ಇಲ್ಲಿ ಇಬ್ಬರು ನಿರಾಪರಾಧಿಗಳ ಬದುಕು ಕಿತ್ತುಕೊಂಡಿದ್ದ ಪ್ರಕರಣಕ್ಕೆ ಕೊನೆಗೂ ಹೈಕೋರ್ಟ್ ನ್ಯಾಯ ನೀಡಿದೆ. ಆದರೆ 14 ವರ್ಷಗಳ ಕಾಲ ತಪ್ಪೇ ಮಾಡದೇ ಶಿಕ್ಷೆ ಅನುಭವಿಸಿ ಅಮೂಲ್ಯ ಬದುಕು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ? ಎಲ್ಲಿ ನಡೆದಿರೋದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
ಜಬಲ್ಪುರ (ಮಧ್ಯಪ್ರದೇಶ): ನ್ಯಾಯದೇವತೆ ಕುರುಡಿ ಎನ್ನುತ್ತಾಳೆ.. ಆದರೆ ಇಲ್ಲಿ ವ್ಯವಸ್ಥೆಯ ನಿರ್ಲಕ್ಷ್ಯ ಇಬ್ಬರು ವ್ಯಕ್ತಿಗಳ ಬದುಕಿನ ಅಮೂಲ್ಯ 14 ವರ್ಷಗಳು ಕಳೆದುಹೋಗಿದೆ. ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಜೈಲಿನಲ್ಲಿ ಕಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಖುಲಾಸೆಗೊಳಿಸಿದೆ.
ವಿಚಾರಣಾ ನ್ಯಾಯಾಲಯವು ಈ ಇಬ್ಬರಿಗೆ ಶಿಕ್ಷೆ ವಿಧಿಸುವಾಗ ಈ ಕೇಸಿಗೆ ಸಂಬಂಧವೇ ಇಲ್ಲದ, ಬೇರೊಂದು ಕೊಲೆ ಪ್ರಕರಣದ ಫೊರೆನ್ಸಿಕ್ (FSL) ವರದಿಯನ್ನು ಆಧರಿಸಿ ತೀರ್ಪು ನೀಡಿತ್ತು!
ಏನಿದು ಪ್ರಕರಣ?
2009ರ ಆಗಸ್ಟ್ 25ರಂದು ದಮೋಹ್ ಜಿಲ್ಲೆಯಲ್ಲಿ ಪ್ಯಾರೇಲಾಲ್ ಗಡರಿಯಾ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ತುಳಸಿರಾಮ್ ರಾಜ್‌ಪಾಲ್ ಮತ್ತು ಹರಪ್ರಸಾದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. 2012ರಲ್ಲಿ ದಮೋಹ್‌ನ ವಿಶೇಷ ಸೆಷನ್ಸ್ ನ್ಯಾಯಾಲಯವು ಇವರಿಬ್ಬರೂ ದೋಷಿಗಳು ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಂದಿನಿಂದ ಇಂದಿನವರೆಗೆ ಅಂದರೆ ಕಳೆದ 14 ವರ್ಷಗಳಿಂದ ಇವರು ಜೈಲಿನಲ್ಲೇ ಇದ್ದರು.
ಹೈಕೋರ್ಟ್ ಪತ್ತೆಹಚ್ಚಿದ ತಪ್ಪುಗಳು
ಈ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ಪೀಠವು ತನಿಖಾ ಸಂಸ್ಥೆ ಮತ್ತು ಕೆಳಹಂತದ ನ್ಯಾಯಾಲಯದ ಗಂಭೀರ ಲೋಪಗಳನ್ನು ಪಟ್ಟಿ ಮಾಡಿದೆ. ವಿಚಾರಣಾ ನ್ಯಾಯಾಲಯವು ತೀರ್ಪು ನೀಡುವಾಗ ಬಳಸಿದ FSL ವರದಿಯು ಈ ಪ್ರಕರಣದ್ದೇ ಆಗಿರಲಿಲ್ಲ. ಅದರಲ್ಲಿ ಉಲ್ಲೇಖವಾಗಿದ್ದ ಆರೋಪಿಗಳು, ಆಯುಧಗಳು ಮತ್ತು ಗಾಯಾಳುಗಳು ಎಲ್ಲವೂ ಬೇರೆಯೇ ಆಗಿದ್ದವು. ಇಂತಹ ದೊಡ್ಡ ನಿರ್ಲಕ್ಷ್ಯ ಹೇಗೆ ನಡೆಯಿತು ಎಂಬುದು ಆಶ್ಚರ್ಯ ತಂದಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸತ್ತ ವ್ಯಕ್ತಿ ದೂರು ನೀಡಿದ್ದು ಹೇಗೆ?
ಪೊಲೀಸರ ಪ್ರಕಾರ ಮೃತ ಪ್ಯಾರೇಲಾಲ್ ಸಾವನ್ನಪ್ಪುವ ಮೊದಲು ಎಫ್‌ಐಆರ್ ದಾಖಲಿಸಿದ್ದರು. ಆದರೆ ವೈದ್ಯರ ವರದಿಯ ಪ್ರಕಾರ ಪ್ಯಾರೇಲಾಲ್ ಅವರನ್ನು ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದರು. ಹಾಗಿದ್ದಲ್ಲಿ ಎಫ್‌ಐಆರ್ ಮೇಲೆ ಅವರ ಹೆಬ್ಬೆಟ್ಟಿನ ಗುರುತು ಬಂದಿದ್ದು ಹೇಗೆ? ಅದನ್ನು ಬರೆದವರು ಯಾರು? ಎಂಬ ಪ್ರಶ್ನೆಗೆ ಸಾರಿಗೆ ಇಲಾಖೆಯ ಬಳಿ ಉತ್ತರವಿಲ್ಲ. ಎಫ್‌ಐಆರ್ ಬರೆದ ಪೊಲೀಸ್ ಅಧಿಕಾರಿ ಯಾರು ಎಂಬುದನ್ನು ಗುರುತಿಸಲು ತನಿಖಾಧಿಕಾರಿಗೆ ಸಾಧ್ಯವಾಗಲಿಲ್ಲ. ಇದು ಇಡೀ ತನಿಖೆಯೇ ಸಂಶಯಾಸ್ಪದವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕೋರ್ಟ್ ಹೇಳಿದೆ.
14 ವರ್ಷಗಳ ನಂತರ ಸಿಕ್ಕ ನ್ಯಾಯ
ತನಿಖೆಯಲ್ಲಿನ ಗಂಭೀರ ಲೋಪಗಳು ಮತ್ತು ಪ್ರಾಸಿಕ್ಯೂಷನ್ ಸಾಕ್ಷ್ಯಗಳ ಕೊರತೆಯಿಂದಾಗಿ ಈ ಶಿಕ್ಷೆಯನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ತಕ್ಷಣವೇ ಇಬ್ಬರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆಯಾದರೂ, ಮಾಡದ ತಪ್ಪಿಗೆ ಯೌವನದ 14 ವರ್ಷಗಳನ್ನು ಜೈಲಿನ ಕತ್ತಲಲ್ಲಿ ಕಳೆದ ಈ ಇಬ್ಬರು ವ್ಯಕ್ತಿಗಳ ನಷ್ಟವನ್ನು ತುಂಬಿಕೊಡುವವರು ಯಾರು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


