Padma Awards 2022: 128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!
*ಜ.ರಾವತ್, ಕಲ್ಯಾಣ್‌ಸಿಂಗ್, ಪ್ರಭಾ, ರಾಧೇಶ್ಯಾಮ್‌ಗೆ ಪದ್ಮವಿಭೂಷಣ
*ಆಜಾದ್, ಬುದ್ಧದೇವ್, ನಾದೆಲ್ಲಾ, ಪಿಚೈ, ಪೂನಾವಾಲಗೆ ಪದ್ಮಭೂಷಣ
*4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಪುರಸ್ಕೃತರು
*ಪುರಸ್ಕೃತರದಲ್ಲಿ 34 ಮಹಿಳೆಯರು, 10 ವಿದೇಶಿಯರು/ಎನ್‌ಆರ್‌ಐ
ನವದೆಹಲಿ (ಜ. 26): ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇಶ- ವಿದೇಶಗಳ 128 ಗಣ್ಯರಿಗೆ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 4 ಜನರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ, 107 ಜನರಿಗೆ ಪದ್ಮಶ್ರೀ ನೀಡಲಾಗಿದೆ. ಪುರಸ್ಕೃತರಲ್ಲಿ 34 ಮಹಿಳೆಯರು, 10 ವಿದೇಶಿಯರು/ ಅನಿವಾಸಿ ಭಾರತೀಯರು/ ಭಾರತೀಯ ಮೂಲದ ವಿದೇಶಿಯರು/ ಸಾಗರೋತ್ತರ ಭಾರತೀಯರು ಸೇರಿದ್ದಾರೆ. ಜೊತೆಗೆ 13 ಜನರಿಗೆ ಮರಣೋತ್ತರವಾಗಿ ಗೌರವ ಪ್ರಕಟಿಸಲಾಗಿದೆ.
ಪದ್ಮವಿಭೂಷಣ: ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ದಿ.ಜ.ಬಿಪಿನ್ ರಾವತ್, ಬಿಜೆಪಿಯ ಹಿಂದುತ್ವದ ಮುಖವಾಡ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್, ಉತ್ತರಪ್ರದೇಶದ ಗೋರಖ್‌ಪುರದ ಗೀತಾ ಪ್ರೆಸ್ ಅಧ್ಯಕ್ಷ ದಿ. ರಾಧೇಶ್ಯಾಮ್ ಖೇಮ್ಕಾ ಮತ್ತು ಖ್ಯಾತ ಗಾಯಕಿ ಪ್ರಭಾ ಅತ್ರೆ ಅವರಿಗೆ ಪ್ರಸಕ್ತ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.
ಪದ್ಮಭೂಷಣ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್, ಬಂಗಾಳದ ಸಿಪಿಎಂ ನಾಯಕ, ಮಾಜಿ ಸಿಎಂ ದಿ.ಬುದ್ಧದೇವ್ ಭಟ್ಟಾಚಾರ್ಯ, ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್, ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಅಧ್ಯಕ್ಷ ಸತ್ಯ ನಾದೆಳ್ಲಾ, ಗೂಗಲ್‌ನ ಸುಂದರ್ ಪಿಚೈ, ನಟ ವಿಕ್ಟರ್ ಬ್ಯಾನರ್ಜಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾದ ಪ್ರಮುಖರು.
ಪದ್ಮಶ್ರೀ: ಖ್ಯಾತ ಗಾಯಕ ಸೋನು ನಿಗಂ, ಚಾಣಕ್ಯ ಧಾರಾವಾಹಿ ಖ್ಯಾತಿಯ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಖಂಡು ವಾಂಗ್ಚುಕ್ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಪ್ರಮುಖರು.
ಯೋಧರಿಗೆ ಶೌರ್ಯ ಪದಕ: ಜೀವದ ಹಂಗು ತೊರೆದ ಕಾರ್ಯನಿರ್ವಹಿಸಿದ ಯೋಧರಿಗೆ ಕೇಂದ್ರ ಸರ್ಕಾರ ಮಂಗಳವಾರ ವಿವಿಧ ಶೌರ್ಯ ಮತ್ತು ಇತರೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪೈಕಿ 12 ಯೋಧರಿಗೆ ಶೌರ್ಯ ಪುರಸ್ಕಾರ, 29 ಪರಮ ವಿಶಿಷ್ಟಸೇವಾ ಪದಕ, 4 ಯೋಧರಿಗೆ ಉತ್ತಮ ಯುದ್ಧ ಸೇವಾ ಪದಕ, 53 ಅತಿ ವಿಶಿಷ್ಟಸೇವಾ ಪುರಸ್ಕಾರ, 13 ಯೋಧರಿಗೆ ಯುದ್ಧ ಸೇವಾ ಪದಕಗಳು ಸೇರಿದಂತೆ 384 ಭದ್ರತಾ ಯೋಧರಿಗೆ ಗೌರವ ಪ್ರಕಟಿಸಲಾಗಿದೆ. ಇದಲ್ಲದೆ 122 ವಿಶಿಷ್ಠ ಸೇವಾ ಪದಕಗಳು, 3 ಸೇನಾ ಶೌರ್ಯ ಪದಕಗಳು, 81 ಸೇನಾ ಶೌರ್ಯ ಪದಕಗಳು, ಇಬ್ಬರಿಗೆ ವಾಯು ಸೇನಾ ಪದಕಗಳು, 40 ಸೇನಾ ಪದಕಗಳು ಸೇರಿದಂತೆ ಸೇನೆಯ ಹಲವು ಯೋಧರಿಗೆ ರಾಷ್ಟ್ರಪತಿ ಕೋವಿಂದ್ ಅವರು ಪುರಸ್ಕಾರಗಳನ್ನು ಪ್ರದಾನ ಮಾಡಿ ಗೌರವಿಸಲಿದ್ದಾರೆ.
ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದವರಿಗೆ ಗೌರವ: ವಿಶ್ವದ ಅತಿದೊಡ್ಡ ಲಸಿಕಾ ಉತ್ಪಾದನಾ ಸಂಸ್ಥೆ ಮತ್ತು ಇತ್ತೀಚಿನ ಕೋವಿಡ್ ಲಸಿಕೆ (ಕೋವಿಶೀಲ್ಡ್) ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಕಂಪನಿಯಾಗಿರುವ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಸೈರಸ್ ಪೂನಾವಾಲ ಮತ್ತು ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿರುವ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥಾಪಕರಾದ ಕೃಷ್ಣಾ ಎಲ್ಲಾ ಮತ್ತು ಸುಚಿತ್ರಾ ಎಲ್ಲಾ ಅವರಿಗೆ ಪದ್ಮಭೂಷಣ ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರ ಗೌರವಿಸಿದೆ.
ನೀರಜ್ ಚೋಪ್ರಾಗೆ ವಿಶಿಷ್ಟಸೇವಾ ಪದಕ: ಜಪಾನ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಅವರಿಗೆ ಗಣರಾಜ್ಯೋತ್ಸವದ ದಿನದಂದು ಪರಮ ವಿಶಿಷ್ಟಸೇವಾ ಪದಕ ಪ್ರಕಟಿಸಲಾಗಿದೆ. ನೀರಜ್ ಚೋಪ್ರಾ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಕ್ರೀಡಾಪಟು ಎಂಬ ಹಿರಿಮೆ ಕೂಡಾ ಹೊಂದಿದ್ದಾರೆ. ಜೂನಿಯರ್ ಕಮೀಷನ್‌್ಡ ಅಧಿಕಾರಿಯಾಗಿ ಸೇನೆ ಸೇರಿದ್ದ ನೀರಜ್, ಏಷ್ಯನ್ ಪದಕ ವಿಜೇತರಾದ ಬಳಿಕ 2016ರಲ್ಲಿ 4 ರಜಪುತಾನಾ ರೈಫಲ್ಸ್‌ನಲ್ಲಿ ನಯೀಬ್ ಸುಬೇದಾರ್ ಹುದ್ದೆಗೆ ಬಡ್ತಿ ಪಡೆದಿದ್ದರು.