Odisha Train Accident Reason: ಒಡಿಶಾ ರೈಲು ಅಪಘಾತಕ್ಕೆ ಕಾರಣ ಪತ್ತೆ!
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ ಹೌರಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲಿನ ನಡುವಿನ ತ್ರಿವಳಿ ರೈಲು ಅಪಘಾತದ ಕಾರಣ ಬಹಿರಂಗವಾಗಿದೆ.
ಬೆಂಗಳೂರು (ಜೂ.3): ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ ಹೌರಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲಿನ ನಡುವಿನ ತ್ರಿವಳಿ ರೈಲು ಅಪಘಾತವು ಸಿಗ್ನಲ್ ಸಮಸ್ಯೆಯಿಂದ ನಡೆದಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಬಾಲಸೋರ್‌ನ (Balasore) ಬಹನಾಗ ಬಜಾರ್ ರೈಲ್ವೆ ನಿಲ್ದಾಣದ (Bahanaga Bazar railway station) ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ಗೆ ( 12841 - Coromandel Express) ಗೊತ್ತುಪಡಿಸಿದ ಮಾರ್ಗದಲ್ಲಿಯೇ ಚಲಿಸಲು ಹಸಿರು ನಿಶಾನೆ ತೋರಲಾಗಿದೆ ಮತ್ತು ಟೇಕ್ ಆಫ್ ಮಾಡಲಾಗಿದೆ. ತಪ್ಪಾಗಿ ಸಿಗ್ನಲ್ ನೀಡಲಾಗಿದೆ ಎಂದು ತಿಳಿದ ತಕ್ಷಣ ಸ್ಟೇಷನ್ ಮ್ಯಾನೇಜರ್ ಅದನ್ನು ಹಿಂತೆಗೆದುಕೊಂಡಿದ್ದಾನೆ. ಅಷ್ಟರಲ್ಲಾಗಲೇ ರೈಲು ಲೂಪ್ ಲೈನ್‌ಗೆ (Loop line) ತಲುಪಿತ್ತು. ಮಾತ್ರವಲ್ಲ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ (goods train) ಡಿಕ್ಕಿ ಹೊಡೆದು ಹಳಿ ತಪ್ಪಿತು. ಆಗ ರೈಲಿನ ಬೋಗಿಗಳು ಹಳಿಯ ಮೇಲೆ ಬಿದ್ದವು. 15 ಬೋಗಿ ಹಳಿ ತಪ್ಪಿದ್ದರೆ ಅದರಲ್ಲಿ 7 ಬೋಗಿಗಳು ತಲೆಕೆಳಗಾಗಿ ಉರುಳಿ ಬಿತ್ತು. ಅಷ್ಟರಲ್ಲಾಗಲೇ ಬೆಂಗಳೂರಿನ ಯಶವಂತಪುರದಿಂದ ಡೌನ್ ಲೈನ್‌ನಲ್ಲಿ ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (Bengaluru-Howrah Super Fast express) ರೈಲು 117 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಹಳಿಯ ಮೇಲೆ ಬಿದ್ದಿದ್ದ ಬೋಗಿಗೆ ಬಂದು ಡಿಕ್ಕಿ ಹೊಡೆಯಿತು. ಈ ಕಾರಣ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಬೆಂಗಳೂರು-ಹೌರಾ ರೈಲಿನ ಕೊನೆಯ ಮೂರು ಬೋಗಿಗಳು ಹಳಿತಪ್ಪಿದವು ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ವರದಿಯಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಮಾರ್ಗವು "ಭಾಗಶಃ ತುಕ್ಕು ಹಿಡಿದಿದೆ" ಎಂದು ಉಲ್ಲೇಖಿಸಲಾಗಿದೆ.
Odisha Train Accident: ದುರಂತದ ಸ್ಥಳದಲ್ಲಿ ಸಿಲುಕಿರುವ 30ಕ್ಕೂ ಹೆಚ್ಚು ಮೈಸೂರಿಗರಿಗೆ ಸಿದ್ದರಾಮಯ್ಯ ದೂರವಾಣಿ ಕರೆ
ನಾಲ್ವರು ಹಿರಿಯ ರೈಲ್ವೆ ಅಧಿಕಾರಿಗಳಾದ ಜೆಎನ್ ಸುಬುಧಿ, ಆರ್ ಕೆ ಬ್ಯಾನರ್ಜಿ, ಆರ್ ಕೆ ಪಂಜಿರಾ ಮತ್ತು ಎಕೆ ಮೊಹಂತು ಅವರು ನಡೆಸಿದ ತನಿಖೆಯಿಂದ ಈ ವಿವರಗಳು ಬಹಿರಂಗಗೊಂಡಿವೆ. ಅಧಿಕಾರಿಗಳು ಶುಕ್ರವಾರ ರಾತ್ರಿ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಸುತ್ತಲಿನ ವಿವರಗಳನ್ನು ಪರಿಶೀಲಿಸಿದರು. ಗಮನಾರ್ಹ ವಿಷಯವೆಂದರೆ ಇವು ಕೇವಲ ಪ್ರಾಥಮಿಕ ಸಂಶೋಧನೆಗಳು ಮತ್ತು ಒಡಿಶಾ ರೈಲು ಅಪಘಾತದ ಸಂಪೂರ್ಣ ವರದಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರ ವಿಚಾರಣೆಯ ನಂತರ ಬಹಿರಂಗಪಡಿಸಲಾಗುತ್ತದೆ.
ಏನಿದು ಲೂಪ್ ಲೈನ್‌ಗಳು:
ಲೂಪ್ ಲೈನ್‌ಗಳು ನಿಲ್ದಾಣಗಳ ಸುತ್ತಲೂ ನಿರ್ಮಿಸಲಾದ ರೈಲು ಹಳಿಗಳಾಗಿವೆ ಮತ್ತು ರೈಲನ್ನು ಮುಖ್ಯ ಮಾರ್ಗದಿಂದ ತಿರುಗಿಸುತ್ತವೆ. ರೈಲುಗಳನ್ನು ಸಾಮಾನ್ಯವಾಗಿ ವಿವಿಧ ಕಾರಣಗಳಿಗಾಗಿ ಲೂಪ್ ಲೈನ್‌ನಲ್ಲಿ ನಿಲುಗಡೆ ಮಾಡಲಾಗುತ್ತದೆ ಮತ್ತು ರೈಲನ್ನು ಹಿಂದಿಕ್ಕುವ ತಂತ್ರಗಳಲ್ಲಿಯೂ ಬಳಸಲಾಗುತ್ತದೆ. ಲೂಪ್ ಲೈನ್ ಸಾಮಾನ್ಯವಾಗಿ 750 ಮೀಟರ್ ಉದ್ದವಿರುತ್ತದೆ ಮತ್ತು ಮುಖ್ಯ ಹಳಿಯನ್ನು ಸೇರಲು ಸಹಾಯ ಮಾಡುತ್ತದೆ. ಬಾಹನಗರ ಸ್ಟೇಷನ್ ನಲ್ಲಿ ಒಟ್ಟು 4 ಹಳಿ ಇದ್ದವು. ಈ ಪೈಕಿ ಮಧ್ಯದ ಎರಡು ಹಳಿ ರೈಲುಗಳ ಮುಕ್ತ ಸಂಚಾರರಕ್ಕೆ ಮುಕ್ತವಿಡಲಾಗಿತ್ತು. ಅಕ್ಕಪಕ್ಕದ ಎರಡು ಹಳಿಗಳಲ್ಲಿ ಸರಕು ರೈಲು ನಿಲ್ಲಿಸಲಾಗಿತ್ತು.
ಘಟನೆ ನಡೆಯುವ ಸಮಯದಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು, ಗಂಟೆಗೆ 128 ಕಿ.ಮೀ.ಬರುತ್ತಿತ್ತು. ಅದಕ್ಕೆ ಮುಖ್ಯ ಲೇನ್‌ನಲ್ಲಿ ಅಂದ್ರೆ ಮಧ್ಯದ ಹಳಿಯಲ್ಲಿ ಆಗಮಿಸಲು ಮತ್ತು ಸ್ಟೇಷನ್‌ನಿಂದ ಹೊರ ಹೋಗಲು ಸಹಾಯಕ ಸ್ಟೇಷನ್ ಮ್ಯಾನೇಜರ್ ಗ್ರೀನ್ ಸಿಗ್ನಲ್ ನೀಡಿದ್ದರು. ಅದರಂತೆ ಆ ರೈಲಿನ ಚಾಲಕ ಸಾಮಾನ್ಯ ವೇಗದಲ್ಲೇ ರೈಲು ಚಲಿಸಿಕೊಂಡು ಬಂದಿದ್ದ. ಆದ್ರೆ ರೈಲು ಇನ್ನೇನು ನಿಲ್ದಾಣ ಪ್ರವೇಶಿಸಬೇಕು ಎನ್ನುವ ಹೊತ್ತಿನಲ್ಲಿ, ಸ್ಟೇಷನ್ ಮ್ಯಾನೆಜರ್ ಗೆ ತಾನು ಗ್ರೀನ್ ಸಿಗ್ನಲ್ ನೀಡಿದ್ದರೂ, ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮುಖ್ಯ ಹಳಿಯಲ್ಲಿ ಹೋಗಲು ಅನುವಾಗುವಂತೆ ಹಳಿ ಬದಲಾವಣೆ ಮಾಡಿರಲಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಆತ ಕಡೆಯ ಹಂತದಲ್ಲಿ ಗ್ರೀನ್ ಸಿಗ್ನಲ್ ಅನ್ನು ರೆಡ್‌ಗೆ ಬದಲಾಯಿಸಿದ್ದಾರೆ. ಅಷ್ಟರಲ್ಲಿ ರೈಲು ಮುಖ್ಯ ಹಳಿಯ ಬದಲಾಗಿ ಪಕ್ಕದಲ್ಲಿ ಸರಕು ಸಾಗಣೆ ರೈಲು ನಿಂತಿದ್ದ ಹಳಿಯಲ್ಲಿ ಸಾಗಿ ಭೀಕರ ಅಪಘಾತ ಸಂಭವಿಸಿದೆ.
ರೈಲು ದುರಂತದ ಗಾಯಾಳು ಭೇಟಿ ಬಳಿಕ ಪ್ರಧಾನಿ ಮೋದಿ ಮಹತ್ವದ ಸೂಚನೆ, ಜೊತೆಗೊಂದು ಎಚ್ಚರಿಕೆ!
ಒಡಿಶಾ ರೈಲು ಅಪಘಾತ ಸಂಭವಿಸಿದ ರೈಲ್ವೆ ಮಾರ್ಗಗಳು ಕವಾಚ್ ಎಂಬ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಿಂದ ಆವರಿಸಲ್ಪಟ್ಟಿಲ್ಲ. ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಇನ್ನೊಂದು ರೈಲು ಅದೇ ಮಾರ್ಗದಲ್ಲಿ ಇರುವುದು ಪತ್ತೆಯಾದರೆ ಸ್ವಯಂಚಾಲಿತವಾಗಿ ರೈಲನ್ನು ನಿಲ್ಲಿಸುವ ಸಾಮರ್ಥ್ಯವನ್ನು ಕವಾಚ್ ಹೊಂದಿದೆ.
ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಈವರೆಗೆ 290 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. 900 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.