ಕೋಝಿಕ್ಕೋಡ್‌ನ ಅಯಂಜರಿಯ ಪಂಚಾಯತ್ ಕಚೇರಿಯ ಬೀಗದಲ್ಲಿ ಕಿಡಿಗೇಡಿಗಳು ಮರಳು ತುಂಬಿದ ಘಟನೆ ನಡೆದಿದೆ. ಈದ್ ಮತ್ತು ಭಾನುವಾರ ರಜೆ ಇದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೋಝಿಕ್ಕೋಡ್: ಕೆಲವರಿಗೆ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿ ವಿಕೃತ ಆನಂದ ಪಡುವುದರಲ್ಲಿ ಏನೋ ಖುಷಿ, ಸರ್ಕಾರಿ, ಶಾಲೆಗಳಲ್ಲಿ ನೆಟ್ಟ ಹೂಗಿಡಗಳನ್ನು ಹಾಳು ಮಾಡುವುದು, ಗೇಟಿನ ಬೀಗ ಒಡೆಯುವುದು, ಶಾಲೆಯ ಹೆಂಚು ತೆಗೆದು ಕದಿಯುವುದು, ಹಳ್ಳಿಯ ಬಸ್‌ ನಿಲ್ದಾಣದಲ್ಲಿ ಗೀಚುವುದು ಶಾಲೆಯ ಗೋಡೆಗಳಲ್ಲಿ ಅಸಹ್ಯವಾಗಿ ಏನಾದರೂ ಬರೆಯುವುದು ಹೀಗೆ ಏನಾದರೊಂದು ಅವಾಂತರ ಮಾಡಿ ಕೆಲವು ವಿಕೃತವಾಗಿ ಆನಂದ ಪಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಸ್ಥಳೀಯ ಪಂಚಾಯತ್‌ವೊಂದರ ಬೀಗದೊಳಗೆ ಪೂರ್ತಿ ಮರಳು ತುಂಬಿ ಬೀಗ ತೆಗೆಯಲಾಗದಂತೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಈದ್ ಹಾಗೂ ನಂತರ ಭಾನುವಾರ ಬಂದಿದ್ದರಿಂದ ಪಂಚಾಯತ್‌ಗೆ 2 ದಿನಗಳ ಕಾಲ ರಜೆ ಇತ್ತು. ಈ ಸಮಯದಲ್ಲೇ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಪಂಚಾಯತ್ ಕಚೇರಿಯ ಕಬ್ಬಿಣದ ಗ್ರಿಲ್‌ಗೆ ಹಾಕಿದ್ದ ಬೀಗದಲ್ಲಿರುವ ತೂತಿಗೆ ಮರಳು ತುಂಬಿಸಿದ್ದಾರೆ. ಈ ವಿಚಾರ ಅರಿಯದ ನೌಕರರು ಬೆಳಗ್ಗೆ ಎಂದಿನಂತೆ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಬೀಗ ಮರಳಿನಿಂದ ತುಂಬಿರುವುದು ಕಂಡುಬಂದಿದೆ. ಹೀಗಾಗಿ ಬೀಗ ತೆಗೆಯಲಾಗದ ಕಾರಣ ಪಂಚಾಯತ್ ಕಚೇರಿಯ ಚಟುವಟಿಕೆಗಳು ಹಲವು ಗಂಟೆಗಳ ಕಾಲ ವಿಳಂಬವಾದವು. ಕೋಝಿಕ್ಕೋಡ್‌ನ ಅಯಂಜರಿಯ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ನಂತರ ಪಂಚಾಯತ್ ಕಚೇರಿ ಸಿಬ್ಬಂದಿ ಈ ವಿಚಾರದ ಬಗ್ಗೆ ನಾದಾಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಸ್‌ಐ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿ ಪರಿಶೀಲಿಸಿದರು. ನಂತರ ಹೊರಭಾಗದಲ್ಲಿರುವ ಕಬ್ಬಿಣದ ಗ್ರಿಲ್‌ಗೆ ಹಾಕಿದ್ದ ಮರಳು ತುಂಬಿದ್ದ ಬೀಗವನ್ನು ದೊಡ್ಡ ಸುತ್ತಿಗೆಯಿಂದ ಮುರಿದು ಒಳಗೆ ಪ್ರವೇಶಿಸಲಾಯಿತು. ಆದರೆ ಇಷ್ಟಕ್ಕೆ ಸಮಸ್ಯೆ ಪರಿಹಾರವಾಗಿರಲಿಲ್ಲ, ಅಲ್ಲಿ ನೋಡಿದರೆ ಕಚೇರಿಯ ಒಳಭಾಗದ ಬಾಗಿಲಿನ ಬೀಗವನ್ನು ಅದೇ ರೀತಿಯಲ್ಲಿ ಮರಳಿನಿಂದ ತುಂಬಿಸಲಾಗಿತ್ತು.

ನಂತರ ವೆಲ್ಡಿಂಗ್ ಕೆಲಸಗಾರನನ್ನು ಕರೆತಂದು ಬಾಗಿಲಿಗೆ ಹಾನಿಯಾಗದಂತೆ ಹೊರಗಿನಿಂದ ಈ ಬೀಗವನ್ನು ಕತ್ತರಿಸಲಾಯಿತು. ಶನಿವಾರ ಈದ್ ರಜೆ ಮತ್ತು ಭಾನುವಾರವಾಗಿದ್ದರಿಂದ, ಕಚೇರಿಯನ್ನು ಎರಡು ದಿನಗಳವರೆಗೆ ಮುಚ್ಚಲಾಗಿತ್ತು. ಈ ದಿನಗಳಲ್ಲಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಇಲ್ಲದ ಕಾರಣ ಹತ್ತಿರದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.