ ಪ್ರತಿಯೊಂದು ಮೂಲೆಯು ಪರಸ್ಪರ ಭಾವನಾತ್ಮಕವಾಗಿ ಸಂಪರ್ಕಗೊಂಡಾಗ ರಾಷ್ಟ್ರದ ಶಕ್ತಿಯು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಪೊಂಗಲ್ ಹಬ್ಬವು ಏಕ್ ಭಾರತ್ ಶ್ರೇಷ್ಠ ಭಾರತ್ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕಾಶಿ- ತಮಿಳು ಸಂಗಮಮ್ ಮತ್ತು ಸೌರಾಷ್ಟ್ರ- ತಮಿಳು ಸಂಗಮಂ ಆರಂಭಿಸಿದ ಸಂಪ್ರದಾಯದಲ್ಲಿ ಅದೇ ಮನೋಭಾವವಿದೆ. ಈ ಏಕತೆಯ ಭಾವನೆಯು 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೊಡ್ಡ ಶಕ್ತಿಯಾಗಿದೆ’ ಎಂದರು.

ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಪೊಂಗಲ್‌ ಹಬ್ಬವನ್ನು 4 ದಿನಗಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ತಮಿಳುನಾಡಿನ ಹೊಸ ವರ್ಷವಾದ ಪುಥಾಂಡು ಹಬ್ಬವನ್ನು ಆಚರಿಸಲು ಕಳೆದ ವರ್ಷ ಮೋದಿ ಅವರು ಮುರುಗನ್‌ ಅವರ ಮನೆಗೆ ಭೇಟಿ ನೀಡಿದ್ದರು.

ಬಿಜೆಪಿ ನಾಯಕರಿಂದ ದೇಗುಲ ಸ್ವಚ್ಛತಾ ಅಭಿಯಾನ

ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೂ ಮುನ್ನ ದೇಶದ ಎಲ್ಲ ದೇವಸ್ಥಾನಗಳಲ್ಲೂ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರು ದೇಶದ ವಿವಿಧೆಡೆ ದೇವಾಲಯಗಳಲ್ಲಿ ಅಭಿಯಾನ ನಡೆಸಿದರು.

ದೆಹಲಿಯ ಗುರು ರವಿದಾಸ್‌ ಮಂದಿರದಲ್ಲಿ ಕಸ ಗುಡಿಸುವ ಮೂಲಕ ನಡ್ಡಾ ಸ್ವಚ್ಛತಾ ಅಭಿಯಾನ ನಡೆಸಿದರು. ಅಲ್ಲದೇ ಸಿಎಂ ಯೋಗಿ ಅಯೋಧ್ಯೆಯ ರಾಮ ಮಂದಿರ ಆವರಣದಲ್ಲಿ ಅಭಿಯಾನದಲ್ಲಿ ಭಾಗಿಯಾಗಿದರು. ಇನ್ನು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ‘ಕೈಂಚಿ ಧಾಮ್‌’ ದೇವಸ್ಥಾನದಲ್ಲಿ, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಗಾಂಧಿನಗರದ ದೇವಸ್ಥಾನದಲ್ಲಿ, ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಒಡಿಶಾದ ಬಾಲೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. 

ಇತ್ತೀಚೆಗೆ ಮಹಾರಾಷ್ಟ್ರದ ಕಾಲಾರಾಮ್‌ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ದೇವಸ್ಥಾನದ ಆವರಣದಲ್ಲಿ ನೆಲ ಒರೆಸಿ, ಪ್ರಧಾನಿ ಮೋದಿ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಮುನ್ನ ದೇಶದ ಎಲ್ಲ ದೇವಸ್ಥಾನಗಳ ಮತ್ತು ಪವಿತ್ರ ಕ್ಷೇತ್ರಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ್ದರು.