ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ 'ಹಾರ್ಮುಜ್ ಜಲಸಂಧಿ' ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರೂ, ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಹೊತ್ತ 'ಶೆನ್‌ಲಾಂಗ್' ಟ್ಯಾಂಕರ್ ಯಶಸ್ವಿಯಾಗಿ ಮುಂಬೈ ತಲುಪಿದೆ. ಇರಾನ್ ಎಚ್ಚರಿಕೆಯ ನಡುವೆಯೂ, ಈ ನೌಕೆಯು ತನ್ನ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡಿ ರಹಸ್ಯವಾಗಿ ಈ ಮಾರ್ಗವನ್ನು ದಾಟಿದೆ.

ಬೆಂಗಳೂರು (ಮಾ.11): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ಕಾರಣದಿಂದಾಗಿ ವಿಶ್ವದ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ' (Strait of Hormuz) ಅಕ್ಷರಶಃ ಸ್ತಬ್ಧಗೊಂಡಿದೆ. ಈ ಅಪಾಯಕಾರಿ ಪರಿಸ್ಥಿತಿಯ ನಡುವೆಯೇ, ಇರಾನ್ ದೇಶದಲ್ಲದ ಕಚ್ಚಾ ತೈಲವನ್ನು ಹೊತ್ತ ಮೊದಲ ಟ್ಯಾಂಕರ್ ಯಶಸ್ವಿಯಾಗಿ ಈ ಮಾರ್ಗದ ಮೂಲಕ ಭಾರತಕ್ಕೆ ಬಂದು ತಲುಪಿದೆ ಎಂದು S&P ಗ್ಲೋಬಲ್ ಕಮೊಡಿಟಿಸ್ ವರದಿ ಮಾಡಿದೆ. ತನ್ನ ದೇಶದ ಹೊರತಾದ ಯಾವುದೇ ದೇಶದ ತೈಲ ಟ್ಯಾಂಕರ್‌ಅನ್ನು ಈ ಮಾರ್ಗದ ಮೂಲಕ ಸಾಗಲು ಬಿಡೋದಿಲ್ಲ, ಹಾಗೇನಾದರೂ ಸಾಗಿದರೆ ಕ್ಷಿಪಣಿ ದಾಳಿ ನಡೆಸೋದಾಗಿ ಇರಾನ್‌ ಎಚ್ಚರಿಸಿತ್ತು.

Add Asianetnews Kannada as a Preferred SourcegooglePreferred

ಮುಂಬೈಗೆ ಬಂತು 'ಶೆನ್‌ಲಾಂಗ್' ಟ್ಯಾಂಕರ್

S&P ಅಂಕಿಅಂಶಗಳ ಪ್ರಕಾರ, ಮಾರ್ಚ್ 1 ರಂದು ಸೌದಿ ಅರೇಬಿಯಾದ ಅತಿದೊಡ್ಡ ತೈಲ ರಫ್ತು ಟರ್ಮಿನಲ್ 'ರಾಸ್ ತನುರಾ'ದಿಂದ ತೈಲವನ್ನು ತುಂಬಿಸಿಕೊಂಡ ‘ಶೆನ್‌ಲಾಂಗ್’ (Shenlong) ಎಂಬ ಟ್ಯಾಂಕರ್ ಮಾರ್ಚ್ 10 ರಂದು ಭಾರತದ ಮುಂಬೈ ತೀರಕ್ಕೆ ಬಂದಿದೆ. ರಾಸ್ ತನುರಾದಲ್ಲಿದ್ದಾಗ ಹಡಗಿನ ಡ್ರಾಫ್ಟ್ (ನೀರಿನಲ್ಲಿ ಹಡಗಿನ ಆಳ) 9.3 ಮೀಟರ್ ಇತ್ತು, ಆದರೆ ಮುಂಬೈಗೆ ಬಂದಾಗ ಅದು 15.8 ಮೀಟರ್ ಆಗಿತ್ತು. ಇದು ಹಡಗಿನಲ್ಲಿ ಪೂರ್ಣ ಪ್ರಮಾಣದ ತೈಲ ಲೋಡ್ ಆಗಿರುವುದನ್ನು ಖಚಿತಪಡಿಸಿದೆ. ಈ ಹಡಗು 'ಶೆನ್‌ಲಾಂಗ್ ಶಿಪ್ಪಿಂಗ್ ಲಿಮಿಟೆಡ್' ಒಡೆತನದಲ್ಲಿದ್ದು, ಗ್ರೀಸ್‌ನ 'ಡೈನಾಕಾಮ್ ಟ್ಯಾಂಕರ್ಸ್ ಮ್ಯಾನೇಜ್‌ಮೆಂಟ್' ಇದನ್ನು ನಿರ್ವಹಿಸುತ್ತಿದೆ.

ರಹಸ್ಯ ಕಾರ್ಯಾಚರಣೆ?

ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟುವ ಮುನ್ನ ತನ್ನ ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ (AIS - ಹಡಗಿನ ಸ್ಥಾನ ತಿಳಿಸುವ ವ್ಯವಸ್ಥೆ) ಅನ್ನು ಆಫ್ ಮಾಡಿತ್ತು ಮತ್ತು ಜಲಸಂಧಿಯನ್ನು ದಾಟಿದ ನಂತರ ಮತ್ತೆ ಆನ್ ಮಾಡಿದೆ ಎಂದು ಟ್ರ್ಯಾಕಿಂಗ್ ಸಾಫ್ಟ್‌ವೇರ್ ತೋರಿಸಿದೆ. ಈ ಹಡಗಿನ ನಿಖರ ಗಮ್ಯಸ್ಥಾನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಅಮೆರಿಕ ನೌಕಾಪಡೆಯ ಬೆಂಗಾವಲು ಇಲ್ಲದೇ ಬಂದ ಟ್ಯಾಂಕರ್‌!

ಒಂದು ಹಂತದಲ್ಲಿ ಅಮೆರಿಕದ ಇಂಧನ ಸಚಿವ "ಅಮೆರಿಕ ನೌಕಾಪಡೆಯು ತೈಲ ಟ್ಯಾಂಕರ್‌ಗೆ ಬೆಂಗಾವಲಾಗಿ ನಿಂತು ಸುರಕ್ಷಿತವಾಗಿ ಹಾರ್ಮುಜ್ ದಾಟಿಸಿದೆ" ಎಂದು ಟ್ವೀಟ್ ಮಾಡಿದ್ದರು. ಆದರೆ ನಂತರ ಆ ಪೋಸ್ಟ್ ಅನ್ನು ತೆಗೆದುಹಾಕಲಾಯಿತು. ಈ ಕುರಿತು ಸ್ಪಷ್ಟನೆ ನೀಡಿದ ವೈಟ್ ಹೌಸ್, ಅಮೆರಿಕ ನೌಕಾಪಡೆ ಯಾವುದೇ ವಾಣಿಜ್ಯ ಹಡಗಿಗೆ ಬೆಂಗಾವಲು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಗಗನಕ್ಕೇರಿದ ಸಾಗಾಣಿಕೆ ವೆಚ್ಚ

ಸಂಘರ್ಷದ ಕಾರಣದಿಂದಾಗಿ ಹಾರ್ಮುಜ್ ಮೂಲಕ ತೈಲ ಸಾಗಾಣಿಕೆ ದರ ಭಾರಿ ಏರಿಕೆಯಾಗಿದೆ. ಫೆಬ್ರವರಿ 27 ರಂದು ಪ್ರತಿ ಮೆಟ್ರಿಕ್ ಟನ್‌ಗೆ $51.42 ಇದ್ದ ದರವು, ಮಾರ್ಚ್ 10 ರ ವೇಳೆಗೆ $158.63 ಕ್ಕೆ ಏರಿದೆ. ಇದು ತೈಲ ಬೆಲೆ ಏರಿಕೆಯ ಆತಂಕವನ್ನು ಹೆಚ್ಚಿಸಿದೆ.

ಭಾರತಕ್ಕೆ ಏಕೆ ಇದು ಆತಂಕಕಾರಿ?

ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಮತ್ತು ಭಾರತದ ಒಟ್ಟು ಇಂಧನ ಆಮದಿನ ಶೇ. 50 ರಷ್ಟು ಪಾಲನ್ನು ಹೊಂದಿದೆ. ಪ್ರಸ್ತುತ ಇಲ್ಲಿ ಹಡಗುಗಳ ಸಂಚಾರ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 60 ಹಡಗುಗಳು ಸಂಚರಿಸುತ್ತಿದ್ದವು, ಈಗ ಕೇವಲ 2-3 ಹಡಗುಗಳು ಮಾತ್ರ ಸಂಚರಿಸುತ್ತಿವೆ. ಪರ್ಯಾಯವಾಗಿ ಫುಜೈರಾ ಮತ್ತು ಯಾನ್ಬು ರಫ್ತು ಮಾರ್ಗಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಹಾರ್ಮುಜ್ ಮಾರ್ಗದ ನಷ್ಟವನ್ನು ತುಂಬಲು ಅವು ಸಾಕಾಗುತ್ತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

S&P ಗ್ಲೋಬಲ್ ಎನರ್ಜಿಯ ಕಚ್ಚಾ ತೈಲ ಸಂಶೋಧನಾ ಮುಖ್ಯಸ್ಥ ಜಿಮ್ ಬುರ್ಖಾರ್ಡ್ ಅವರ ಪ್ರಕಾರ, 'ಏಷ್ಯಾ ಮಾರುಕಟ್ಟೆಯಲ್ಲಿ ಈಗಾಗಲೇ ತೈಲ ಒತ್ತಡ ಎದ್ದುಕಾಣುತ್ತಿದೆ. ಏಷ್ಯಾದ ಸಂಸ್ಕರಣಾಗಾರಗಳ ಅರ್ಧದಷ್ಟು ತೈಲ ಗಲ್ಫ್ ಪ್ರದೇಶದಿಂದಲೇ ಬರುತ್ತದೆ. ಹಾರ್ಮುಜ್ ಜಲಸಂಧಿ ಹೆಚ್ಚು ಕಾಲ ಮುಚ್ಚಲ್ಪಟ್ಟರೆ, ಅದು ಕೇವಲ ಏಷ್ಯಾ ಮಾತ್ರವಲ್ಲದೆ ಜಾಗತಿಕ ತೈಲ ದಾಸ್ತಾನು ಮತ್ತು ಬೆಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ' ಎಂದಿದ್ದಾರೆ.