ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ ತರಲು ಹೊರಟಿದೆ. ಕೆಲ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಹಲವು ರೂಪದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅಸಲಿಗೆ FCRA ಅಗತ್ಯವೇನು? ಏನಿದು FCRA?

ನವದೆಹಲಿ (ಜು.22) ಕೇಂದ್ರ ಬಿಜೆಪಿ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ಈಗಾಗಲೇ ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಅದು ಆರ್ಟಿಕಲ್ 370 ರದ್ದತಿ ಯಿಂದ ಹಿಡಿದು ಏಕರೂಪ ನಾಗರೀಕ ನೀತಿ ಸಂಹಿತೆ ಸೇರಿದಂತೆ ಹಲವು ನಿಯಮಗಳು ಭಾರತದ ಸುರಕ್ಷತೆ ಹಾಗೂ ಏಕತೆಗೆ ಅನಿವಾರ್ಯವಾಗಿತ್ತು. ಇದೀಗ ಮೋದಿ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ( FCRA) ತಿದ್ದುಪಡಿ ತರಲು ಹೊರಟಿದೆ. ದೇಶದ ಆಂತರಿಕ ಭದ್ರತೆ, ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ಸೌಹಾರ್ದತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ FCRA ತಿದ್ದುಪಡಿ ಕಾಯ್ದೆ ಮಂಡಿಸಲಿದೆ.

ಭಾರತದಲ್ಲಿ ಹಲವು ಸರ್ಕಾರೇತರ ಸಂಘ ಸಂಸ್ಥೆಗಳು ಹಲವು ಮೂಲಗಳಿಂದ ದೇಣಿಗೆ ಸಂಗ್ರಹಿಸುತ್ತಿದೆ. ಈ ಪೈಕಿ ಅತೀ ಹೆಚ್ಚು ದೇಣಿಗೆ ಸಂಗ್ರಹ ವಿದೇಶಗಳಿಂದ ಮಾಡಲಾಗುತ್ತಿದೆ. 2019 ರಿಂದ 2022ರ ವರೆಗಿನ ಕೇವಲ ಮೂರು ವರ್ಷಗಳ ಅವಧಿಲ್ಲಿ 55 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ವಿದೇಶಗಳಿಂದ ಭಾರತಕ್ಕೆ ದೇಣಿಗೆ ರೂಪದಲ್ಲಿ ಹರಿದು ಬಂದಿದೆ. ಯಾವ ಹೆಸರಿನಲ್ಲಿ, ಯಾವ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆಯೋ, ಅದೇ ಉದ್ದೇಶಕ್ಕೆ ಬಳಕೆಯಾಗುತ್ತಿದೆಯಾ ಅನ್ನೋ ಕುರಿತು ಪಾರದರ್ಶಕತೆ ಇಲ್ಲ. ದೇಣಿಗೆ ಹಣದ ಪ್ರತಿ ರೂಪಾಯಿ ಬಳಕೆಯಲ್ಲಿನ ಪಾರದರ್ಶಕತೆ ಹಾಗೂ ಹೊಣೆಗಾರಿ ಉದ್ದೇಶದಿಂದ ತಿದ್ದುಪಡಿ ತರಲಾಗುತ್ತಿದೆ.

ಅಭಿವೃದ್ಧಿ ವಿರೋಧಿ ಕೃತ್ಯ ಹಾಗೂ ಮತಾಂತರ ತಡೆಗೆ ಮುನ್ನೆಚ್ಚರಿಕೆ

ದೇಶದಲ್ಲಿ ಇತ್ತೀಚೆಗೆ ನಡೆದ ಹಲವು ತನಿಖೆಗಳಲ್ಲಿ ವಿದೇಶಿ ಹಣವನ್ನು ಭಾರತದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು, ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡಲು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ವಿದೇಶಿ ದೇಣಿಗಳನ್ನು ಬಳಸಿಕೊಂಡು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಾನೂನುಬಾಹಿರ ಧಾರ್ಮಿಕ ಮತಾಂತರಕ್ಕೆ ಬಳಸುತ್ತಿರುವುದು ಪತ್ತೆಯಾಗಿದೆ. ದೇಶವಿರೋಧಿ ಕೃತ್ಯಗಳಿಗೆ ತಡೆಹಾಕಲು ಎಫ್‌ಸಿಆರ್‌ಎ ತಿದ್ದುಪಡಿ ಅತ್ಯಗತ್ಯವಾಗಿದೆ.

55,741 ಕೋಟಿ ರೂಪಾಯಿ ವಿದೇಶಿ ದೇಣಿ

2019 ರಿಂದ 2022 ರ ನಡುವೆ ದೇಶದ 13,500 ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು (NGO) ಬರೋಬ್ಬರಿ ₹55,741 ಕೋಟಿ ವಿದೇಶಿ ನಿಧಿಯನ್ನು ಸ್ವೀಕರಿಸಿವೆ. ಈ ಹಣವು ಭಾರತೀಯ ಕಾನೂನುಗಳಿಗೆ ಬದ್ಧವಾಗಿ ಪಾರದರ್ಶಕವಾಗಿ ಬಳಕೆ ಆಗುತ್ತಿದೆಯೇ ಎಂಬುದು ಅತ್ಯಂತ ಮುಖ್ಯ. ಇದೇ ವೇಳೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ದುರ್ಬಳಕೆಯಾಗುತ್ತಿಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕಾಯ್ದೆ ತರಲಾಗುತ್ತಿದೆ.

ವಿದೇಶಿ ಹಣದಿಂದ ಸೃಷ್ಟಿಯಾದ ಆಸ್ತಿಗಳ ಜಪ್ತಿಗೆ ಹೊಸ ಪ್ರಾಧಿಕಾರ

ಯಾವುದೇ ಎನ್‌ಜಿಒದ FCRA ನೋಂದಣಿ ರದ್ದಾದಾಗ, ಹಿಂಪಡೆದಾಗ ಅಥವಾ ಅವಧಿ ಮುಗಿದಾಗ, ವಿದೇಶಿ ನಿಧಿಯಿಂದ ನಿರ್ಮಿಸಲಾದ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲು ಈ ಮಸೂದೆಯಲ್ಲಿ ವಿಶೇಷ ಪ್ರಾಧಿಕಾರವನ್ನು (Designated Authority) ನೇಮಿಸಲಾಗುತ್ತದೆ. ಇದರಿಂದ ತನಿಖೆ ಆರಂಭವಾಗುವ ಮುನ್ನವೇ ಸಂಸ್ಥೆಗಳು ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸುವುದು ಅಥವಾ ಮಾರಾಟ ಮಾಡುವುದಕ್ಕೆ ಸಂಪೂರ್ಣ ತಡೆಬೀಳಲಿದೆ.

ಆಸ್ತಿ ತಮ್ಮಲ್ಲೇ ಇಟ್ಟುಕೊಳ್ಳುತ್ತಿದ್ದ ನೀತಿಗೂ ತಿದ್ದುಪಡಿ

ಇಲ್ಲಿಯವರೆಗೆ FCRA ನೋಂದಣಿ ಅವಧಿ ಮುಗಿದ ಮೇಲೆಯೂ ಸಂಸ್ಥೆಗಳು ಆಸ್ತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಿದ್ದ 'ಲ್ಯಾಪ್ಸ್ ಆಂಡ್ ಕೀಪ್' ಎಂಬ ಕಾನೂನು ಲೋಪದೋಷವನ್ನು ಈ ಹೊಸ ಮಸೂದೆಯಲ್ಲಿ ಸರಿಪಡಿಸಲಾಗಿದೆ. ಜೊತೆಗೆ, ವಿದೇಶಿ ಹಣದ ಬಳಕೆಯ ವಿಚಾರದಲ್ಲಿ ಸಂಸ್ಥೆಯ ಮುಖ್ಯ ಪದಾಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಧಾರ್ಮಿಕ ಮತಾಂತರಕ್ಕೆ ನಿಷೇಧ, ಧಾರ್ಮಿಕ ಶಿಕ್ಷಣಕ್ಕೆ ಸಮ್ಮತಿ:

ಹೊಸ ತಿದ್ದುಪಡಿಯ ಪ್ರಕಾರ ವಿದೇಶಿ ಹಣವನ್ನು ಧಾರ್ಮಿಕ ಮತಾಂತರ ಚಟುವಟಿಕೆಗಳಿಗೆ ಬಳಸುವುದು ಸಂಪೂರ್ಣ ನಿಷೇಧಕ್ಕೊಳಗಾಗಲಿದೆ. ಆದರೆ ಧಾರ್ಮಿಕ ಶಿಕ್ಷಣ, ಪ್ರವಚನಗಳು ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಿಗೆ ವಿದೇಶಿ ದೇಣಿಗೆ ಬಳಸಲು ಯಾವುದೇ ಸಮಸ್ಯೆ ಇಲ್ಲ. ಹಾಗೂ ಈ ಕಾಯ್ದೆಯಡಿ ವಶಪಡಿಸಿಕೊಂಡ ಪ್ರಾರ್ಥನಾ ಮಂದಿರಗಳ ಧಾರ್ಮಿಕ ಸ್ವರೂಪವನ್ನು ಕಾಯ್ದುಕೊಳ್ಳಲಾಗುತ್ತದೆ.

ಮೂರು ಭಿನ್ನ ಸಿದ್ಧಾಂತಗಳ ನೆಟ್‌ವರ್ಕ್ ಮೇಲೆ ಕಣ್ಣು

ವಿದೇಶಿ ನಿಧಿಯಿಂದ ನಡೆಯುವ ಎನ್‌ಜಿಒ ಜಾಲಗಳಲ್ಲಿ ಕಮ್ಯುನಿಸ್ಟ್/ ತೀವ್ರ ಎಡಪಂಥೀಯ, ಇಸ್ಲಾಮಿಕ್ ತೀವ್ರಗಾಮಿ ಮತ್ತು ಮಿಷನರಿ ನೆಟ್‌ವರ್ಕ್‌ಗಳು ಒಟ್ಟಾಗಿ ಕಾರ್ಯಾಚರಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ. ಈ ಸಿದ್ಧಾಂತಗಳ ಉದ್ದೇಶಗಳು ಬೇರೆಯಾಗಿದ್ದರೂ, ಇವು ಜಂಟಿಯಾಗಿ ದೇಶದ ಅಭಿವೃದ್ಧಿಯನ್ನು ತಡೆಯಲು ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿವೆ.ಈ ಕುರಿತು ಹಲವು ವರಧಿಗಳ ಆಧಾರದಲ್ಲಿ FCRA ಕಾಯ್ದೆಯಲ್ಲಿ ಕೆಲ ತಿದ್ದುಪಡಿ ಮಾಡಲಾಗಿದೆ.

ಪರಿಸರ ಆಕ್ಟಿವಿಸಂ ಹೆಸರಲ್ಲಿ ಮೂಲಸೌಕರ್ಯ ಯೋಜನೆಗೆ ಅಡ್ಡಿ

ಕೆಲವು ವಿದೇಶಿ ನಿಧಿ ಪಡೆಯುವ ಸಂಸ್ಥೆಗಳು 'ಪರಿಸರ ರಕ್ಷಣೆ' ಎಂಬ ಸೋಗಿನಲ್ಲಿ ದೇಶದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳನ್ನು ವಿರೋಧಿಸುತ್ತಿವೆ. ಈ ಮೂಲಕ ದೇಶದ ಜನಸಂಖ್ಯಾಶಾಸ್ತ್ರ (Demography) ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಹೊಸ ಕಾಯ್ದೆಯು ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕಲಿದೆ.

ಪಾರದರ್ಶಕತೆ ಹೆಚ್ಚಿಸಲು ಸರ್ಕಾರದ ಕಟ್ಟುನಿಟ್ಟಿನ ಕ್ರಮ:

ವಿವಿಧ ರಾಜಕೀಯ ಹಾಗೂ ಸಿದ್ಧಾಂತ ಹಿನ್ನೆಲೆಯ ಸಂಸ್ಥೆಗಳು ನಿಯಮಗಳನ್ನು ಬಿಗಿಗೊಳಿಸುವುದನ್ನು ಒಟ್ಟಾಗಿ ವಿರೋಧಿಸುತ್ತಿವೆ. ಆದರೆ, ಸರ್ಕಾರವು ಭಾರತದಲ್ಲಿ ಕಾರ್ಯಾಚರಿಸುವ ಸಂಸ್ಥೆಗಳು ಪಡೆಯುವ ಪ್ರತಿಯೊಂದು ವಿದೇಶಿ ರೂಪಾಯಿಯ ಬಳಕೆಯಲ್ಲೂ ಪಾರದರ್ಶಕತೆ ಹಾಗೂ ಕಟ್ಟುನಿಟ್ಟಿನ ನಿಗಾ ವಹಿಸಲು ಈ ತಿದ್ದುಪಡಿ ತಂದಿದೆ.

ಗ್ರೀನ್‌ಪೀಸ್ ಇಂಡಿಯಾ ಪ್ರಕರಣದಿಂದ ಕಲಿತ ಪಾಠ

ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ಅಭಿಯಾನಗಳು ಮತ್ತು ವಿದೇಶಿ ಹಣ ರವಾನೆಯ ಅಕ್ರಮಗಳ ಹಿನ್ನೆಲೆಯಲ್ಲಿ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿಯನ್ನು ರದ್ದುಗೊಳಿಸಲಾಗಿತ್ತು. ವಿದೇಶಿ ದೇಣಿಗೆಗಳು ಭಾರತದ ಕಾನೂನಿಗೆ ಬದ್ಧವಾಗಿ ಬಳಕೆ ಆಗಬೇಕಾದರೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹಾದಿಯಲ್ಲಿ ಅಕ್ರಮ ಸೃಷ್ಟಿ:

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯು ಎಫ್‌ಸಿಆರ್‌ಎ ನಿಯಮಗಳನ್ನು ಗಾಳಿಗೆ ತೂರಿ ಯುಕೆ ಸಂಸ್ಥೆಯಿಂದ ಎಫ್‌ಡಿಐ ಹಾಗೂ 'ಕನ್ಸಲ್ಟೆನ್ಸಿ ಫೀಸ್' ಹೆಸರಿನಲ್ಲಿ ₹36 ಕೋಟಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ಹರಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿಂದೆಯೂ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ದೇಶವಿರೋಧಿ ಪ್ರತಿಭಟನೆ ವೇಳೆಯೂ ಇದರ ಹೆಸರು ಕೇಳಿಬಂದಿತ್ತು.

ಲಾಯರ್ಸ್ ಕಲೆಕ್ಟಿವ್' ಸಂಸ್ಥೆಯ ಹಣ ದುರ್ಬಳಕೆ ಸಾಬೀತು

ಲಾಯರ್ಸ್ ಕಲೆಕ್ಟಿವ್ ಸಂಸ್ಥೆಯು ವಿದೇಶಿ ನಿಧಿಯನ್ನು ನಿಯಮಬಾಹಿರವಾಗಿ ಬಳಸಿಕೊಂಡಿದೆ ಎಂಬ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ರೀತಿಯ ಘಟನೆಗಳು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವನ್ನು ಎತ್ತಿಹಿಡಿಯುತ್ತವೆ ಎಂದು ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವವರು ಪ್ರತಿಪಾದಿಸುತ್ತಾರೆ.

ನಿಷೇಧಿತ ಪಿಎಫ್‌ಐ ಸಂಸ್ಥೆಯ ಭಯೋತ್ಪಾದನಾ ಜಾಲ

2022ರಲ್ಲಿ ನಿಷೇಧಿಸಲ್ಪಟ್ಟ ಪಿಎಫ್‌ಐ (PFI) ಸಂಸ್ಥೆಯು ವಿದೇಶದಲ್ಲಿದ್ದ 13,000ಕ್ಕೂ ಹೆಚ್ಚು ಏಜೆಂಟ್‌ಗಳ ಮೂಲಕ ₹620 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಅಕ್ರಮವಾಗಿ ಭಾರತಕ್ಕೆ ತಂದಿತ್ತು. ಮಸೀದಿ, ಮದ್ರಸಾ ಹಾಗೂ ಹೆಣ್ಣುಮಕ್ಕಳ ಶಿಕ್ಷಣದ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ತೀವ್ರಗಾಮಿ ಸಿದ್ಧಾಂತ ಬಿತ್ತಲು ಮತ್ತು ಶಸ್ತ್ರಾಸ್ತ್ರ ತರಬೇತಿಗೆ ಬಳಸಲಾಗಿತ್ತು. ನಿಷೇಧದ ನಂತರವೂ ಎಸ್‌ಡಿಪಿಐ (SDPI) ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು.

ರಾಜೀವ್ ಗಾಂಧಿ ಫೌಂಡೇಶನ್‌ಗೆ ಚೀನಾ ಹಣದ ಲಿಂಕ್

ರಾಜೀವ್ ಗಾಂಧಿ ಫೌಂಡೇಶನ್‌ಗೆ ಚೀನಾ ಸರ್ಕಾರದ ಜೊತೆ ನಂಟಿರುವ ಸಂಸ್ಥೆಗಳಿಂದ ಅಕ್ರಮವಾಗಿ ನಿಧಿ ಹರಿದುಬಂದಿದೆ ಎಂಬ ರಾಷ್ಟ್ರೀಯ ಭದ್ರತೆಯ ಕಳವಳದ ಹಿನ್ನೆಲೆಯಲ್ಲಿ ಅದರ ಎಫ್‌ಸಿಆರ್‌ಎ ಲೈಸೆನ್ಸ್ ರದ್ದುಗೊಳಿಸಲಾಗಿತ್ತು. ದೇಶದ ಹಿತಾಸಕ್ತಿಯನ್ನು ಕಾಪಾಡಲು ಇಂತಹ ಸಂಸ್ಥೆಗಳ ಮೇಲೆ ನಿಗಾ ಇಡುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಡಪಂಥೀಯ ಹಾಗೂ ಸಿದ್ಧಾಂತ ಆಧಾರಿತ ಸಂಸ್ಥೆಗಳ ವಿರೋಧ:

ಹೊಸ ತಿದ್ದುಪಡಿ ಮಸೂದೆಯನ್ನು ಎಸ್‌ಡಿಪಿಐ, ಎಡಪಂಥೀಯ ಲಿಬರಲ್ ಸಂಸ್ಥೆಗಳು ಹಾಗೂ ಕೆಲ ಚರ್ಚ್ ಆಧಾರಿತ ಸಂಸ್ಥೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಆದರೆ, ಈ ಶಾಸನವು ವಿದೇಶಿ ದೇಣಿಗೆಯ ಪಾರದರ್ಶಕತೆ ಹೆಚ್ಚಿಸಲು ಅತ್ಯಗತ್ಯವಾಗಿದ್ದು, ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಇದರ ಅಂಗೀಕಾರ ಅಗತ್ಯವಾಗಿದೆ ಎಂದು ಮೋದಿ ಸರ್ಕಾರ ಹೇಳಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆ

ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ 2026 'ಭಾರತಕ್ಕೆ ಬರುವ ವಿದೇಶಿ ಹಣವು ಪಾರದರ್ಶಕ ಹಾಗೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು' ಎಂಬ ಸರಳ ತತ್ವದ ಮೇಲೆ ಆಧಾರಿತವಾಗಿದೆ. ಪ್ರತಿಯೊಂದು ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರದಂತೆ ಭಾರತಕ್ಕೂ ತನ್ನ ಸಾಮಾಜಿಕ ಸೌಹಾರ್ದತೆ, ಅಭಿವೃದ್ಧಿ ಹಾಗೂ ಭದ್ರತೆಯನ್ನು ಕಾಯ್ದುಕೊಳ್ಳಲು ವಿದೇಶಿ ಪ್ರಭಾವವನ್ನು ನಿಯಂತ್ರಿಸುವ ಸಂಪೂರ್ಣ ಹಕ್ಕಿದೆ.