ಅಪ್ರಾಪ್ತೆ ಮೇಲೆ ಆಂಬುಲೆನ್ಸ್‌ನಲ್ಲಿ ಬಲಾತ್ಕಾರ: ಬಾಲಕಿಯ ಅಕ್ಕ ಭಾವನಿಂದಲೇ ಆರೋಪಿಗೆ ಸಹಾಯ
ಆಂಬುಲೆನ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಚಾಲಕ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಅಕ್ಕ ಭಾವ ಕೃತ್ಯಕ್ಕೆ ಸಹಕರಿಸಿದ ಆರೋಪವಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೌಗಂಜ್: ಆಂಬುಲೆನ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಂಬುಲೆನ್ಸ್ ಚಾಲಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೌಗಂಜ್‌ನಲ್ಲಿ ನಡೆದಿದೆ. ಈ ಬಾಲಕಿ ತನ್ನ ಕುಟುಂಬದವರ ಜೊತೆ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಅವರಲ್ಲಿ ಯಾರು ಕೂಡ ರೋಗಿಗಳಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುರ್ತು ಸೇವೆಗಾಗಿ ಇರುವ 108 ಆಂಬುಲೆನ್ಸ್‌ನಲ್ಲಿಯೇ ನವೆಂಬರ್ 22ರಂದು ಈ ಘಟನೆ ನಡೆದಿದ್ದು, ಆರೋಪಿಗೆ ಬಾಲಕಿಯ ಅಕ್ಕ ಭಾವನೇ ಕೃತ್ಯವೆಸಗಲು ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ರೇವಾ ಪ್ರದೇಶದ ಡೆಪ್ಯುಟಿ ಇನ್ಸ್‌ಪೆಕ್ಟರ್ ಸಕೇತ್ ಪಾಂಡೆ ಹೇಳಿದ್ದಾರೆ. ಘಟನೆ ನಡೆಯುವ ವೇಳೆ ಆಂಬುಲೆನ್ಸ್‌ನಲ್ಲಿ, ಬಾಲಕಿ ಆಕೆಯ ಅಕ್ಕ ಭಾವ ಹಾಗೂ ಆಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿ ತನ್ನ ಅಕ್ಕ ಹಾಗೂ ಭಾವನ ಜೊತೆ ಇದ್ದಳು. ಅಕ್ಕ ಭಾವ ಇಬ್ಬರ ವಿರುದ್ಧವೂ ಅಪರಾಧಕ್ಕೆ ಸಹಾಯ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಬಾಲಕಿಯ ಅಕ್ಕ ಭಾವನಿಗೆ ಆಂಬುಲೆನ್ಸ್ ಚಾಲಕನ ಬಗ್ಗೆ ತಿಳಿದಿತ್ತು. ಮಾರ್ಗಮಧ್ಯೆ ಅಕ್ಕ ಹಾಗೂ ಭಾವ ನೀರು ಕೊಳ್ಳುವ ನೆಪ ಹೇಳಿ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಇವರಿಗೆ ನಿಲ್ಲುವ ಬದಲು ಆಂಬುಲೆನ್ಸ್ ಚಾಲಕ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಿದ್ದಾರೆ.
ಇದೇ ವೇಳೆ ಚಾಲಕನ ಜೊತೆಗಿದ್ದ ಸಹಚರ ರಾಜೇಶ್ ಕೇವತ್ ಎಂಬಾತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಇಡೀ ರಾತ್ರಿ ಆಕೆಯನ್ನು ಜೊತೆ ಇರಿಸಿಕೊಂಡ ದುರುಳರು ನಂತರ ಮುಂಜಾನೆ ಆಕೆಯನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ. ಇದಾದ ನಂತರ ಬಾಲಕಿ ಅದ್ಹೇಗೋ ಮನೆ ತಲುಪಿದ್ದು, ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಆದರೆ ಸಮಾಜದಲ್ಲಿ ತನ್ನ ಕುಟುಂಬದ ಮಾನ ಹರಾಜಾಗಬಹುದು ಎಂಬ ಭಯದಲ್ಲಿ ಎರಡು ದಿನಗಳ ಕಾಲ ತಾಯಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ. ನಂತರ ನವಂಬರ್ 25ರಂದು ಧೈರ್ಯ ಮಾಡಿ ತಾಯಿ ಪೊಲೀಸರಿಗೆ ದೂರು ನೀಡಿದ್ದು, 25 ರಿಂದ 30ರ ಹರೆಯದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿಂತೆಯ ಅಡಿ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (POCSO)ಪ್ರಕರಣ ದಾಖಲಾಗಿದೆ. ಆಂಬುಲೆನ್ಸ್ ಚಾಲಕ ವೀರೇಂದ್ರ ಚತುರ್ವೇದಿ ಹಾಗೂ ರಾಜೇಶ್ ಕೇವತ್ ಅವರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಹಾಗೆಯೇ ಇವರ ಕೃತ್ಯಕ್ಕೆ ಸಹಕರಿಸಿದ ಬಾಲಕಿಯ ಅಕ್ಕ ಹಾಗೂ ಭಾವನಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪಾವಗಡ: ಆ್ಯಂಬುಲೆನ್ಸ್ ಸಿಗದ್ದಕ್ಕೆ ಬೈಕ್‌ನಲ್ಲಿ ಶವ ಸಾಗಿಸಿದ ಮಕ್ಕಳು!
ಇದನ್ನೂ ಓದಿ: ಗಂಡನ ಜೊತೆ ಪಿಕ್‌ನಿಕ್ ತೆರಳಿದ್ದ ನವವಿವಾಹಿತೆ ಮೇಲೆ ಐವರಿಂದ ಗ್ಯಾಂಗ್‌ರೇಪ್; 100 ಜನರು ವಶಕ್ಕೆ