ರೈಲು ದುರಂತದ ಗಾಯಾಳು ಭೇಟಿ ಬಳಿಕ ಪ್ರಧಾನಿ ಮೋದಿ ಮಹತ್ವದ ಸೂಚನೆ, ಜೊತೆಗೊಂದು ಎಚ್ಚರಿಕೆ!
ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡವರನ್ನು ಕಟಕ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ. ಗಾಯಾಳುಗಳಿಗೆ ಎಲ್ಲಾ ನೆರವು ನೀಡಲಾಗುವುದು ಎಂದಿದ್ದಾರೆ. ಇದೇ ವೇಳೆ ಎಚ್ಚರಿಕೆಯನ್ನು ನೀಡಿದ್ದಾರೆ.
ಒಡಿಶಾ(ಜೂ.03): ಒಡಿಶಾ ರೈಲು ದುರಂತದ ಸಾವು ನೋವು ಹೆಚ್ಚಾಗುತ್ತಲೇ ಇದೆ. ರಕ್ಷಣಾ ಕಾರ್ಯ ಅಂತ್ಯಗೊಂಡಿದೆ. ಇದೀಗ ಗಾಯಾಳುಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತ ತಮ್ಮ ಆಪ್ತರು, ಕುಟಂಬಸ್ಥರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಭೀಕರ ದುರಂತ ಭಾರತದ ರೈಲ್ವೇ ಇತಿಹಾಸದಲ್ಲಿ ಅತೀ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಬರೋಬ್ಬರಿ 261 ಮಂದಿ ಮೃತಪಟ್ಟಿದ್ದಾರೆ, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಬಳಿಕ ಕಟಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಮೋದಿ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ.
ಒಡಿಶಾ ರೈಲು ದುರಂತ ತೀವ್ರ ನೋವು ತಂದಿದೆ. ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ. ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು. ಘನಘೋರ ದುರಂತ ಹಲವು ಸಾವು ನೋವಿಗೆ ಕಾರಣವಾಗಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಾಳುಗಳಿಗೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.ಇದೇ ವೇಳೆ ಎಚ್ಚರಿಕೆಯನ್ನು ನೀಡಿದ್ದಾರೆ. ಒಡಿಶಾ ರೈಲು ದುರಂತವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸೂಕ್ತ ತನಿಖೆಗೆ ಆದೇಶ ನೀಡಲಾಗಿದೆ. ಈ ಘಟನೆಗೆ ತಪ್ಪಿತಸ್ಥರರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ. ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
Odisha Train Accident ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ಅಂತ್ಯ, ಭೀಕರ ಅಪಘಾತಕ್ಕೆ 261 ಬಲಿ!
ಈ ರೈಲಿನಲ್ಲಿ ಹಲವು ರಾಜ್ಯದ ಪ್ರಯಾಣಿಕರಿದ್ದರು. ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಮನಸ್ಸನ್ನು ವಿಚಲಿತರನ್ನಾಗಿ ಮಾಡುತ್ತಿದೆ. ತೀವ್ರ ನೋವು ತರಿಸುತ್ತಿದೆ. ಗಾಯಗೊಂಡ ಪ್ರತಿಯೊಬ್ಬರಿಗೂ ಸರ್ಕಾರ ಎಲ್ಲಾ ನೆರವು ನೀಡಲಿದೆ. ಮೃತರ ಕುಟಂಬಸ್ಥರ ಸಂಕಷ್ಟದ ಸಮಯದಲ್ಲಿ ಅವರ ಜೊತೆ ಸರ್ಕಾರ ನಿಲ್ಲಲಿದೆ. ಸರ್ಕಾರಕ್ಕೆ ಇದು ಅತ್ಯಂತ ಗಂಭೀರ ಘಟನೆಯಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.
ರೈಲು ದುರಂತದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾದ ಒಡಿಶಾ ಸರ್ಕಾರ, ರೈಲು ಅಧಿಕಾರಿಗಳು, ರಕ್ಷಣಾ ತಂಡಗಳು, ಸ್ಥಳೀಯರು ಅವಿರತ ಶ್ರಮವಹಿಸಿದ್ದಾರೆ. ರಕ್ತದಾನ, ಗಾಯಾಳುಗಳ ರಕ್ಷಣೆಯಲ್ಲಿ ಸ್ಥಳೀಯರು ಮುಂದೆ ನಿಂತು ಮಾಡಿದ್ದಾರೆ. ಇದರಿಂದ ರಕ್ಷಣಾ ಕಾರ್ಯದ ವೇಗ ಹೆಚ್ಚಾಗಿತ್ತು. ನಾನು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಬೇಟಿ ನೀಡಿದ್ದೇನೆ. ಗಾಯಾಳುಗಳ ಜೊತೆ ಮಾತನಾಡಿದ್ದೇನೆ. ಈ ಸಂದರ್ಭದಲ್ಲಿ ಅವರ ನೋವನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ. ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಈ ಸಂಕಷ್ಟದಿಂದ ಹೊರಬರಲು ಭಗವಂತ ಶಕ್ತಿ ನೀಡಲಿ ಎಂದು ಮೋದಿ ಹೇಳಿದ್ದಾರೆ.
ರೈಲು ದುರಂತ ನಡೆದ ಬಹನಾಗಗೆ ಪ್ರಧಾನಿ ಭೇಟಿ, ಭೀಕರ ಅಪಘಾತ ಸ್ಥಳ ನೋಡಿ ಮರುಗಿದ ಮೋದಿ!
ಘಟನೆಯಲ್ಲಿ ಮಡಿದವರ ಕುಟಂಬಕ್ಕೆ 10 ಲಕ್ಷ ರೂಪಾಯಿ, ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಸಚಿವಾಲಯ ಘೋಷಿಸಿದೆ. ಇನ್ನು ಎಲ್ಲಾ ಗಾಯಾಳುಗಳಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದಿದ್ದಾರೆ.