ಮೀಶೋದಿಂದ ಲಾರೆನ್ಸ್ ಬಿಷ್ಣೋಯಿ ಚಿತ್ರ ಇರುವ ಟೀ ಶರ್ಟ್ ಮಾರಾಟ!
ಮೀಶೋದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಚಿತ್ರವಿರುವ ಟೀ ಶರ್ಟ್ ಮಾರಾಟ ಆರಂಭಿಸಿ, ಆಕ್ರೋಶದ ನಂತರ ಮಾರಾಟವನ್ನು ನಿಲ್ಲಿಸಲಾಗಿದೆ.
'ಬಿಷ್ಣೋಯಿ ಟೀಶರ್ಟ್' ಮಾರಾಟ: ವಿವಾದ
ಮುಂಬೈ: ಜನಪ್ರಿಯ ಇ-ಕಾಮರ್ಸ್ ವೇದಿಕೆ ಮೀಶೋ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಚಿತ್ರ ಇರುವ ಟೀ ಶರ್ಟ್ ಮಾರಾಟ ಆರಂಭಿಸಿ ವಿವಾದ ಸೃಷ್ಟಿಸಿದೆ. ಆದರೆ ಇದಕ್ಕೆ ಆಕ್ರೋಶ ವ್ಯಕ್ತವಾದ ಬಳಿಕ ಮಾರಾಟ ನಿಲ್ಲಿಸಿದೆ. ಚಿತ್ರ ನಿರ್ಮಾಪಕ ಅಲಿಶಾನ್ ಜಫ್ರಿ ಈ ಮಾರಾಟಕ್ಕೆ ಆಕ್ಷೇಪಿಸಿ, 'ಮೀಶೋನಂತಹ ಫ್ಲಾಟ್ ಫಾರ್ಮ್‌ಗಳಲ್ಲಿ ಬಿಷ್ಣೋಯಿ ಚಿತ್ರವಿರುವ ಬಿಳಿ ಬಣ್ಣದ ಟೀ ಶರ್ಟ್ 168 ರು.ಗೆ ಮಾರುತ್ತಿದ್ದಾರೆ. ಇದು ಆನ್‌ಲೈನ್ ತೀವ್ರಗಾಮಿತನ' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಮೀಶೋ ಈ ಟೀಶರ್ಟ್ ಮಾರಾಟ ನಿಲ್ಲಿಸಿದೆ.
ವಕ್ಫ ಜೆಪಿಸಿ ಅಧ್ಯಕ್ಷರ ವಿರುದ್ಧ ಸ್ಪೀಕರ್‌ಗೆ ವಿಪಕ್ಷ ಸದಸ್ಯರ ದೂರು
ನವದೆಹಲಿ: ವಕ್ಫ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ವಿರುದ್ಧ ಸಮಿತಿಯಲ್ಲಿನ ವಿಪಕ್ಷ ಸದಸ್ಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಪಾಲ್ ಸಮಿತಿಯಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ 'ಸ್ಪೀಕರ್ ಜತೆ ಮಾತುಕತೆ ನಡೆಸಿದ್ದೇವೆ. ನಾವು ಹೇಳಿದ್ದನ್ನೆಲ್ಲಾ ಅವರು ತಾಳ್ಮೆಯಿಂದ ಕೇಳಿಸಿಕೊಂಡರು. ಪ್ರಕರಣದ ಕುರಿತು ಗಮನ ಹರಿಸುವ ಭರವಸೆ ನೀಡಿದರು' ಎಂದರು.
ಪವನ್ ಕಲ್ಯಾಣ್ ಟೀಕೆ, ಸಲಹೆ ಸ್ವೀಕರಿಸುವೆ: ಆಂಧ್ರ ಸಚಿವೆ ಅನಿತಾ
ಅಮರಾವತಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ತಮ್ಮ ವಿಧಾನದ ಬಗ್ಗೆ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನೀಡಿದ ಹೇಳಿಕೆಯನ್ನು
ಧನಾತ್ಮವಾಗಿ ಸ್ವೀಕರಿಸುವುದಾಗಿ ಗೃಹಸಚಿವ ಅನಿತಾ ವಂಗಲಪುಡಿ ಮಂಗಳವಾರ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಕಲ್ಯಾಣ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮಾತನಾಡಿದ ಅನಿತಾ, ಅವರ ಮಾತುಗಳು ಸ್ಫೂರ್ತಿದಾಯಕವಾಗಿದ್ದವು.
ನಾನು ವಿಫಲಳಾದೆ ಎಂದು ಅವರು ಹೇಳಲಿಲ್ಲ. ಬದಲಿಗೆ ನನಗೆ ಬೆಂಬಲಿಸಿ, ಧೃಡವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು ಎಂದರು.