114 ವರ್ಷದ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಎನ್‌ಆರ್‌ಐ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಲಂಧರ್‌ನಲ್ಲಿ ನಡೆದ ಈ ಘಟನೆಯಲ್ಲಿ ಫೌಜಾ ಸಿಂಗ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಜಲಂಧರ್: 114 ವರ್ಷದ ಮ್ಯಾರಥಾನ್ ರನ್ನರ್ ಫೌಜಾ ಸಿಂಗ್ ಅವರಿಗೆ ಕಾರು ಡಿಕ್ಕಿ ಹೊಡೆಸಿ ನಿಲ್ಲಿಸದೇ ಪರಾರಿಯಾದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಎಂಬ ದಾಖಲೆ ಹೊಂದಿದ್ದ ಫೌಜಾ ಸಿಂಗ್ ಅವರಿಗೆ ಸೋಮವಾರ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು.
ಆದರೆ ಶತಾಯುಷಿ ಓಟಗಾರನಿಗೆ ಕಾರು ಡಿಕ್ಕಿ ಹೊಡೆಸಿ ಅವರ ಸಾವಿಗೆ ಕಾರಣವಾದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನೋರ್ವ ಅನಿವಾಸಿ ಭಾರತೀಯ ಎಂದು ತಿಳಿದು ಬಂದಿದೆ. ಆತನನ್ನು 30 ವರ್ಷದ ಅಮ್ರಿತ್‌ಪಾಲ್ ಸಿಂಗ್ ಧಿಲ್ಲೊನ್ ಎಂದು ಗುರುತಿಸಲಾಗಿದೆ. ಘಟನೆ ನಡೆದು 2 ದಿನದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಂಜಾಬ್‌ನ ಜಲಂಧರ್ ಜಿಲ್ಲೆಯ ಬಿಯಾಸ್ ಗ್ರಾಮದಲ್ಲಿ ಮಧ್ಯಾಹ್ನ ನಡೆದುಕೊಂಡು ಹೋಗುತ್ತಿದ್ದಾಗ ಭೋಗ್ಪುರ ಕಡೆಯಿಂದ ಬರುತ್ತಿದ್ದ ಕಾರು ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದಿಂದಾಗಿ ಫೌಜಾ ಸಿಂಗ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ನೋಂದಣಿಯ ಟೋಯಾಟ ಫಾರ್ಚುನರ್ ಕಾರನ್ನು ವಶಕ್ಕೆ ಪಡೆಯಾಗಿದೆ. ಹೀಗೆ ಕಾರು ಡಿಕ್ಕಿ ಹೊಡೆದು ಫೌಜಾ ಸಿಂಗ್ ಅವರನ್ನು ಬಲಿ ಪಡೆದ ಎನ್‌ಆರ್‌ಐ ಅಮೃತ್ ಸಿಂಗ್ ಧಿಲ್ಲೋನ್ ಮೂಲತಃ ಜಲಂಧರ್‌ನ ಕತ್ರಾಪುರದವನಾಗಿದ್ದು, ಕೆನಡಾದಲ್ಲಿ ವಾಸ ಮಾಡ್ತಿದ್ದ.
ವಾಹನದ ನಂಬರ್ ಪ್ಲೇಟ್ ಕಪುರ್ತಲಾ ನಿವಾಸಿ ವರೀಂದರ್ ಸಿಂಗ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಆದರೆ ಅವರು ಕಾರನ್ನು ಆರೋಪಿಗೆ ಮಾರಿದ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಕಾರನ್ನು ಗುರುತಿಸಿದ ಪೊಲೀಸರ ಹಲವಾರು ತಂಡಗಳು ಆರೋಪಿ ಧಿಲ್ಲೋನ್ ಮನೆ ಮೇಲೆ ದಾಳಿ ನಡೆಸಿವೆ. ಈ ಆರೋಪಿ ಧಿಲ್ಲೋನ್ ವಾರದ ಹಿಂದಷ್ಟೇ ಭಾರತಕ್ಕೆ ಬಂದಿದ್ದ, ಆತನನ್ನು ಬಂಧಿಸಲಾಗಿದ್ದು, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಾನು ಮೊಬೈಲ್ ಫೋನ್ ಸೆಲ್ ಮಾಡಿ ಮನೆಗೆ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ಆತ ಹೇಳಿದ್ದಾನೆ.
ತನಿಖೆ ವೇಳೆ ಆತ ತಾನು ಅಪಘಾತಕ್ಕೀಡು ಮಾಡಿದ ವ್ಯಕ್ತಿ ಶತಾಯುಷಿ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ. ಆದರೆ ವ್ಯಕ್ತಿ ಯಾರೇ ಇರಲಿ ಒಬ್ಬ ವ್ಯಕ್ತಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪಘಾತಕ್ಕೀಡು ಮಾಡಿದ ಮೇಲೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದು ಮಾನವೀಯ ಧರ್ಮ ಆದರೆ ಇಲ್ಲಿ ಆರೋಪಿ ಫೌಜಾ ಸಿಂಗ್ ಅವರಿಗೆ ಕಾರು ಡಿಕ್ಕಿ ಹೊಡೆಸಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕನಿಷ್ಠ ಮಾನವೀಯತೆಯನ್ನು ತೋರದ ಈ ಎನ್ಆರ್‌ಐ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕಿದೆ.
