ಇಂದು (ಜು.24) ರಾತ್ರಿ ಗಂಟೆಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಹಲವು ಘೋಷಣೆಗಳು ಹೊರಬೀಳಲಿದೆ. ನೀಟ್ ಪೇಪರ್ ಲೀಕ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನ್ ನಡೆ ತೀವ್ರ ಕುತೂಹಲ ಕೆರಳಿಸಿದೆ.

ನವದೆಹಲಿ (ಜು.24) ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂದ ನೀಟ್ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ, ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘಟನೆಗಳು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದೆ. ಕಾಕ್ರೋಚ್ ಜನತಾ ಪಾರ್ಟಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು (ಜುಲೈ 24) ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ. ಹಲವು ಮಹತ್ವದ ಘೋಷಣೆಗಳು ಹೊರಬೀಳಲಿದೆ.

ರಾಜೀನಾಮೆ ಘೋಷಿಸ್ತಾರ ಧರ್ಮೇಂದ್ರ ಪ್ರಧಾನ್?

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ 8 ಗಂಟೆಗೆ ವಿದ್ಯಾರ್ಥಿಗಳು ಸೇರಿದಂತೆ ಜನತೆಯನ್ನುದ್ದೇಶಿ ಧರ್ಮೇಂದ್ರ ಪ್ರಧಾನ್ ಮಾತನಾಡಲಿದ್ದಾರೆ. ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ರಾಜೀನಾಮೆ ಮಾತುಗಳು ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿಲ್ಲ. ಇದರ ಬದಲಾಗಿ ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ಸೇರಿದಂತೆ ಪರೀಕ್ಷಾ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಧರ್ಮೇದ್ರ ಪ್ರಧಾನ್ ಘೋಷಣೆ ಏನು?

2027ರಿಂದ ನೀಟ್ ಪರೀಕ್ಷೆ ಹೊಸ ಮಾದರಿಯಲ್ಲಿ ನಡೆಯಲಿದೆ. ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯಾಗಲಿದೆ. ಜೊತೆಗೆ ನೀಟ್ ಮಾತ್ರವಲ್ಲ ಎಲ್ಲಾ ಪರೀಕ್ಷೆಗಳ ವಿಧಾನ, ಮೇಲ್ವಿಚಾರಣೆ ಬದಲಾಗಲಿದೆ. ಈ ಕುರಿತು ಈಗಾಗಲೇ ಹೊಸ ಮಸೂದೆ ಚರ್ಚೆಗಳು ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಧರ್ಮೇಂದ್ರ ಪ್ರಧಾನ್ ಮಾತನಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳು ಇಂದು ಮತ್ತೆ ಜೆಪಿ ನಡ್ಡಾ ಹಾಗೂ ಜೇತಂದ್ರ ಸಿಂಗ್ ಭೇಟಿಯಾಗಿ ಮೂರು ಪ್ರಮುಖ ಬೇಡಿಕೆಯನ್ನು ಮಂದಿಟ್ಟಿದೆ. ಈ ಪೈಕಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ನೀಟ್ ಸಂತ್ರಸ್ತರಿಗೆ 1 ಕೋಟಿ ರೂಪಾಯಿ ಪರಿಹಾರ, ಸಂಸತ್ತಿನಲ್ಲಿ ನೀಟ್ ಹಾಗೂ ಪರೀಕ್ಷೆ ಕುರಿತು ಚರ್ಚೆ ಹಾಗೂ ಅಮೂಲಾಗ್ರ ಬದಲಾವಣೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ಬೇಡಿಕೆ ಸಲ್ಲಿಸಿದೆ. ಈ ಪೈಕಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಕೇಂದ್ರ ಸರ್ಕಾರ ಒಲವು ವ್ಯಕ್ತಪಡಿಸಿಲ್ಲ.

ರಾತ್ರಿ 8 ಗಂಟಗೆ ಧರ್ಮೇಂದ್ರ ಪ್ರಧಾನ್ ಹೇಳಿಕೆಗಾಗಿ ಇದೀಗ ಜನ ಕಾಯುತ್ತಿದ್ದಾರೆ. ಇತ್ತ ಪ್ರತಿಟನೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಮಾತಿನ ಬಳಿಕ ಪ್ರತಿಭಟನೆ ರೂಪುರೇಶೆ ನಿರ್ಧರಿಸಲು ಮುಂದಾಗಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸಲು ಮುಂದಾಗಿದ್ದಾರೆ.