Asianet Suvarna News Asianet Suvarna News

ಮೋದಿ ಸರ್ಕಾರ ದೇಶದ ನಿಜ ಸ್ವರೂಪವನ್ನು ಜಿ20 ಅತಿಥಿಗಳಿಂದ ಮರೆ ಮಾಡಿದೆ: ರಾಹುಲ್‌ ಕಿಡಿ

ಭಾರತ ಸರ್ಕಾರ ಜಿ20 ಅತಿಥಿಗಳಿಂದ ನಮ್ಮ ದೇಶದ ಬಡ ಜನರನ್ನು ಮರೆ ಮಾಚುತ್ತಿದೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಜಿ20 ನಿಮಿತ್ತ ದೆಹಲಿಯಲ್ಲಿ ಬಡ ಜನರು ವಾಸಿಸುವ ಪ್ರದೇಶಗಳನ್ನು ಹಸಿರು ಹೊದಿಕೆಗಳಿಂದ ಮರೆ ಮಾಡಿರುವುದನ್ನು ಟ್ವೀಟರ್‌ನಲ್ಲಿ ಅವರು ಟೀಕಿಸಿದ್ದಾರೆ.

Modi govt has hidden the true nature of the country for G-20 dignitaries congress leader Rahul Gandhi blames govt akb
Author
First Published Sep 10, 2023, 8:46 AM IST

ನವದೆಹಲಿ: ಭಾರತ ಸರ್ಕಾರ ಜಿ20 ಅತಿಥಿಗಳಿಂದ ನಮ್ಮ ದೇಶದ ಬಡ ಜನರನ್ನು ಮರೆ ಮಾಚುತ್ತಿದೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಜಿ20 ನಿಮಿತ್ತ ದೆಹಲಿಯಲ್ಲಿ ಬಡ ಜನರು ವಾಸಿಸುವ ಪ್ರದೇಶಗಳನ್ನು ಹಸಿರು ಹೊದಿಕೆಗಳಿಂದ ಮರೆ ಮಾಡಿರುವುದನ್ನು ಟ್ವೀಟರ್‌ನಲ್ಲಿ ಬರೆದುಕೊಂಡಿರುವ ರಾಹುಲ್‌, ‘ಕೇಂದ್ರ ಸರ್ಕಾರದ (central Govt) ಈ ರೀತಿ ಕ್ರಮದಿಂದ ವಿದೇಶಿ ಗಣ್ಯರಿಗೆ ದೇಶದ ನಿಜ ಸ್ವರೂಪವನ್ನು ತೋರಿಸುತ್ತಿಲ್ಲ. ಭಾರತದ ನಿಜ ಸ್ವರೂಪವನ್ನು ಮರೆ ಮಾಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಐರೋಪ್ಯ ಒಕ್ಕೂಟದ ನಾಯಕರ ಜೊತೆ ಮಾತನಾಡುವಾಗ ರಾಹುಲ್‌ ಗಾಂಧಿ (Rahul Gandhi)ಅವರು ಭಾರತ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದರು.

2026ರಲ್ಲಿ ಅಮೆರಿಕ ಜಿ20 ಅಧ್ಯಕ್ಷತೆಗೆ ಚೀನಾ ಕ್ಯಾತೆ

ಜಿ20 (G-20 summit) ಒಕ್ಕೂಟದ 2026ರ ಅಧ್ಯಕ್ಷತೆಯನ್ನು ಅಮೆರಿಕ ವಹಿಸಿಕೊಳ್ಳುವುದಾಗಿ ಘೋಷಿಸಿಕೊಂಡಿದ್ದು, ಇದಕ್ಕೆ ಚೀನಾ ತೀವ್ರ ಅಸಮಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿದೆ. ಜಿ20 ಶುರುವಿನಲ್ಲಿ ಅಮೆರಿಕ ಮೊದಲ ಅಧ್ಯಕ್ಷತೆಯನ್ನು ಪಡೆದಿತ್ತು. ಇದರ ಬಳಿಕ ಎಲ್ಲ ಸದಸ್ಯ ದೇಶಗಳು ಅಧ್ಯಕ್ಷತೆ ಪಡೆದು, ಭಾರತದ ನಂತರದಲ್ಲಿ ಬ್ರೆಜಿಲ್‌ (Brazil)ಹಾಗೂ ದಕ್ಷಿಣ ಆಫ್ರಿಕಾ (South Africa) ಪಡೆಯಲಿದೆ. ಇಲ್ಲಿಗೆ ಒಂದು ಸುತ್ತಿನಲ್ಲಿ ಎಲ್ಲ ರಾಷ್ಟ್ರಗಳು ಅಧ್ಯಕ್ಷತೆಯನ್ನು ಪಡೆದ ಹಾಗೆ ಆಗುತ್ತದೆ. ತದನಂತರ ಎಂದಿನಂತೆ ಅಮೆರಿಕ ಅಧ್ಯಕ್ಷತೆ ವಹಿಸುವುದಕ್ಕೆ ಅಡ್ಡಗಾಲು ಹಾಕಿರುವ ಚೀನಾ,ಇದೇ ಪದ್ಧತಿ ಏಕೆ ಮರುಕಳಿಸಬೇಕು ? ಬೇರೆ ರಾಷ್ಟ್ರಕ್ಕೆ ಅಧ್ಯಕ್ಷತೆ ನೀಡಬೇಕು ಎಂದು ಕ್ಯಾತೆ ತೆಗೆದಿದೆ ಎಂದು ತಿಳಿದು ಬಂದಿದೆ.

ಜಿ20: ಇಂದಿನ ಕಾರ್ಯಕ್ರಮಗಳ ವಿವರ

ಇನ್ನು ಜಿ20 ಸಭೆಯ ಎರಡನೇ ಹಾಗೂ ಅಂತಿಮ ದಿನವಾದ ಇಂದು ಬೆಳಗ್ಗೆ 8:15ರಿಂದ 9:20ವರೆಗೆ ವಿಶ್ವ ನಾಯಕರು ಮಹಾತ್ಮ ಗಾಂಧಿ ಅವರ ಸಮಾಧಿ ರಾಜಘಾಟ್‌ಗೆ ಆಗಮಿಸಿ, ಅಲ್ಲಿನ ಶಾಂತಿಯ ಗೋಡೆ ಮೇಲೆ ಹಸ್ತಾಕ್ಷರ ಹಾಕಿ, ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಗಾಂಧೀಜಿ ಅವರ ಮೆಚ್ಚಿನ ಭಕ್ತಿಗೀತೆಯ ನೇರ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ತದನಂತರ ಬೆಳಗ್ಗೆ 9:40ಕ್ಕೆ ಶೃಂಗಸಭೆ ನಡೆಯುವ ಭಾರತ ಮಂಟಪಕ್ಕೆ ನಾಯಕರು ಆಗಮಿಸುವರು. ಬೆಳಗ್ಗೆ 10:15ರಿಂದ 10:28ರವರೆಗೆ ಇಲ್ಲಿನ ಸೌತ್‌ ಪ್ಲಾಜಾದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬೆಳಗ್ಗೆ 10:30ರಿಂದ 12:30ರವರೆಗೆ 2 ತಾಸು ‘ಒನ್‌ ಫ್ಯೂಚರ್’ (ಒಂದು ಭವಿಷ್ಯ) ವಿಚಾರದ ಬಗ್ಗೆ ಸಭೆ ನಡೆಯಲಿದೆ. ಇದೆಲ್ಲ ಮುಗಿದ ಮೇಲೆ ದೆಹಲಿ ಘೋಷಣೆ ಅಂಗೀಕಾರ ಮಾಡಲಾಗುವುದು.

 

ಭಾರತ-ಮಧ್ಯಪ್ರಾಚ್ಯ-ಯುರೋಪ್‌ ಕಾರಿಡಾರ್‌ ಘೋಷಣೆ

ನವದೆಹಲಿ: ಮಹತ್ವದ ವಿದ್ಯಮಾನವೊಂದರಲ್ಲಿ ಯುರೋಪ್‌, ಮಧ್ಯಪ್ರಾಚ್ಯ ಮತ್ತು ಭಾರತದ ನಡುವೆ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆಯನ್ನು ಜಿ20 ಶೃಂಗದ ವೇಳೆ ಘೋಷಿಸಲಾಗಿದೆ. ಹೊಸ ವ್ಯಾಪಾರ ಮಾರ್ಗ ರಚನೆಯ ಈ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಹೊಸ ಮೈಲುಗಲ್ಲು ಎಂದೇ ಬಣ್ಣಿತವಾಗಿದೆ. ಗ್ಲೋಬಲ್‌ ಸೌತ್‌ ಮೂಲಕ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಚೀನಾಕ್ಕೆ ಪೆಟ್ಟು ನೀಡಿದ್ದ ಭಾರತ, ಇದೀಗ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳನ್ನು ಒಳಗೊಂಡ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆ ಮೂಲಕ ಚೀನಾಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಈ ಕಾರಿಡಾರ್‌ ಅನ್ನು ‘ಐತಿಹಾಸಿಕ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಲವು ಜಿ20 ದೇಶಗಳ ಮುಖ್ಯಸ್ಥರು ಬಣ್ಣಿಸಿದ್ದಾರೆ.

ಯಾರು ಯಾರು ಭಾಗಿ?

ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುರೋಪ್‌ ಒಕ್ಕೂಟ, ಯುಎಇ ಮತ್ತು ಇತರೆ ದೇಶಗಳು.

ಏನೇನು ಜೋಡಣೆ?

ಪರಸ್ಪರ ದತ್ತಾಂಶ ಸಂಪರ್ಕ, ರೈಲ್ವೆ, ಬಂದರುಗಳು, ವಿದ್ಯುತ್‌ ಜಾಲಗಳು ಮತ್ತು ಹೈಡ್ರೋಜನ್‌ ಪೈಪ್‌ಲೈನ್‌ ಸಂಪರ್ಕಿಸುವ ಉದ್ದೇಶ.

ಯೋಜನೆ ಹೇಗೆ ಜಾರಿ

ಭಾರತದಿಂದ ಕೊಲ್ಲಿ ದೇಶಗಳಿಗೆ ಬಂದರು ಸಂಪರ್ಕ. ಕೊಲ್ಲಿ ದೇಶಗಳ ನಡುವೆ ರೈಲು ಜಾಲ. ಕೊಲ್ಲಿ ದೇಶದಿಂದ ಮಧ್ಯಪ್ರಾಚ್ಯ ಮತ್ತು ಯುರೋಪ್‌ ದೇಶಗಳಿಗೆ ರೈಲು ಮತ್ತು ಹಡಗು ಮೂಲಕ ಸಂಪರ್ಕ

ಭಾರತಕ್ಕೆ ಏನು ಲಾಭ?

140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ವಿಶಾಲ ಮಾರುಕಟ್ಟೆಯನ್ನು ಅರಬ್‌ ದೇಶಗಳು ಹಾಗೂ ಪಶ್ಚಿಮ ದೇಶಗಳೊಂದಿಗೆ ಸಂಯೋಜಿಸಲು ಕಾರಿಡಾರ್‌ ಸಹಾಯ ಮಾಡುತ್ತದೆ. ಇದು ಚೀನಾದ ‘ಬೆಲ್ಟ್‌ ಆ್ಯಂಡ್‌ ರೋಡ್‌’ನಂಥ ಮೂಲಸೌಕರ್ಯ ಯೋಜನೆಗೆ ಪರ್ಯಾಯವಾಗಬಹುದಾಗಿದೆ. ಭಾರತ ಮತ್ತು ಯುರೋಪ್‌ ನಡುವಿನ ವ್ಯಾಪಾರವನ್ನು ಶೇ.40ರಷ್ಟು ವೇಗಗೊಳಿಸುತ್ತದೆ.

ಪಾಲುದಾರ ದೇಶಗಳಿಗೆ ಏನು ಲಾಭ?

ಇಂದು ಮುಂಬೈನಿಂದ ಸೂಯೆಜ್‌ ಕಾಲುವೆ ಮೂಲಕ ಯುರೋಪ್‌ಗೆ ಹಡಗು ಕಂಟೇನರ್‌ ಪ್ರಯಾಣಿಸುತ್ತದೆ. ಆದರೆ ಹೊಸ ಪ್ರಸ್ತಾವಿತ ಕಾರಿಡಾರ್‌ ಸಾಕಾರವಾದ ಬಳಿಕ ಭವಿಷ್ಯದಲ್ಲಿ ದುಬೈನಿಂದ ಇಸ್ರೇಲ್‌ನ ಹೈಫಾಗೆ ರೈಲಿನ ಮೂಲಕ ಸರಕು ಸಾಗಣೆ ಮಾಡಬಹುದು. ಅಲ್ಲಿಂದ ಯುರೋಪ್‌ಗೆ ಮತ್ತೆ ಹಡಗು ಮಾರ್ಗದಲ್ಲಿ ಹೋಗಬಹುದು. ಇದು ಹಣ ಮತ್ತು ಸಮಯ ಎರಡನ್ನೂ ಉಳಿಸುತ್ತದೆ ಎಂದು ಆರ್ಥಿಕ ಹಾಗೂ ಔದ್ಯಮಿಕ ತಜ್ಞರು ಹೇಳಿದ್ದಾರೆ.

ಪ್ರಸ್ತುತ, ಸೂಯೆಜ್‌ ಕಾಲುವೆಯು ವಿಶ್ವ ವ್ಯಾಪಾರಕ್ಕೆ ಒಂದು ಪ್ರಮುಖ ಅಡಚಣೆಯಾಗಿದೆ. ಜಾಗತಿಕ ಕಡಲ ವ್ಯಾಪಾರದ ಸರಿಸುಮಾರು ಶೇ.10ರಷ್ಟನ್ನು ಇದು ನಿರ್ವಹಿಸುತ್ತದೆ. ಆದರೆ ಇದರ ಮೂಲಕ ನಾನಾ ಕಾರಣಗಳಿಂದ ವ್ಯಾಪಾರಕ್ಕೆ ಆಗಾಗ ಅಡ್ಡಿ ಆಗುತ್ತದೆ. 2021ರ ಮಾರ್ಚ್‌ನಲ್ಲಿ ದೈತ್ಯ ಕಂಟೇನರ್‌ ಹಡಗೊಂದು ಸಿಲುಕಿಕೊಂಡ ಕಾರಣ 1 ವಾರ ಕಾಲ ಇತರ ಹಡಗುಗಳ ಸಂಚಾರಕ್ಕೆ ಅಡ್ಡಿ ಆಗಿತ್ತು. ಇನ್ನು ಮಧ್ಯಪ್ರಾಚ್ಯದ ಹಲವು ದೇಶಗಳ ಜತ ಉತ್ತಮ ಸಂಬಂಧ ಹೊಂದಿರುವ ಅಮೆರಿಕಕ್ಕೂ ಈ ವ್ಯಾಪಾರ ಕಾರಿಡಾರ್‌ನಿಂದ ಅನುಕೂಲ ಆಗುವ ಸಾಧ್ಯತೆ ಇದೆ.

Follow Us:
Download App:
  • android
  • ios