ಉಗ್ರರಿಗೆ ಹೆದರಿ ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಓಡಿಬಂದ ಬರ್ಮಾ ಸೈನಿಕರು!
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಿ ಜುಂಟಾ ಸರ್ಕಾರ ಹಾಗೂ ಸ್ಥಳೀಯ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿರುವ ಪರಿಣಾಮ ನೂರಾರು ಸೈನಿಕರು ಜೀವ ಉಳಿಸಿಕೊಳ್ಳಲು ಭಾರತದ ಮಿಜೋರಂಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ.
ಗುವಾಹಟಿ: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಿ ಜುಂಟಾ ಸರ್ಕಾರ ಹಾಗೂ ಸ್ಥಳೀಯ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿರುವ ಪರಿಣಾಮ ನೂರಾರು ಸೈನಿಕರು ಜೀವ ಉಳಿಸಿಕೊಳ್ಳಲು ಭಾರತದ ಮಿಜೋರಂಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. 600ಕ್ಕೂ ಹೆಚ್ಚು ಸೈನಿಕರು ಹೀಗೆ ಭಾರತಕ್ಕೆ ಪ್ರವೇಶಿಸಿದ್ದು, ಅವರನ್ನು ಮರಳಿ ಕಳುಹಿಸುವಂತೆ ಮಿಜೋರಂ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ.
ಮ್ಯಾನ್ಮಾರ್‌ನಿಂದ ಓಡಿಬಂದ ಸೈನಿಕರಿಗೆ ಮಾನವೀಯತೆಯ ಆಧಾರದ ಮೇಲೆ ಅಸ್ಸಾಂ ರೈಫಲ್ಸ್ ರೆಜಿಮೆಂಟ್‌ನ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಈ ಹಿಂದೆ ಬಂದಿದ್ದ 450ಕ್ಕೂ ಹೆಚ್ಚು ಸೈನಿಕರನ್ನು ವಿಮಾನದಲ್ಲಿ ಮರಳಿ ಕಳುಹಿಸಲಾಗಿತ್ತು. ಆದರೂ ಅಲ್ಲಿಂದ ಸೈನಿಕರು ಗಡಿ ದಾಟಿ ಬರುವುದು ಹೆಚ್ಚುತ್ತಲೇ ಇದೆ ಎಂದು ಮಿಜೋರಂ ಮುಖ್ಯಮಂತ್ರಿ ಲಾಲ್ಡುಹೋಮ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕರಿತು ಶಿಲ್ಲಾಂಗ್‌ನಲ್ಲಿ ನಡೆದ ಈಶಾನ್ಯ ರಾಜ್ಯಗಳ ಮಂಡಳಿಯ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಲಾಲ್ಡುಹೊಮ ಮಾತುಕತೆ ನಡೆಸಿದ್ದಾರೆ. ವಿದೇಶಿ ಸೈನಿಕರ ಆಗಮನದಿಂದ ಮಿಜೋರಂನ ಜನರಿಗೆ ತೊಂದರೆ ಉಂಟಾಗುವುದಕ್ಕಿಂತ ಮೊದಲು ಅವರನ್ನು ವಾಪಸ್ ಕಳುಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದ್ದ ಜನಾಂಗೀಯ ಸಂಘರ್ಷದ ಲಾಭ ಪಡೆದು 2021ರಲ್ಲಿ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಜುಂಟಾ ಮಿಲಿಟರಿ ಪಡೆ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಆನಂತರವೂ ಜನಾಂಗೀಯ ಸಂಘರ್ಷ ನಿಂತಿಲ್ಲ. ಈಗ ಭಾರತದ ಗಡಿ ರಾಜ್ಯವಾದ ರಖಾಯಿನ್‌ನಲ್ಲಿ ಸ್ಥಳೀಯ ಬಂಡುಕೋರರ ಅರಾಕನ್ ಸೇನೆಯು ಜುಂಟಾ ಮಿಲಿಟರಿಯ ಶಿಬಿರಗಳನ್ನು ವಶಪಡಿಸಿಕೊಂಡಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಸೈನಿಕರು ಮಿಜೋರಂಗೆ ಅಕ್ರಮವಾಗಿ ಪ್ರವೇಶಿಸಿ ಆಶ್ರಯ ಕೇಳುತ್ತಿದ್ದಾರೆ.