ನವದೆಹಲಿ (ಜ.23): ಕೇಂದ್ರ ಸರ್ಕಾರದ ನೂತನ 3 ಕೃಷಿ ಕಾಯ್ದೆಗಳ ವಿರುದ್ಧ ಕಳೆದ 58 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗಿನ ಮಾತುಕತೆ ಮತ್ತಷ್ಟುಕಗ್ಗಂಟಾಗಿದ್ದು, ನಡೆದ 11ನೇ ಸುತ್ತಿನ ಮಾತುಕತೆಯಲ್ಲಿಯೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕೇಂದ್ರ ಸರ್ಕಾರ ತನ್ನ ನಿಲುವನ್ನು ಬಿಗಿಗೊಳಿಸಿದ್ದು ಮೂರು ಕೃಷಿ ಕಾಯ್ದೆಗಳನ್ನು 18 ತಿಂಗಳ ಕಾಲ ತಡೆಹಿಡಿಯುವ ಪ್ರಸ್ತಾವನೆಗಿಂತಲೂ ಉತ್ತಮವಾದ ಆಫರ್‌ ನೀಡಲು ಸಾಧ್ಯವಿಲ್ಲ. ಇದೇ ಅಂತಿಮ ಆಫರ್‌. ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವ ಬಗ್ಗೆ ರೈತರು ಮರು ಚಿಂತನೆ ಮಾಡಬೇಕು ಎಂದು ತಿಳಿಸಿದೆ. ಆದರೆ, ಈ ಆಫರ್‌ ಅನ್ನು ಕೂಡ ರೈತರ ಸಂಘಟನೆಗಳು ತಿರಸ್ಕರಿಸಿವೆ.

ಒಂದೂವರೆ ವರ್ಷ ಕೃಷಿ ಕಾಯ್ದೆ ಜಾರಿ ಸ್ಥಗಿತ? ...

ಇದೇ ವೇಳೆ, ಪ್ರತಿ ಬಾರಿ ಆದಂತೆ ರೈತ ಸಂಘಟನೆಗಳು ಮತ್ತು ಸರ್ಕಾರದ ಮಧ್ಯೆ ಮುಂದಿನ ಮಾತುಕತೆ ಯಾವಾಗ ಎಂಬುದು ಕೂಡ ನಿರ್ಧಾರವಾಗಿಲ್ಲ. ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಿಂಪಡೆಯಬೇಕು, ಕನಿಷ್ಠ ಬೆಂಬಲ ದರ (ಎಂಎಸ್‌ಪಿ)ವನ್ನು ಕಾನೂನುಬದ್ಧಗೊಳಿಸಬೇಕು ಎಂಬ ಬೇಡಿಕೆಗೆ ರೈತರು ಪಟ್ಟುಹಿಡಿದಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ.

ಮಾತುಕತೆ ವಿಫಲ:  ವಿಜ್ಞಾನ ಭವನದಲ್ಲಿ ಶುಕ್ರವಾರ 11ನೇ ಸುತ್ತಿನ ಮಾತುಕತೆ ನಿಗದಿ ಆಗಿತ್ತು. ಈ ವೇಳೆ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ರೈತರ ಸಂಘಟನೆಗಳ ಮುಖಂಡರಿಗೆ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಊಟದ ವಿರಾಮದ ಬಳಿಕ ಮೂರು ಗಂಟೆ ಮೂವರು ಸಚಿವರು ಕಾದರೂ ರೈತರ ಮುಖಂಡರು ಮಾತುಕತೆಗೆ ಆಗಮಿಸಲಿಲ್ಲ. ಕೊನೆಗೆ ಸರ್ಕಾರದ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದರಿಂದ ಮಾತುಕತೆ ವಿಫಲವಾಯಿತು.

10ನೇ ಸುತ್ತಿನ ಮಾತುಕತೆ; ರೈತರಿಗೆ ಹೊಸ ಆಫರ್ ನೀಡಿದ ಕೇಂದ್ರ ಸರ್ಕಾರ! ...

ಇದೇ ವೇಳೆ ಸಭೆಯ ಬಳಿಕ ಮಾತನಾಡಿದ ತೋಮರ್‌, ‘ಸರ್ಕಾರದ ಪ್ರಸ್ತಾವನೆಯ ಮೇಲೆ ಚರ್ಚೆಗೆ ರೈತರು ಸಿದ್ಧವಿದ್ದರೆ ಮಾತ್ರ ಮಾತ್ರ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ. ಸರ್ಕಾರದ ಪ್ರಸ್ತಾವನೆಯಲ್ಲಿ ಯಾವುದೇ ದೋಷ ಇಲ್ಲ. ಅತ್ಯುತ್ತಮವಾದ ಪ್ರಸ್ತಾವನೆಯನ್ನು ನಾವು ನಿಮ್ಮ ಮುಂದೆ ಇಟ್ಟಿದ್ದೇವೆ. ಆದರೆ, ನೀವು ಅದನ್ನು ತಿರಸ್ಕಿರಿಸಿದ್ದೀರಿ. ಇದು ಸರ್ಕಾರ ಕೊನೆಯ ಆಫರ್‌ ಆಗಿದ್ದು, ಇದಕ್ಕಿಂತಲೂ ಉತ್ತಮವಾದ ಆಫರ್‌ ಅನ್ನು ನೀಡಲು ಸಾಧ್ಯವಿಲ್ಲ’ ಎಂದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಕಿಸಾನ್‌ ಮೋರ್ಚಾ, ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ನಿಲುವಿಗೆ ನಾವು ಈಗಲೂ ಬದ್ಧವಾಗಿದ್ದೇವೆ ಎಂದು ತಿಳಿಸಿದೆ.