ನವದೆಹಲಿ(ಜ.21): 3 ಕೃಷಿ ಕಾಯ್ದೆ ವಿವಾದ ಇತ್ಯರ್ಥ ಸಂಬಂಧ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರ ನಡುವೆ ಬುಧವಾರ ಇಲ್ಲಿ ನಡೆದ 10ನೇ ಸುತ್ತಿನ ಸಭೆ ಭಾಗಶಃ ಯಶ ಕಂಡಿದೆ. ಸುಮಾರು 5 ತಾಸು ಕಾಲ ನಡೆದ ಸಭೆಯ ಆರಂಭದಲ್ಲಿ ಎರಡೂ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದವಾದರೂ, ಕೊನೆಗೆ ಸರ್ಕಾರ ಸ್ವಲ್ಪ ಮೆತ್ತಗಾಗುವ ಸುಳಿವು ನೀಡಿದೆ.

ಮೊದಲಿಗೆ ಮೂರೂ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿತು. ಆದರೆ ಇದಕ್ಕೆ ರೈತರು ಒಪ್ಪದೇ ಇದ್ದಾಗ ಮುಂದಿನ ಒಂದೂವರೆ ವರ್ಷಗಳ ಕಾಲ ಮೂರೂ ಮಸೂದೆಗೆ ಜಾರಿಗೆ ತಡೆ ನೀಡುವ ಹೊಸ ಪ್ರಸ್ತಾವ ಮಂಡಿಸಿತು. ಜೊತೆಗೆ ಈ ಅವಧಿಯಲ್ಲಿ ವಿವಾದ ಇತ್ಯರ್ಥಕ್ಕೆ ರೈತರು ಮತ್ತು ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆ. ಸಮಿತಿ ವರದಿ ಆಧರಿಸಿ ಮುಂದೆ ಹೆಜ್ಜೆ ಇಡಬಹುದು. ಈ ಪ್ರಸ್ತಾಪದ ಕುರಿತು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಅನ್ನೂ ಸಲ್ಲಿಸಲಾಗುವುದು. ಅಲ್ಲಿಯವರೆಗೆ ರೈತರು ತಮ್ಮ ಪ್ರತಿಭಟನೆ ಸ್ಥಗಿತಗೊಳಿಸಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಬುಧವಾರ ರೈತರ ಮುಂದಿಟ್ಟಿದೆ.

ಸಭೆಯಲ್ಲಿ ಭಾಗಿಯಾಗಿದ್ದ ರೈತರು ಪೂರ್ಣ ಕಾಯ್ದೆ ರದ್ದಾಗುವವರೆಗೂ ಹೋರಾಟ ನಿಲ್ಲದು ಎಂಬ ಹಠಕ್ಕೆ ಬಿದ್ದಿದ್ದರಾದರೂ, ಸ್ವತಃ ಸರ್ಕಾರವೇ ಕಾಯ್ದೆ ಜಾರಿ ಮುಂದೂಡುವ ಸುಳಿವು ನೀಡಿದ ಕಾರಣ ಅದರ ಬಗ್ಗೆ ಪರಿಶೀಲನೆಯ ಮಾತುಗಳನ್ನು ಆಡಿದ್ದಾರೆ. ತಕ್ಷಣಕ್ಕೆ ಸಭೆಯಲ್ಲಿ ಈ ಪ್ರಸ್ತಾಪ ಒಪ್ಪಲು ಸಾಧ್ಯವಿಲ್ಲ. ಗುರುವಾರ ತಾವು ಆಂತರಿಕ ಸಭೆ ನಡೆಸಿ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ರೈತರು ಘೋಷಿಸಿದ್ದಾರೆ. ಆ ಮಟ್ಟಿಗೆ ಸಭೆ ಭಾಗಶಃ ಯಶ ಕಂಡಿದೆ. ಜೊತೆಗೆ ಉಭಯ ಬಣಗಳು ಜ.22ಕ್ಕೆ 11ನೇ ಸುತ್ತಿನ ಸಭೆ ನಡೆಸಲೂ ಒಪ್ಪಿಕೊಂಡಿವೆ.

ಕೃಷಿ ಸಮಿತಿ ಟೀಕಿಸಿದವರ ಮೇಲೆ ಸುಪ್ರೀಂ ಗರಂ

ಕೃಷಿ ಕಾಯ್ದೆಗಳ ಪರ/ವಿರುದ್ಧದ ಅಹವಾಲು ಆಲಿಸಲು ತಾನು ರಚಿಸಿದ ಸಮಿತಿಯ ಬಗ್ಗೆ ಅಪಶಬ್ದಗಳನ್ನು ಎತ್ತುತ್ತಿರುವ ರೈತ ಮುಖಂಡರು ಹಾಗೂ ಪ್ರತಿಪಕ್ಷಗಳ ನಾಯಕರ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಈ ಸಮಿತಿ ಕೇವಲ ಅಹವಾಲು ಆಲಿಸಲು ಇರುವಂಥದ್ದೇ ವಿನಾ, ತೀರ್ಪು ನೀಡುವ ಅಧಿಕಾರ ಹೊಂದಿಲ್ಲ’ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

‘ಸಮಿತಿಯ ಸದಸ್ಯರು ಕಾಯ್ದೆಗಳ ಪರ ಒಲವು ಹೊಂದಿದವರು. ಈ ಸಮಿತಿಯ ಸಭೆಗೆ ನಾವು ಬರುವುದಿಲ್ಲ’ ಎಂದು ರೈತ ಸಂಘಟನೆಗಳು ಹಾಗೂ ವಿಪಕ್ಷಗಳು ಗುಟುರು ಹಾಕಿದ್ದವು. ಈ ಬಗ್ಗೆ ಬುಧವಾರ ನಡೆದ ಕಲಾಪದಲ್ಲಿ ತೀವ್ರ ಆಕ್ಷಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಾಧೀಶ ನ್ಯಾ

ಎಸ್‌.ಎ. ಬೋಬ್ಡೆ ಅವರ ಪೀಠ, ‘ಸಮಿತಿಗೆ ಎಲ್ಲರ ಅಹವಾಲು ಆಲಿಸಿ ವರದಿ ನೀಡುವ ಅಧಿಕಾರ ಕೊಟ್ಟಿದ್ದೇವೆ. ಇದರಲ್ಲಿ ಪೂರ್ವಾಗ್ರಹ ಎಲ್ಲಿದೆ? ಸಮಿತಿ ಸದಸ್ಯರಿಗೆ ಕಳಂಕ ಹಚ್ಚುವ ಕೆಲಸ ಆಗಬಾರದು. ಆಕ್ಷೇಪಗಳಿಂದ ಕೋರ್ಟ್‌ ಹೆಸರು ಕೆಡಿಸಿದಂತಾಗುತ್ತದೆ’ ಎಂದು ಕಟುವಾಗಿ ನುಡಿದರು.