ಉತ್ತರ ಪ್ರದೇಶದಲ್ಲಿ ಪತಿಯೋರ್ವ ತನ್ನ ಗರ್ಭಿಣಿ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾ*ಚಾರ ಆರೋಪಿಯೋರ್ವ ಸಂತ್ರಸ್ತೆಯ ಎದೆಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಅಪರಾಧ ಪ್ರಕರಣದಲ್ಲಿ ಪತಿಯೋರ್ವ ತನ್ನ ಗರ್ಭಿಣಿ ಪತ್ನಿಯನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಮೀರತ್‌ನಲ್ಲಿ ಈ ಘಟನೆ ನಡೆದಿದೆ. 7 ತಿಂಗಳ ಗರ್ಭಿಣಿ ಪತ್ನಿ ಸಪ್ನಾಳನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಗಂಡ ಬಳಿಕ ಪೊಲೀಸರಿಗೆ ಹೋಗಿ ಶರಣಾಗಿದ್ದಾನೆ. ರವಿಶಂಕರ್ ಕೊಲೆ ಮಾಡಿದ ಆರೋಪಿ. ಈ ವರ್ಷದ ಜನವರಿಯಲ್ಲಿ ರವಿಶಂಕರ್ ಜೊತೆ ಸ್ವಪ್ನಾ ಮದುವೆ ನಡೆದಿತ್ತು. ಆದರೆ ದಂಪತಿಯ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ಸಪ್ನಾ ಕಳೆದ ಐದು ತಿಂಗಳಿನಿಂದ ಅಮ್ಹೇರಾದಲ್ಲಿರುವ ತನ್ನ ಸಹೋದರಿ ಪಿಂಕಿ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಗಂಡನ ಜೊತೆಗಿನ ನಿರಂತರ ಭಿನ್ನಾಭಿಪ್ರಾಯದ ನಂತರ ಅವರು ಅಲ್ಲಿಗೆ ತೆರಳಿದ್ದರು.
ಈ ನಡುವೆ ಶನಿವಾರ ಬೆಳಗ್ಗೆ, ರವಿಶಂಕರ್ ಅಲ್ಲಿಗೆ ಬಂದಿದ್ದು, ಸಪ್ನಾ ಜೊತೆ ಮಾತನಾಡಬೇಕು ಎಂದು ಹೇಳಿದ್ದಾನೆ. ನಂತರ ಆತ ಪತ್ನಿ ಸಪ್ನಾಳನ್ನು ಮೊದಲ ಮಹಡಿಯಲ್ಲಿರುವ ಕೋಣೆಗೆ ಕರೆದೊಯ್ದು ಬಾಗಿಲು ಮುಚ್ಚಿದ್ದಾನೆ. ಕ್ಷಣಗಳ ನಂತರ ಒಳಗಿನಿಂದ ಲಾಕ್ ಮಾಡಿದ ಕೋಣೆಯಿಂದ ಕಿರುಚಾಟ ಕೂಗಾಟದ ಸದ್ದು ಕೇಳಿ ಬಂದಿದೆ.
ಸಪ್ನಾಳ ಅಕ್ಕ ಪಿಂಕಿಯ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಕಿರುಚಾಟ ಕೇಳಿ ಓಡಿ ಹೋದಾಗ ಸಪ್ನಾ ತನ್ನ ಜೀವಕ್ಕಾಗಿ ಬೇಡಿಕೊಂಡಿದ್ದಾಳೆ. ಆದರೆ ಆಕೆಯ ಮನವಿಯ ಹೊರತಾಗಿಯೂ, ರವಿ ಪದೇ ಪದೇ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕತ್ತು ಸೀಳಿದ ಆತ, ಆಕೆ ಸತ್ತ ನಂತರವೂ ಹಲವು ಬಾರಿ ಇರಿದಿದ್ದಾನೆ. ಸಪ್ನಾಳ ಸೋದರ ಮಾವ ಆಕೆ ಏಳು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ.
ಸೋದರಿಯ ಕೂಗು ಕೇಳಿ ಒಳಹೋಗಲು ಪ್ರಯತ್ನಿಸಿದರು ರವಿಶಂಕರ್ ಒಳಗಿನಿಂದ ಬಾಗಿಲು ಹಾಕಿದ್ದರಿಂದ ಸಪ್ನಾಳ ಸೋದರಿಯ ಹಾಗೂ ಕುಟುಂಬದವರು ಅಸಹಾಯಕರಾಗಿ ನಿಂತಿದ್ದರು. ಪೊಲೀಸರು ಬಂದು ಬಾಗಿಲು ಒಡೆದು ತೆರೆಯುವವರೆಗೂ ಯಾರಿಗೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಪೊಲೀಸರು ಬಾಗಿಲು ಒಡೆದು ಒಳಹೋದಾಗ ಕೋಣೆಯಾದ್ಯಂತ ರಕ್ತದ ಹೊಳೆ ಹರಿದಿದ್ದು,ತನ್ನ ಪತ್ನಿಯ ದೇಹದ ಪಕ್ಕದಲ್ಲಿ ರವಿಶಂಕರ್ ಕುಳಿತಿದ್ದ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಯಾವುದೇ ಪ್ರತಿರೋಧವಿಲ್ಲದೆ ರವಿಶಂಕರ್‌ನನ್ನು ವಶಕ್ಕೆ ಪಡೆದು ಸಪ್ನಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಬೇಲ್ ಪಡೆದು ಹೊರಬಂದು ಸಂತ್ರಸ್ತೆಗೆ ಗುಂಡಿಕ್ಕಿದ ಅತ್ಯಾ*ಚಾರ ಆರೋಪಿ
ನವದೆಹಲಿ: ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾ*ಚಾರ ಆರೋಪಿಯೋರ್ವ ಸಂತ್ರಸ್ತೆಯ ಎದೆಗೆ ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಆರೋಪಿ ಅಬುಝೈರ್ ಸಫಿ ಎಂಬಾತನ ವಿರುದ್ದ ಕಳೆದ ವರ್ಷ ಅತ್ಯಾ*ಚಾರದ ಕೇಸ್ ದಾಖಲಿಸಿದ್ದರು. ದೆಹಲಿಯ ವಸಂತ್ ವಿಹಾರ್‌ನಲ್ಲಿ ಈ ಘಟನೆ ಶನಿವಾರ ನಡೆದಿದೆ.
ದೂರು ದಾಖಲಿಸಿದ ಮಹಿಳೆ ಸಲೂನೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಫಿ ಆಕೆಯೆ ಎದೆಗೆ ಗುಂಡಿಕ್ಕಿದ್ದು, ಕೂಡಲೇ ಆಕೆಯನ್ನು ಪಿಸಿಆರ್ ವಾಹನದಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕರೆದೊಯ್ದಿದ್ದಾರೆ. ಪ್ರಸ್ತುತ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ 30 ವರ್ಷದ ಅಬುಝಯರ್ ಸಫಿ ಹಾಗೂ ಆತನಿಗೆ ಸಹಾಯ ಮಾಡಿದ ಅಮನ್ ಶುಕ್ಲಾ ಎಂಬಾತನನ್ನು ಪೊಲೀಸರು ಮಹಿಳೆಯ ಕೊಲೆ ಯತ್ನ ಪ್ರಕರಣದಡಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದ ಇಬ್ಬರು ಮಹಿಳೆಗೆ ಗುಂಡಿಕ್ಕಿ ಪರಾರಿಯಾಗಿದ್ದರು. ನಂತರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವನ ವಿರುದ್ಧ ಕಳೆದ ವರ್ಷ ತಾನು ಅತ್ಯಾ*ಚಾರ ಕೇಸ್ ದಾಖಲಿಸಿದ್ದು, ಜೈಲಿನಲ್ಲಿದ್ದ ಆತ ಇತ್ತೀಚೆಗೆ ಜಾಮೀನು ಪಡೆದು ಬಿಡುಗಡೆಯಾಗಿ ಬಂದು ಈ ಕೃತ್ಯವೆಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
