ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವು ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಗಾಲ್ವಾನ್ ಸಂಘರ್ಷ ಮತ್ತು ಉನ್ನತ ಮಟ್ಟದ ರಹಸ್ಯ ಸಭೆಗಳ ವಿವರಗಳನ್ನು ಒಳಗೊಂಡಿರುವ ಈ ಪುಸ್ತಕದ ಬಿಡುಗಡೆಯನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ತಡೆಹಿಡಿಯಲಾಗಿದೆ. 

ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಬರೆದಿರುವ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ (Four Stars of Destiny) ಪುಸ್ತಕವು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಏಪ್ರಿಲ್ 2024 ರಲ್ಲೇ ಬಿಡುಗಡೆಯಾಗಬೇಕಿದ್ದ ಈ ಪುಸ್ತಕಕ್ಕೆ ಸರ್ಕಾರ ಮತ್ತು ಸೇನೆ ಇನ್ನೂ ಹಸಿರು ನಿಶಾನೆ ನೀಡಿಲ್ಲ. ಈ ವಿಚಾರವು ಸಂಸತ್ತಿನಲ್ಲಿ ಪ್ರತಿಧ್ವನಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಯ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಸರ್ಕಾರದ ಅನುಮೋದನೆ ಪಡೆದಿಲ್ಲ

ಮಾಜಿ ಸೇನಾ ಮುಖ್ಯಸ್ಥರೊಬ್ಬರ ಪುಸ್ತಕ ಪ್ರಕಟಣೆಗೆ ತಡೆಯೊಡ್ಡಿರುವುದು ಅಧಿಕೃತ ರಹಸ್ಯ ಕಾಯ್ದೆ 1923 (Official Secrets Act). ಈ ಕಾನೂನಿನ ಪ್ರಕಾರ, ಸಮವಸ್ತ್ರಧಾರಿ ಅಧಿಕಾರಿಗಳು ಅಥವಾ ಗುಪ್ತಚರ ಸಂಸ್ಥೆಯ (IB, RAW) ಮಾಜಿ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪ್ರಕಟಿಸುವ ಮೊದಲು ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯ. 2021ರ ತಿದ್ದುಪಡಿಯ ನಂತರ ಈ ನಿಯಮಗಳು ಮತ್ತಷ್ಟು ಕಠಿಣವಾಗಿದ್ದು, ನರವಾಣೆ ಅವರ ಪುಸ್ತಕ ಸದ್ಯ ರಕ್ಷಣಾ ಸಚಿವಾಲಯದ ಪರಿಶೀಲನೆಯಲ್ಲಿದೆ.

ಗಾಲ್ವಾನ್ ಸಂಘರ್ಷದ ಸೇನಾ ರಹಸ್ಯೆಗಳು

2020ರ ಮೇ ತಿಂಗಳಲ್ಲಿ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯ ಸಮಯದಲ್ಲಿ ಜನರಲ್ ನರವಾಣೆ ಅವರು ಸೇನಾ ಮುಖ್ಯಸ್ಥರಾಗಿದ್ದರು. ತಮ್ಮ ಪುಸ್ತಕದಲ್ಲಿ ಅವರು ಆ ಭೀಕರ ಘರ್ಷಣೆ, 20 ಭಾರತೀಯ ಸೈನಿಕರ ಬಲಿದಾನ ಮತ್ತು ಚೀನಾದೊಂದಿಗೆ ನಡೆದ ಸೇನಾ ವಿಘಟನೆ ಒಪ್ಪಂದದ ಒಳಗುಟ್ಟುಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಈ ಸೂಕ್ಷ್ಮ ವಿವರಗಳು ಶತ್ರು ರಾಷ್ಟ್ರಗಳಿಗೆ ಯುದ್ಧತಂತ್ರದ ಸುಳಿವು ನೀಡಬಹುದು ಎಂಬ ಆತಂಕ ಸರ್ಕಾರದ ಮಟ್ಟದಲ್ಲಿದೆ.

ಪ್ರಧಾನಿ ಮತ್ತು ಉನ್ನತ ನಾಯಕರೊಂದಿಗಿನ ಫೋನ್ ಸಂಭಾಷಣೆ

ಈ ಪುಸ್ತಕವು ಕೇವಲ ಗಡಿ ಘರ್ಷಣೆಗೆ ಸೀಮಿತವಾಗಿಲ್ಲ; ಬದಲಾಗಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎನ್‌ಎಸ್‌ಎ ಅಜಿತ್ ದೋವಲ್ ಅವರೊಂದಿಗೆ ನಡೆದ ಅತ್ಯಂತ ರಹಸ್ಯ ಫೋನ್ ಸಂಭಾಷಣೆಗಳನ್ನು ದಾಖಲಿಸಿದೆ. ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿ (CCS) ಮತ್ತು ಚೀನಾ ಅಧ್ಯಯನ ಗುಂಪು (CSG) ಸಭೆಗಳಲ್ಲಿ ನಡೆದ ಚರ್ಚೆಗಳೂ ಪುಸ್ತಕದಲ್ಲಿವೆ ಎಂದು ತಿಳಿದುಬಂದಿದ್ದು, ಇದು ಸರ್ಕಾರದ ಕಳವಳಕ್ಕೆ ಮುಖ್ಯ ಕಾರಣವಾಗಿದೆ.

ನರವಾಣೆ ಪುಸ್ತಕ ನಿಷೇಧಿಸಲು ಕಾರಣ

ಅಕ್ಟೋಬರ್ 2024 ರಲ್ಲಿ ಲಡಾಖ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದರೂ, ಚೀನಾದೊಂದಿಗಿನ ಸಂಬಂಧ ಇನ್ನೂ ಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ. 1962ರ ಹೆಂಡರ್ಸನ್-ಬ್ರೂಕ್ಸ್ ವರದಿಯನ್ನು ಸರ್ಕಾರ ಇಂದಿಗೂ ಗೌಪ್ಯವಾಗಿಟ್ಟಿರುವುದಕ್ಕೆ ಕಾರಣವೇನೋ, ಅದೇ ಕಾರಣ ನರವಾಣೆ ಅವರ ಪುಸ್ತಕಕ್ಕೂ ಅನ್ವಯಿಸುತ್ತದೆ. ಭಾರತದ ಮಿಲಿಟರಿ ನಾಯಕತ್ವವು ಬಿಕ್ಕಟ್ಟಿನ ಸಮಯದಲ್ಲಿ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಈ ಪುಸ್ತಕದ ಮೂಲಕ ಶತ್ರುಗಳಿಗೆ ತಿಳಿಯಬಾರದು ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ.

ಹಿಂದಿನ ಸೇನಾ ಮುಖ್ಯಸ್ಥರ ಪುಸ್ತಕಗಳಿಗಿಂತ ಇದು ಭಿನ್ನವೇ?

ಹಿಂದೆ ಜನರಲ್ ವಿ.ಕೆ. ಸಿಂಗ್ ಮತ್ತು ಜನರಲ್ ವಿ.ಪಿ. ಮಲಿಕ್ ಅವರ ಪುಸ್ತಕಗಳು ಪ್ರಕಟವಾಗಿದ್ದವು. ಆದರೆ, ಜನರಲ್ ಮಲಿಕ್ ಅವರು ಕಾರ್ಗಿಲ್ ವಿಜಯದ ಹಲವು ವರ್ಷಗಳ ನಂತರ ಪುಸ್ತಕ ಬರೆದಿದ್ದರು. ಆದರೆ ನರವಾಣೆ ಅವರ ಪುಸ್ತಕವು ಇನ್ನೂ ಜೀವಂತವಾಗಿರುವ (Ongoing) ಗಡಿ ಸಮಸ್ಯೆಗಳು ಮತ್ತು ಪ್ರಸ್ತುತ ರಾಜಕೀಯ ನಾಯಕತ್ವದ ನಿರ್ಧಾರಗಳನ್ನು ನೇರವಾಗಿ ಉಲ್ಲೇಖಿಸಿರುವುದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಈ ಪುಸ್ತಕ ಸೌತ್ ಬ್ಲಾಕ್ನ ಕಪಾಟಿನಲ್ಲಿ ಭದ್ರವಾಗಿದ್ದು, ಬಿಡುಗಡೆಯ ಹಾದಿ ಮಾತ್ರ ನಿಗೂಢವಾಗಿದೆ.