ಮೇಘಾಲಯದ ಪ್ರಧಾನ ಕಾರ್ಯದರ್ಶಿ ಸೈಯದ್ ಎಂಡಿ ಎ ರಾಝಿ ಉಜ್ಬೇಕಿಸ್ತಾನದ ಹೊಟೇಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶಿಲ್ಲಾಂಗ್: ಮೇಘಾಲಯ ಆಡಳಿತ ಪ್ರಧಾನ ಕಾರ್ಯದರ್ಶಿ ಉಜ್ಬೆಕಿಸ್ತಾನದ ಹೊಟೇಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಘಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಸೈಯದ್ ಎಂಡಿ ಎ ರಾಝಿ ಅವರು ಸೋಮವಾರ ಮುಂಜಾನೆ ಯಾವುದೇ ಫೋನ್ ಕರೆಗಳಿಗೆ ಉತ್ತರಿಸದ ಹಿನ್ನೆಲೆ ಹೊಟೇಲ್ ಸಿಬ್ಬಂದಿ ಅವರು ವಾಸವಿದ್ದ ರೂಮ್‌ನ ಬಾಗಿಲು ಒಡೆದು ಒಳನುಗ್ಗಿದಾಗ ಅವರು ಶವವಾಗಿ ಮಲಗಿರುವುದು ಕಂಡು ಬಂದಿದೆ. ಪ್ರಧಾನ ಕಾರ್ಯದರ್ಶಿ ವಿದೇಶದಲ್ಲಿ ಸಾವನ್ನಪ್ಪಿರುವುದರಿಂದ ಅವರ ಪಾರ್ಥಿವವನ್ನು ದೇಶಕ್ಕೆ ತರಲು ನಡೆಸಬೇಕಾಗಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಸೈಯದ್ ಅವರ ಪತ್ನಿ ಉಜ್ಬೆಕಿಸ್ತಾನದ ಬುಖಾರದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಮೇಘಾಲಯ ಸಿಎಂ ಕಾನ್ರಾಡ್ ಕೆ ಸಂಗ್ಮಾ ಅವರು ಮಾಹಿತಿ ನೀಡಿದ್ದಾರೆ.
ಮಧ್ಯ ಏಷ್ಯಾದ ದೇಶವಾದ ಉಜ್ಬೆಕಿಸ್ತಾನಕ್ಕೆ ಸೈಯದ್ ಅವರು ಖಾಸಗಿ ಭೇಟಿ ನೀಡಿದ್ದರು. ಐಆರ್‌ಟಿಸಿ ಅಧಿಕಾರಿಯಾಗಿದ್ದ ಅವರನ್ನು 2021ರಿಂದ ಮೇಘಾಲಯದ ರಾಜ್ಯ ಸೇವೆಗೆ ನಿಯೋಜಿಸಲಾಗಿತ್ತು. ಉಜ್ಬೇಕಿಸ್ತಾನಕ್ಕೆ ತೆರಳಿದ ಅವರು ಏಪ್ರಿಲ್ 4ರಿಂದಲೂ ಅಲ್ಲಿನ ಐತಿಹಾಸಿಕ ಸ್ಥಳವಾದ ಬುಖಾರ ನಗರದಲ್ಲಿದ್ದರು. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ರಾಝಿ ಅವರು ಸೋಮವಾರ ಮುಂಜಾನೆಯಿಂದಲೂ ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ, ಹೀಗಾಗಿ ನಂತರ ಹೊಟೇಲ್ ಸಿಬ್ಬಂದಿ ಅವರು ಉಳಿದಿದ್ದ ಕೋಣೆಯ ಬೀಗ ಒಡೆದು ನೋಡಿದಾಗ ಅವರು ಸಾವಿಗೀಡಾಗಿರುವುದು ತಿಳಿದು ಬಂದಿದೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಪ್ರಧಾನ ಕಾರ್ಯದರ್ಶಿ ರಾಜಿ ನಿಧನಕ್ಕೆ ಮೇಘಾಲಯ ಸಿಎಂ ಸಂಗ್ಮಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೈಯದ್ ರಾಜಿ ಅವರ ಹಠಾತ್ ಸಾವಿನಿಂದ ನಮಗೆ ಆಳವಾದ ನೋವಾಗಿದೆ. ಅವರು ಐಆರ್‌ಟಿಎಸ್ ಅಧಿಕಾರಿಯಾಗಿದ್ದು, ಮೇಘಾಲಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರಿಟರಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜಿಯವರ ಅದ್ಭುತ ದಕ್ಷತೆ ಮತ್ತು ಅಚಲ ಸಮರ್ಪಣೆ ಅವರು ನಿರ್ವಹಿಸಿದ ಪ್ರತಿಯೊಂದು ವಿಭಾಗದಲ್ಲೂ ಸ್ಪಷ್ಟವಾಗಿತ್ತು, ಮತ್ತು ಅವರು ಯಾವಾಗಲೂ ಪ್ರತಿಯೊಂದು ಕೆಲಸವನ್ನು ತಮ್ಮ ಸುತ್ತಲಿನವರಿಗೆ ಸ್ಫೂರ್ತಿ ನೀಡುವ ಮಟ್ಟದ ಮಾಲೀಕತ್ವದೊಂದಿಗೆ ಮಾಡುತ್ತಿದ್ದರು.
ಆದರೆ ಅವರ ಕೆಲಸದ ನೀತಿಯನ್ನು ಮೀರಿ, ರಾಜಿ ಅವರು ಭೇಟಿಯಾದ ಎಲ್ಲರಿಗೂ ಬೆಳಕನ್ನು ನೀಡುವ ಬೆಚ್ಚಗಿನ, ಹರ್ಷಚಿತ್ತದಿಂದ ಕೂಡಿದ ವ್ಯಕ್ತಿತ್ವವಾಗಿದ್ದರು. ಅವರನ್ನು ಅವರ ಗೆಳೆಯರು ತುಂಬಾ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು ಮತ್ತು ಅವರ ಅನುಪಸ್ಥಿತಿಯು ನಮ್ಮೆಲ್ಲರಲ್ಲಿ ಆಳವಾದ ಶೂನ್ಯವನ್ನುಂಟುಮಾಡುತ್ತದೆ ಎಂದು ಸಿಎಂ ಹೇಳಿದರು. ಮೇಘಾಲಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೈಯದ್ ಎಂಡಿ. ಎ. ರಾಜಿ ಅವರ ನಿಧನದ ಬಗ್ಗೆ ಕೇಳಿ ನನಗೆ ದುಃಖವಾಯಿತು. ನಾನು ಅರಣ್ಯ ಸಚಿವರಾಗಿದ್ದಾಗ ಅವರು ನನ್ನ ಆಯುಕ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಮೇಘಾಲಯ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಜೇಮ್ಸ್ ಕೆ ಸಂಗ್ಮಾ ಪೋಸ್ಟ್ ಮಾಡಿದ್ದಾರೆ.
