ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಕಾಳಿ ಮದ್ಯ ಮಾಂಸ ಸೇವಿಸುವ ದೇವತೆ ಎಂದ ಟಿಎಂಸಿ ಸಂಸದೆ ವಿವಾದ ಹೆಚ್ಚಾಗುತ್ತಿದ್ದಂತೆ ಸಂಸದೆ ಹೇಳಿಕೆಯಿಂದ ದೂರ ಉಳಿದ ಟಿಎಂಸಿ
ಕೋಲ್ಕತಾ(ಜು.05): ಕಾಳಿ ಸಾಕ್ಷ್ಯಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಈ ಕುರಿತು ಹಿಂದೂಗಳು ಆಕ್ರೋಶ ಹೊರಹಾಕಿದ್ದಾರೆ. ದೂರು ದಾಖಲಾಗಿದೆ. ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡುವೆ ಕಾಳಿ ಪೋಸ್ಟರ್ ಬೆಂಬಲಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾಳಿ ಅಂದರೆ ನನಗೆ ಮದ್ಯ ಸೇವಿಸುವ, ಮಾಂಸ ತಿನ್ನುವ ದೇವತೆ ಎಂದಿದ್ದಾರೆ. ಈ ಹೇಳಿಕೆಯನ್ನು ತಮ್ಮದೇ ಟಿಎಂಸಿ ಪಕ್ಷ ಖಂಡಿಸಿದೆ.
ದೇಶದಲ್ಲಿ ಇದೀಗ ಕಾಳಿ ಸಾಕ್ಷ್ಯಚಿತ್ರ ವಿವಾದ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಪೋಸ್ಟ್ರ್‌ನಲ್ಲಿ ಹಿಂದೂ ದೇವತೆ ಕಾಳಿಯು ಸಿಗರೇಟ್ ಸೇದುವಂತೆ ಹಾಗೂ ಸಲಿಂಗಿ ಭಾವುಟ ಹಿಡಿದಿರುವಂತೆ ಚಿತ್ರಿಸಿರಿವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಸಂಸದೆ ಮೊಯಿತ್ರಾ ಹೇಳಿಕೆ ಹಿಂದೂಗಳ ಆಕ್ರೋಶ ಹೆಚ್ಚಿಸಿದೆ. ಅದರಲ್ಲೂ ಕಾಳಿ ಮಾತೆ, ದುರ್ಗಾ ಮಾತೆಗೆ ಪಶ್ಚಿಮ ಬಂಗಾಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಪಾಯ ಅರಿತ ತೃಣಮೂಲ ಕಾಂಗ್ರೆಸ್, ತಮ್ಮ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯನ್ನು ಖಂಡಿಸಿದೆ. ಇಷ್ಟೇ ಅಲ್ಲ ಇದು ಮೊಯಿತ್ರಾ ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ. ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಈ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಟ್ವೀಟ್ ಮಾಡಿದೆ.
ಕಾಳಿಮಾತೆ ಬಾಯಲ್ಲಿ ಸಿಗರೇಟ್ ಇಟ್ಟು ವಿಕೃತಿ ಮೆರೆದ ನಿರ್ಮಾಪಕಿ ಲೀನಾ
‘ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಪ್ರದೇಶಗಳಲ್ಲಿ ದೇವತೆಗೆ ವಿಸ್ಕಿಯನ್ನು ಅರ್ಪಿಸಲಾಗುತ್ತದೆ. ಆದರೆ ಕೆಲವೆಡೆ ಇದು ದೇವನಿಂದನೆ, ಅಪಚಾರ ಎನಿಸುತ್ತದೆ’ ಎಂದು ಮೊಯಿತ್ರಾ ವಾದಿಸಿದ್ದಾರೆ. ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ, ‘ಕಾಳಿಯನ್ನು ಸಿಗರೆಟ್ ಸೇದುವಂತೆ ಚಿತ್ರಿಸಿದ ಪೋಸ್ಟರ್’ ವಿವಾದದ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ, ‘ಸಿಕ್ಕಿಂಗೆ ಹೋದರೆ ಅಲ್ಲಿ ಕಾಳಿ ದೇವಿಗೆ ವಿಸ್ಕಿಯನ್ನು ಅರ್ಪಿಸುವುದನ್ನು ನೀವು ಕಾಣಬಹುದು. ಅದೇ ಉತ್ತರಪ್ರದೇಶಕ್ಕೆ ಹೋಗಿ ನೀವು ದೇವತೆಗೆ ಪ್ರಸಾದವಾಗಿ ವಿಸ್ಕಿ ಅರ್ಪಿಸಲು ಬಯಸುತ್ತೀರಿ ಎಂದರೆ ಅದು ದೇವನಿಂದನೆ ಎನಿಸುತ್ತದೆ’ ಎಂದರು.
ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಚಿತ್ರದ ಪೋಸ್ಟರ್‌ನಲ್ಲಿ ದೇವಿ ಕಾಳಿಯಂತೆ ವಸ್ತ್ರಧರಿಸಿದ ಮಹಿಳೆಯೊಬ್ಬಳು ಸಿಗರೆಟ್ ಸೇದುತ್ತಿದ್ದು, ಸಲಿಂಗಿಗಳ ಪ್ರೈಡ್ ಧ್ವಜವನ್ನು ಹಿಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಕಡೆ ಪ್ರಕರಣಗಳೂ ದಾಖಲಾಗಿವೆ.
ಈ ನಡುವೆ, ಕೆನಡಾದಲ್ಲಿನ ಭಾರತೀಯ ದೂತಾವಾಸ ಕೂಡ ಚಿತ್ರ ತೆಗೆದು ಹಾಕುವಂತೆ ಲೀನಾಗೆ ಆಗ್ರಹಿಸಿದೆ. ನಿರ್ದೇಶಕಿ ಲೀನಾ ಮಣಿಮೇಖಲೈ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಅವರ ವಿರುದ್ಧ ಗೋ ಮಹಾಸಭಾ ನಾಯಕ ಅಜಯ ಗೌತಮ್ ದೂರು ದಾಖಲಿಸಿದ್ದಾರೆ.
ಪೋಸ್ಟರ್ ವಿವಾದದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ 'ಕಾಳಿ' ಸಿನಿಮಾ, ದೆಹಲಿ ಪೊಲೀಸರಿಂದ FIR!
ಪೋಸ್ಟರ್‌ನಲ್ಲಿ ಮಹಿಳೆಯು ಕಾಳಿಯ ವೇಷ ಧರಿಸಿ ಸಿಗರೇಟ್ ಸೇದುತ್ತಿದ್ದಾಳೆ ಅಲ್ಲದೇ ಹಿಂದೆ ಸಲಿಂಗ ಕಾಮಿ ಸಮುದಾಯಗಳ ಪ್ರೈಡ್ ಧ್ವಜವನ್ನೂ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ಈ ಪೋಸ್ಟರ್ ಅನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.‘ಲೀನಾ ಮಣಿಮೇಖಲೈರನ್ನು ಬಂಧಿಸಿ’ ಎಂಬುದು ಟ್ವೀಟರ್‌ನಲ್ಲಿ ಟ್ರೆಂಡ್ ಆಗಿದೆ.
‘ಕೆನಡಾದ ಟೊರೋಂಟೋ ಮೆಟ್ರೋಪಾಲಿಟನ್ ವಿವಿಯು ಕೆನಡಾ ವಿದ್ಯಾರ್ಥಿಗಳ ಅತ್ಯುತ್ತಮ ಚಿತ್ರ ಆಯ್ಕೆಗೆ ನನ್ನ ಚಿತ್ರ ಪ್ರದರ್ಶಿಸಲು ಆಹ್ವಾನಿಸಿತ್ತು. ಅದರಲ್ಲಿ ಭಾಗವಹಿಸಿದ್ದ ಚಿತ್ರವಿದು. ಕಾಳಿ, ಜನಾಂಗೀಯ ವ್ಯತ್ಯಾಸಗಳ ಹೊರತಾಗಿಯೂ ಪ್ರೀತಿಯನ್ನು ಆಯ್ಕೆ ಮಾಡುಕೊಳ್ಳುವ ಕಥಾವಸ್ತು ಹೊಂದಿದೆ. ಚಿತ್ರವನ್ನು ನೋಡಿದ ನಂತರ ನೀವೆ ‘ಲೀನಾ ಮಣಿಮೇಖಲೈಯನ್ನು ಪ್ರೀತಿಸಿ’ ಎಂದು ಪೋಸ್ಟ್ ಮಾಡಲಿದ್ದೀರಿ’ ಎಂದು ಲೀನಾ ಪ್ರತಿಕ್ರಿಯಿಸಿದ್ದಾರೆ.
