ಬಾಂಗ್ಲಾದೇಶದ ಕುಮಿಲ್ಲಾದಲ್ಲಿ 25 ವರ್ಷದ ಹಿಂದೂ ಮಹಿಳೆಯ ಮೇಲೆ ಅತ್ಯಾ*ಚಾರ ನಡೆದಿದ್ದು, ಆರೋಪಿ ಫಜ್ರ್ ಅಲಿಯನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಂಡ ನಾಲ್ವರನ್ನು ಸಹ ಬಂಧಿಸಲಾಗಿದೆ.
ಬಾಂಗ್ಲಾದೇಶದ ಕುಮಿಲ್ಲಾ ಜಿಲ್ಲೆಯ ಮುರಾದ್‌ನಗರ ಪ್ರದೇಶದಲ್ಲಿ 25 ವರ್ಷದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾ*ರ ನಡೆದಿದೆ. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯ ನಂತರ, ಪೊಲೀಸರು ಮುಖ್ಯ ಆರೋಪಿ ಫಜ್ರ್ ಅಲಿಯನ್ನು ಭಾನುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಢಾಕಾದ ಸೈದಾಬಾದ್ ಪ್ರದೇಶದಿಂದ ಬಂಧಿಸಿದ್ದಾರೆ. ಅವನನ್ನು ಕಾನೂನು ಕ್ರಮಕ್ಕಾಗಿ ಕುಮಿಲ್ಲಾಗೆ ಕರೆತರಲಾಗಿದೆ.
ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ಪ್ರಕರಣದಲ್ಲಿ ಮಹಿಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತ ಮಹಿಳೆ ಕಳೆದ 15 ದಿನಗಳಿಂದ ತನ್ನ ಮಕ್ಕಳೊಂದಿಗೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಅವಳ ಪತಿ ದುಬೈನಲ್ಲಿ ಕೆಲಸ ಮಾಡುತ್ತಾನೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿ ಫಜ್ರ್ ಅಲಿ ಅವಳ ಮನೆಗೆ ಬಂದು ಬಾಗಿಲು ತೆರೆಯುವಂತೆ ಹೇಳಿದ. ಮಹಿಳೆ ನಿರಾಕರಿಸಿದಾಗ, ಅವನು ಬಲವಂತವಾಗಿ ಮನೆಯೊಳಗೆ ನುಗ್ಗಿ ಅವಳ ಮೇಲೆ ಅತ್ಯಾಚಾ*ರ ಎಸಗಿದ.
ರಥಯಾತ್ರೆಯ ಸಿದ್ಧತೆ ವೇಳೆ ದುರ್ಘಟನೆ:
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಆ ದಿನ ಪ್ರದೇಶದಲ್ಲಿ ರಥಯಾತ್ರೆಯ ಸಿದ್ಧತೆಗಳು ನಡೆಯುತ್ತಿದ್ದವು. ನೆರೆಹೊರೆಯವರು ರಾತ್ರಿ ಮಹಿಳೆಯ ಮನೆಯಿಂದ ಜೋರಾಗಿ ಕೂಗುತ್ತಿರುವ ಶಬ್ದ ಕೇಳಿ ಬಾಗಿಲು ಮುರಿದು ಬಿದ್ದಿರುವುದನ್ನು ನೋಡಿ, ಕೆಲವು ಜನರೊಂದಿಗೆ ಮನೆಯ ಕಡೆಗೆ ಓಡಿದರು. ಮಹಿಳೆಯ ಮನೆಯೊಳಗೆ ಹೋದ ಜನರು ಆರೋಪಿ ಫಜ್ರ್‌ನನ್ನು ಹಿಡಿದು ಥಳಿಸಿದ್ದಾರೆ. ಆದರೆ, ಅವನು ಜನರ ಕೈಯಿಂದ ತಪ್ಪಿಸಿಕೊಂಡು ಪರಾರಿ ಆಗಿದ್ದಾನೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಾಂಗ್ಲಾದೇಶದ ಕುಮಿಲ್ಲಾದಲ್ಲಿ ಹಿಂದೂ ಮಹಿಳೆಯ ಮೇಲೆ ನಡೆದ ಅತ್ಯಾಚಾ*ರ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಘಟನೆಯ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ, ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಐದು ಆರೋಪಿಗಳು ಬಂಧನದಲ್ಲಿದ್ದಾರೆ ಮತ್ತು ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ.
