ಚಂಡೀಗಢ(ಮೇ.24): ಅಂತಾರಾಷ್ಟ್ರೀಯ ಲಸಿಕೆ ಉತ್ಪಾದನೆ ಕಂಪನಿಗಳ ಜೊತೆ ನೇರ ಒಪ್ಪಂದದ ಮೂಲಕ ಇಡೀ ದೇಶಾದ್ಯಂತ ಉದ್ಭವವಾಗಿರುವ ಕೋವಿಡ್‌ ಲಸಿಕೆಯ ಹಾಹಾಕಾರ ತಪ್ಪಿಸಬೇಕೆಂಬ ರಾಜ್ಯಗಳ ಮಹತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ.

ಅಮೆರಿಕ ಮೂಲದ ಲಸಿಕೆ ಉತ್ಪಾದನೆಯ ‘ಮಾಡೆರ್ನಾ’ ಕಂಪನಿಯು ನೇರವಾಗಿ ಪಂಜಾಬ್‌ ಸರ್ಕಾರಕ್ಕೆ ಲಸಿಕೆಯನ್ನು ನೀಡಲು ನಿರಾಕರಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ‘ಮಾಡೆರ್ನಾ’, ತಮ್ಮ ಕಂಪನಿಯ ನೀತಿ-ನಿರ್ಣಯಗಳ ಪ್ರಕಾರ ಕೇಂದ್ರ ಸರ್ಕಾರದ ಹೊರತಾಗಿ ಯಾವುದೇ ರಾಜ್ಯ ಸರ್ಕಾರ ಅಥವಾ ಖಾಸಗಿ ಕಂಪನಿಗಳ ಜೊತೆ ಲಸಿಕೆ ರಫ್ತು ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗದು ಎಂದು ಹೇಳಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಲಸಿಕೆ ಕಂಪನಿಗಳ ಜೊತೆ ನೇರ ಒಪ್ಪಂದದ ಮೂಲಕ ತಮಗೆ ಅಗತ್ಯವಿರುವಷ್ಟುಲಸಿಕೆಗಳನ್ನು ಖರೀದಿಸಬೇಕೆಂಬ ರಾಜ್ಯಗಳ ಆಕಾಂಕ್ಷೆಗೆ ಹಿನ್ನಡೆಯಾದಂತಾಗಿದೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ರಾಜ್ಯದ ಎಲ್ಲರಿಗೂ ಶೀಘ್ರದಲ್ಲೇ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಪಂಜಾಬ್‌ ಸರ್ಕಾರ ಲಸಿಕೆಗಳನ್ನು ಪೂರೈಸುವಂತೆ ರಷ್ಯಾದ ಸ್ಪುಟ್ನಿಕ್‌, ಅಮೆರಿಕದ ಫೈಝರ್‌, ಮಾಡೆರ್ನಾ, ಜಾನ್ಸನ್‌ ಅಂಡ್‌ ಜಾನ್ಸನ್‌ ಲಸಿಕೆಯ ಕಂಪನಿಗಳಿಗೆ ಕೋರಿಕೊಂಡಿದೆ. ಆದರೆ ಈ ಎಲ್ಲಾ ಕಂಪನಿಗಳ ಪೈಕಿ ಮಾಡೆರ್ನಾ ಕಂಪನಿ ಮಾತ್ರವೇ, ರಾಜ್ಯಗಳಿಗೆ ಲಸಿಕೆ ಪೂರೈಸಲು ತಮ್ಮ ಕಂಪನಿಯ ಪಾಲಿಸಿಯಲ್ಲಿ ಅನುಮತಿಯಿಲ್ಲ ಎಂದು ಹೇಳಿದೆ. ಆದರೆ ಇತರೆ ಕಂಪನಿಗಳು ಈವರೆಗೆ ಉತ್ತರಿಸಿಲ್ಲ ಎಂದು ಪಂಜಾಬ್‌ನ ಲಸಿಕೆ ಕಾರ‍್ಯಕ್ರಮದ ನೋಡಲ್‌ ಅಧಿಕಾರಿ ವಿಕಾಸ್‌ ಗಾರ್ಗ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona