ಒಂಟಿ ಯುವತಿಯರೇ ಎಚ್ಚರ: ಟ್ರಿಪ್‌ಗೆ ಹೋದ ಅಪ್ರಾಪ್ತೆಯನ್ನು ‘ವಧು’ ಎಂದು 2 ಬಾರಿ ಮಾರಾಟ ಮಾಡಿದ ಕೀಚಕರು!
10ನೇ ತರಗತಿ ಪರೀಕ್ಷೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದ ಮಧ್ಯಪ್ರದೇಶದ 17 ವರ್ಷದ ಯುವತಿಯನ್ನು ಎರಡು ಬಾರಿ ಅಪಹರಿಸಿ ವಧುವಿನಂತೆ ಮಾರಾಟ ಮಾಡಲಾಗಿರುವ ಘಟನೆ ದೇಶದಲ್ಲಿ ನಡೆದಿದೆ.
ಕೋಟಾ, ರಾಜಸ್ಥಾನ (ಮೇ 3, 2023) : ಸೋಲೋ ರೈಡ್, ಸೋಲೋ ಟ್ರಿಪ್ ಎಂಬುದು ಈಗ ಟ್ರೆಂಡ್ ಆಗುತ್ತಿದ್ದು, ಯುವಕರು ಅಥವಾ ಯುವತಿಯರು ಏಕಾಂಗಿಯಾಗಿ ದೇಶ, ವಿದೇಶ ಎಲ್ಲ ಕಡೆಯೂ ಏಕಾಂಗಿಯಾಗಿ ಸುತ್ತುತ್ತಾರೆ. ಆದರೆ, ಈ ವೇಳೆ ಏನೇನು ತೊಂದರೆಗಳಾಗಬಹುದು ಅನ್ನೋದಕ್ಕೆ ಈ ಸ್ಟೋರಿ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದು. 10ನೇ ತರಗತಿ ಪರೀಕ್ಷೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದ ಮಧ್ಯಪ್ರದೇಶದ 17 ವರ್ಷದ ಯುವತಿಯನ್ನು ಎರಡು ಬಾರಿ ಅಪಹರಿಸಿ ವಧುವಿನಂತೆ ಮಾರಾಟ ಮಾಡಲಾಗಿರುವ ಘಟನೆ ನಡೆದಿದೆ.
17 ವರ್ಷದ ಯುವತಿಯನ್ನು ಎರಡು ಬಾರಿ ಅಪಹರಿಸಿ ವಧುವಿನಂತೆ ಮಾರಾಟ ಮಾಡಲಾಗಿದೆ ಎಂದು ರಾಜಸ್ಥಾನದ ಕೋಟಾದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಈ ಸಂಬಂಧ ಯುವತಿ ಆತ್ಮಹತ್ಯೆಗೂ ಮುಂದಾಗಿದ್ದಳು ಎಂದೂ ತಿಳಿದುಬಂದಿದೆ. ಆಕೆ ತನ್ನ ಇಚ್ಛೆಗೆ ವಿರುದ್ಧವಾಗಿ ತಿಂಗಳುಗಟ್ಟಲೆ ಇದ್ದ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸ್ವಲ್ಪ ಸಮಯದ ನಂತರ ರೈಲ್ವೆ ಪೊಲೀಸರು ವಿದ್ಯಾರ್ಥಿನಿಯನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕನೀಜ್ ಫಾತಿಮಾ ಹೇಳಿದ್ದಾರೆ.
ಇದನ್ನು ಓದಿ: ಆರತಕ್ಷತೆ ನಡೆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತದಲ್ಲಿ ಬಲಿಯಾದ ವಧು; ವರನಿಗೆ ಗಂಭೀರ ಗಾಯ!
ಐದು ತಿಂಗಳ ಹಿಂದೆ 10 ನೇ ತರಗತಿ ಪರೀಕ್ಷೆ ಬರೆದ ನಂತರ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯಿಂದ ಪ್ರವಾಸಕ್ಕೆ ಹೊರಟಾಗ ಈ ಅಗ್ನಿಪರೀಕ್ಷೆ ಪ್ರಾರಂಭವಾಯಿತು ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಯುವತಿ ಕಟ್ನಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಕೆಲವು ಯುವಕರು ಆಕೆಯೊಂದಿಗೆ ಸ್ನೇಹ ಬೆಳೆಸಿದರು ಮತ್ತು ಹತ್ತಿರದ ಉದ್ಯಾನವನಕ್ಕೆ ಕರೆದೊಯ್ದರು. ಅಲ್ಲಿ ಅವರು ಆಕೆಗೆ ಆಹಾರ ಮತ್ತು ಪಾನೀಯವನ್ನು ನೀಡಿದರು. ಅದನ್ನು ಸೇವಿಸಿದ ನಂತರ ಆಕೆ ಪ್ರಜ್ಞಾಹೀನಳಾದಳು ಎಂದು ಕನೀಜ್ ಫಾತಿಮಾ ಮಾಹಿತಿ ನೀಡಿದ್ದಾರೆ.
ಬಳಿಕ, ಬಾಲಕಿಗೆ ಪ್ರಜ್ಞೆ ಬಂದಾಗ, ಉಜ್ಜಯಿನಿಯ ಹೋಟೆಲ್ ಕೊಠಡಿಯಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾಳೆ ಎಂದು ಅವರು ಹೇಳಿದರು. ನಂತರ, ಅವರು ತನಗೆ ಬೆದರಿಕೆ ಹಾಕಿದರು ಮತ್ತು 27 ವರ್ಷದ ಯುವಕನನ್ನು ಮದುವೆಯಾಗುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಮದುವೆಯಾದ ನಂತರ ಆ ವ್ಯಕ್ತಿ ತಾನು 2 ಲಕ್ಷ ರೂ.ಗೆ ಖರೀದಿಸಿರುವುದಾಗಿ ಆಕೆಗೆ ತಿಳಿಸಿದ್ದಾನೆ ಎಂದೂ ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಯುವತಿಯರಿಗೆ ಯಾಮಾರಿಸಿದ ಮನೆ ಮಾಲೀಕ: ಬೆಡ್‌ರೂಮ್, ಬಾತ್ರೂಮ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ವಂಚಕ
ಆದರೆ, ಈ ರೀತಿ ಮದುವೆಯಾದ ನಾಲ್ಕು ತಿಂಗಳ ನಂತರ ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಆ ವ್ಯಕ್ತಿ ಮೃತಪಟ್ಟಿದ್ದು, ಆತನ ಕುಟುಂಬಸ್ಥರು ಬಾಲಕಿಯನ್ನು ಕೋಟಾ ಜಿಲ್ಲೆಯ ಕನ್ವಾಸ್ ಪ್ರದೇಶದಲ್ಲಿ ಮದುವೆಯ ನೆಪದಲ್ಲಿ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. ದೈಹಿಕ ಶೋಷಣೆಯನ್ನು ಸಹಿಸಲಾಗದೆ ಮತ್ತು ತನ್ನ “ಎರಡನೇ ಪತಿ” ತನ್ನನ್ನು 3 ಲಕ್ಷ ರೂಪಾಯಿಗೆ ಖರೀದಿಸಿದ್ದಾನೆ ಎಂದು ಯುವತಿ ಕಂಡುಕೊಂಡ ಬಳಿಕ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ ಎಂದೂ ಯುವತಿ ತನ್ನ ನೋವು ತೋಡಿಕೊಂಡಿದ್ದಾಳೆ. ಆದ್ದರಿಂದ ಆಕೆ ಆ ‘’ಎರಡನೇ ಪತಿ’’ಯ ಮನೆಯಿಂದ ಓಡಿ ಬಂದಿದ್ದಾಳೆ ಎಂದೂ CWC ಅಧ್ಯಕ್ಷೆ ಕನೀಜ್ ಫಾತಿಮಾ ಹೇಳಿದರು.
ಬಳಿಕ ಅವಳು ಸ್ಥಳೀಯ ರೈಲು ನಿಲ್ದಾಣವನ್ನು ತಲುಪಿದಳು ಮತ್ತು ಕೋಟಾ ನಗರಕ್ಕೆ ರೈಲು ಹತ್ತಿದಳು. ಅಪ್ರಾಪ್ತ ಬಾಲಕಿಯ ಸ್ಥಿತಿಯನ್ನು ಗಮನಿಸಿದ ರೈಲ್ವೆ ಪೊಲೀಸ್ ಸಿಬ್ಬಂದಿ ಸೋಮವಾರ ಬೆಳಗ್ಗೆ ಕೋಟಾ ರೈಲು ನಿಲ್ದಾಣದಲ್ಲಿ ಆಕೆಯ ಬಳಿಗೆ ಬಂದರು. ಅವರು ಮಕ್ಕಳ ಸಹಾಯವಾಣಿ ಮತ್ತು ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದ ನಂತರ ತನ್ನ ಸಂಕಟವನ್ನು ಪೊಲೀಸರಿಗೆ ವಿವರಿಸಿದರು ಎಂದೂ ಅವರು ಹೇಳಿದರು.
ಇದನ್ನೂ ಓದಿ: ರೇವಾ ವಿವಿ ವಿದ್ಯಾರ್ಥಿ ಕೊಲೆ ಕೇಸ್: ಓರ್ವ ವಿದ್ಯಾರ್ಥಿ ಅರೆಸ್ಟ್; ಇನ್ನೂ ಕೆಲ ಆರೋಪಿಗಳಿಗಾಗಿ ಶೋಧ ಕಾರ್ಯ
ಈ ಸಂಬಂಧ ಬಾಲಕಿಯ ಪೋಷಕರನ್ನು ಸಂಪರ್ಕಿಸಲಾಗಿದ್ದು, ಪೋಷಕರು ಮತ್ತು ಸ್ಥಳೀಯ ಪೊಲೀಸರು ಬುಧವಾರ ಕೋಟಾ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.