ಒಡಿಶಾದಲ್ಲಿ 15 ವರ್ಷದ ಹಾಕಿ ತರಬೇತಿ ಪಡೆಯುತ್ತಿದ್ದ ಬಾಲಕಿಯನ್ನು ಆಕೆಯ ತರಬೇತುದಾರ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಜುಲೈ 3 ರಂದು ನಡೆದ ಈ ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಾಲಕಿ ಜುಲೈ 15 ರಂದು ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಜಾಜ್‌ಪುರ : ಒಡಿಶಾದಲ್ಲಿ ವಿದ್ಯಾರ್ಥಿನಿಯನ್ನೇ ತರಬೇತುದಾರ ಅಪಹರಣ ಮಾಡಿ ದೈಹಿಕವಾಗಿ ದೌರ್ಜನ್ಯ ಎಸೆದ ಘಟನೆ ನಡೆದಿದೆ. 15 ವರ್ಷದ ಹಾಕಿ ತರಬೇತಿ ಪಡೆಯುತ್ತಿದ್ದ ಬಾಲಕಿಯನ್ನು ಆಕೆಯ ತರಬೇತುದಾರನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜುಲೈ 3ರಂದು ನಡೆದಿದ್ದು, ಸಂತ್ರಸ್ತೆ ಜುಲೈ 15ರಂದು ದೂರು ನೀಡಿದ ನಂತರವೇ ಘಟನೆ ಬೆಳಕಿಗೆ ಬಂದಿದೆ ಎಂದು ಪಿಟಿಐ ವರದಿ ಮಾಡಿದೆ.

ಜಾಜ್‌ಪುರ ಜಿಲ್ಲೆಯ ಹಾಕಿ ಕ್ರೀಡಾಂಗಣದಲ್ಲಿ ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದ ಬಾಲಕಿ, ಜುಲೈ 3ರ ಸಂಜೆ ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆಕೆಯ ತರಬೇತುದಾರ ಮತ್ತು ಇಬ್ಬರು ಸಹಚರರು ಬಲವಂತವಾಗಿ ವಾಹನದಲ್ಲಿ ಎತ್ತಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾ*ಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಾ*ಚಾರದ ನಂತರ ಕೊಲೆ ಬೆದರಿಕೆ:

ಸಂತ್ರಸ್ತೆಯ ಪ್ರಕಾರ, ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಅಥವಾ ದೂರು ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಈಗಿನ ಹಾಕಿ ತರಬೇತುದಾರ ಮತ್ತು ಇಬ್ಬರು ಮಾಜಿ ತರಬೇತುದಾರರನ್ನು ಬಂಧಿಸಿದ್ದಾರೆ ಎಂದು ಜಾಜ್‌ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯಶಪ್ರತಾಪ್ ಶ್ರೀಮಲ್ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನು ಅತ್ಯಾ*ಚಾರ ಎಸಗಿದ ವ್ಯಕ್ತಿ, ಇನ್ನಿಬ್ಬರು ಅಪರಾಧಕ್ಕೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ:

ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ಮತ್ತು ಇತರೆ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ನಾಲ್ವರ ಪೈಕಿ ಓರ್ವನನ್ನು ತನಿಖೆಯಲ್ಲಿ ಅಪರಾಧದ ಭಾಗಿಯಾಗಿರುವುದಕ್ಕೆ ಸಾಕ್ಷ್ಯ ದೊರಕದ ಕಾರಣ ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ದೇಶದ ಕ್ರೀಡಾ ವಲಯದಲ್ಲಿಯೇ ಆತಂಕ ಉಂಟುಮಾಡಿದೆ. ಯುವ ಕ್ರೀಡಾಪಟುಗಳು ಸುರಕ್ಷಿತವಾಗಿ ಬೆಳೆಯುವ ವಾತಾವರಣದ ಅಗತ್ಯವನ್ನು ಈ ಪ್ರಕರಣ ಮತ್ತೊಮ್ಮೆ ಎತ್ತಿ ತೋರಿಸಿದೆ.