ಗುರುಗ್ರಾಮದಲ್ಲಿ ಹೆಂಡತಿ ಜೊತೆ ಮಾತನಾಡಿದ್ದಕ್ಕೆ ಲೀವ್ ಇನ್ ಪಾರ್ಟನರ್ ಚಾಕುವಿನಿಂದ ಇರಿದು ಗುಜರಿ ವ್ಯಾಪಾರಿಯನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಡಿಎಲ್‌ಎಫ್ ಫೇಸ್-3 ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗುರುಗ್ರಾಮ: ಹೆಂಡ್ತಿ ಜೊತೆ ಮಾತಾಡಿದ್ದಕ್ಕೆ ಗುಜುರಿ ವ್ಯಾಪಾರಿಯೊಬ್ಬನನ್ನು ಆತನ ಲೀವ್ ಇನ್ ಪಾರ್ಟನರ್ ಚಾಕುವಿನಿಂದ ಇರಿದು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಗುರುಗ್ರಾಮದ ಡಿಎಲ್‌ಎಫ್ ಫೇಸ್-3 ಪ್ರದೇಶದಲ್ಲಿ ನಡೆದಿದೆ. ಈಗಾಗಲೇ ವಿವಾಹವಾಗಿದ್ದ 40 ವರ್ಷದ ಸ್ಕ್ರ್ಯಾಪ್ ವ್ಯಾಪಾರಿ ಹರೀಶ್ ಶರ್ಮಾ ಕೊಲೆಯಾದ ವ್ಯಕ್ತಿ. ಗುರುಗ್ರಾಮದ ಬಲಿಯಾವಾಸ್ ಗ್ರಾಮದ ನಿವಾಸಿಯಾದ ಹರೀಶ್ ಶರ್ಮಾ, 27 ವರ್ಷ ಪ್ರಾಯದ ಯಶ್ಮಿತ್ ಕೌರ್ ಎಂಬಾಕೆಯ ಜೊತೆ ಕಳೆದ ಕೆಲ ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ. ಅವರಿಬ್ಬರು ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು.
ಊರಲ್ಲಿ ಪತ್ನಿ ಇದ್ದರೂ ಸಿಟಿಯಲ್ಲಿ ಲಿವ್ ಇನ್ ಪಾರ್ಟನರ್ ಜೊತೆ ವಾಸ:
ಶರ್ಮಾಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದರು, ಈತನ ಹೆಂಡ್ತಿ ಹಾಗೂ ಮಕ್ಕಳು ಗ್ರಾಮದ ಮನೆಯಲ್ಲಿ ವಾಸವಾಗಿದ್ದರು. ಹರೀಶ್ ಶರ್ಮಾನ ಪತ್ನಿಗೆ ಕೆಲ ಸಮಯದಿಂದ ಆರೋಗ್ಯ ಸರಿ ಇರಲಿಲ್ಲ, ಹೀಗಾಗಿ ಶರ್ಮಾ ತನ್ನ ಪತ್ನಿಗೆ ಆಗಾಗ್ಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದ. ಇದು ಆತನ ಲೀವ್ ಇನ್ ಪಾರ್ಟನರ್ ಯಶ್ಮಿತ್ ಕೌರ್‌ನನ್ನು ಕೆರಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಇದೇ ವಿಚಾರಕ್ಕೆ ಯಶ್ಮಿತ್ ಕೌರ್ ಹಾಗೂ ಹರೀಶ್ ಶರ್ಮಾ ಅವರಿಗೆ ಜಗಳವಾಗಿದೆ. ಇದಾದ ನಂತರ ಆತ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದಾಗ ಒಳಗೆ ಬಂದ ಯಶ್ಮಿತ್ ಕೌರ್ ಕೋಪದ ಭರದಲ್ಲಿ ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಚಾಕುವಿನಿಂದ ಹರೀಶ್ ಶರ್ಮಾನ ಎದೆಗೆ ಇರಿದಿದ್ದಾಳೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಕೊಲೆ ವೇಳೆ ರೂಮ್‌ನಲ್ಲಿದ್ದ ಶರ್ಮಾ ಸ್ನೇಹಿತ
ಹಾಗೆಯೇ ಘಟನೆಯಲ್ಲಿ ಮೃತಪಟ್ಟ ಹರೀಶ್ ಸ್ನೇಹಿತ ವಿಜಯ್ ಅಲಿಯಾಸ್ ಸೇಥಿ ಕೂಡ ಘಟನೆ ನಡೆಯುವ ವೇಳೆ ಅವರ ಮನೆಯ ಮತ್ತೊಂದು ಕೋಣೆಯಲ್ಲಿ ಇದ್ದ ಬಗ್ಗೆ ವರದಿಯಾಗಿದ್ದು, ಆತನ ಕೈವಾಡವೂ ಈ ಪ್ರಕರಣದಲ್ಲಿ ಇರಬಹುದೇ ಎಂಬ ಬಗ್ಗೆ ಪೊಲೀಸರು ತನಿಎ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹರೀಶ್ ಶರ್ಮಾನ ಅಳಿಯ ಪೊಲೀಸರಿಗೆ ದೂರು ನೀಡಿದ್ದು, ಯಶ್ಮಿತ್ ಕೌರ್ ಹಾಗೂ ವಿಜಯ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ದೆಹಲಿಯ ಅಶೋಕನಗರ ನಿವಾಸಿಯಾದ ಯಶ್ಮಿತ್ ಕೌರ್‌ನನ್ನು ಬಂಧಿಸಿದ್ದು, ಆಕೆ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಬಳಿಯಿಂದ ಕೊಲೆಗೆ ಬಳಸಿದ ಚಾಕು ಹಾಗೂ ರಕ್ತಸಿಕ್ತ ಟೀಶರ್ಟ್‌ನನ್ನು ವಶಕ್ಕೆ ಪಡೆಯಲಾಗಿದೆ.
