ಹೊಸದಾಗಿ ನಿರ್ಮಾಣ ಮಾಡಲಾಗಿರುವ ಸಂಸತ್ ಭವನದಲ್ಲಿ ಕೇಂದ್ರ ಸರ್ಕಾರ ಅಖಂಡ ಭಾರತದ ನಕ್ಷೆಯನ್ನು ಹಾಕಿದೆ. ಇದಕ್ಕೆ ತಿರುಗೇಟು ಎನ್ನುವಂತೆ ನೇಪಾಳ ರಾಜಧಾನಿ ಕಠ್ಮಂಡು ನಗರದ ಮೇಯರ್ ತಮ್ಮ ಕಚೇರಿಯಲ್ಲಿ ಗ್ರೇಟರ್ ನೇಪಾಳದ ನಕ್ಷೆಯನ್ನು ಹಾಕಿದ್ದು ಇದರಲ್ಲಿ ಹಿಮಾಚಲ ಪ್ರದೇಶ ಹಾಗೂ ಬಂಗಾಳದ ಕೆಲವು ಭಾಗವನ್ನು ಸೇರಿಸಿಕೊಳ್ಳಲಾಗಿದೆ.
ನವದೆಹಲಿ (ಜೂ.9): ಭಾರತದ ಹೊಸ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ಮ್ಯೂರಲ್ (ನಕ್ಷಾಚಿತ್ರ) ದೇಶದಲ್ಲಿ ವಿಪಕ್ಷಗಳಿಗೆ ಮಾತ್ರವಲ್ಲ ನೆರೆಯ ದೇಶಗಳೂ ಕೂಡ ಕೆರಳಿ ಕೆಂಡವಾಗಿದೆ. ಮುಖ್ಯವಾಗಿ ಪಾಕಿಸ್ತಾನ, ಅಖಂಡ ಭಾರತ ನಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೊಂದೆಡೆ ಭಾರತದ ಉತ್ತರಕ್ಕಿರುವ ಪುಟ್ಟ ದೇಶ ನೇಪಾಳ ಕೂಡ ವಿಭಿನ್ನವಾಗಿ ತನ್ನ ತಿರುಗೇಟು ವ್ಯಕ್ತಪಡಿಸಿದೆ. ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಬಲೇಂದ್ರ ಶಾ ಅವರು ಗ್ರೇಟರ್ ನೇಪಾಳದ ನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. ನಕ್ಷೆಯಲ್ಲಿ, ಹಿಮಾಚಲದ ಪಶ್ಚಿಮ ಕಾಂಗ್ರಾದಿಂದ ಪಶ್ಚಿಮ ಬಂಗಾಳದ ಪೂರ್ವ ತೀಸ್ತಾದವರೆಗಿನ ಪ್ರದೇಶವನ್ನು ಗ್ರೇಟರ್ ನೇಪಾಳದ ಭಾಗವೆಂದು ವಿವರಿಸಲಾಗಿದೆ. ಭಾರತದ ನೂತನ ಸಂಸತ್ತಿನಲ್ಲಿ ಅಳವಡಿಸಲಾಗಿರುವ ಅಖಂಡ ಭಾರತದ ನಕ್ಷೆಯನ್ನು ವಿರೋಧಿಸಿ ಮೇಯರ್ ಬಲೇಂದ್ರ ಶಾ ಈ ರೀತಿಯ ನಕ್ಷೆಯನ್ನು ತಮ್ಮ ಕಚೇರಿಯಲ್ಲಿ ಹಾಕಿದ್ದಾರೆ. ನೇಪಾಳ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ನೇಪಾಳ ಸಂಸತ್ತಿನ ಅತಿದೊಡ್ಡ ಪಕ್ಷವಾದ ನೇಪಾಳಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಗಗನ್ ಥಾಪಾ ಈ ಬಗ್ಗೆ ಮಾತನಾಡಿದ್ದು, 'ಗ್ರೇಟರ್ ನೇಪಾಳ' ನಕ್ಷೆಯನ್ನು ಅಧಿಕೃತವಾಗಿ ಪ್ರಕಟಿಸಬೇಕು. ಭಾರತವು ಸಾಂಸ್ಕೃತಿಕ ನಕ್ಷೆಯನ್ನು ಪ್ರಕಟಿಸಿದ್ದರೆ, ಗ್ರೇಟರ್ ನೇಪಾಳದ ಸಾಂಸ್ಕೃತಿಕ ನಕ್ಷೆಯನ್ನು ಪ್ರಕಟಿಸುವ ಹಕ್ಕು ನಮಗೂ ಇದೆ. ಭಾರತ ಇದಕ್ಕೆ ಆಕ್ಷೇಪಿಸಬಾರದು ಎಂದು ಹೇಳಿದ್ದಾರೆ.
ಅಖಂಡ ಭಾರತ ಸಾಂಸ್ಕೃತಿಕ ನಕ್ಷೆ ಮಾತ್ರ: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಅಖಂಡ ಭಾರತ ನಕ್ಷೆ ವಿಚಾರದಲ್ಲಿ ಭಾರತವನ್ನು ಬೆಂಬಲಿಸಿದ್ದಾರೆ. ಥಾಪಾ ಅವರ ಹೇಳಿಕೆಯ ಕುರಿತು ಅವರು ಸಂಸತ್ತಿನಲ್ಲಿ ಮಾತನಾಡಿದ ಅವರು, ನಾನು ಭಾರತಕ್ಕೆ ಭೇಟಿ ನೀಡಿದಾಗ ಅಖಂಡ ಭಾರತದ ನಕ್ಷೆಯ ವಿಷಯವನ್ನು ಪ್ರಸ್ತಾಪಿಸಿದ್ದೆ. ಆಗ ಭಾರತವು ಇದು ಕೇವಲ ಸಾಂಸ್ಕೃತಿಕ ನಕ್ಷೆ ಎಂದು ಹೇಳಿದೆ. ಇದು ದೇಶದ ಇತಿಹಾಸವನ್ನು ತೋರಿಸುತ್ತದೆ. ಇದನ್ನು ರಾಜಕೀಯವಾಗಿ ನೋಡಬೇಡಿ ಎಂದು ಹೇಳಿದ್ದರು.
ವಾಸ್ತವವಾಗಿ, ನೇಪಾಳದ ಅನೇಕ ಜನರು ಇನ್ನೂ ಗ್ರೇಟರ್ ನೇಪಾಳದ ಭಾಗಗಳನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಇಲ್ಲಿ ರಾಷ್ಟ್ರೀಯವಾದಿ ಹೋರಾಟಗಾರ ಫಣೀಂದ್ರ ನೇಪಾಳ ದೀರ್ಘಕಾಲದಿಂದ ಅಖಂಡ ನೇಪಾಳಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ. ನೇಪಾಳದ ಕೆಲವು ಪಕ್ಷಗಳ ನಾಯಕರು ವರ್ಷಗಳ ಹಿಂದೆ ಭಾರತದೊಂದಿಗೆ ವಿಲೀನಗೊಂಡ ಅದರ ಭಾಗವನ್ನು ಈಗ ಹಿಂತಿರುಗಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಇನ್ನು ಈ ನಕ್ಷೆಯ ವಿವಾದದ ಬಗ್ಗೆ ಮಾತನಾಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಶೋಕನ ಕಾಲದ ಅಖಂಡ ಭಾರತವನ್ನು ಈ ನಕ್ಷೆಯಲ್ಲಿ ತೋರಿಸಲಾಗಿದೆ. ಅಖಂಡ ಭಾರತದ ನಕ್ಷಯ ಕುರಿತಾಗಿ ವಿರೋಧ ವ್ಯಕ್ತವಾದ ಬೆನ್ನಲ್ಲಿಯೇ ಜೈಶಂಕರ್ ಈ ಹೇಳಿಕೆ ನೀಡಿದ್ದರು. ಇದು ಕೇವಲ ಸಾಮ್ರಾಟ ಅಶೋಕನ ಸಾಮ್ರಾಜ್ಯವನ್ನು ತೋರಿಸುವ ಸಾಂಸ್ಕೃತಿಕ ನಕ್ಷೆಯಾಗಿದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ನೇಪಾಳದಂತಹ ಸೌಹಾರ್ದ ದೇಶಗಳು ಇದನ್ನು ಅರ್ಥಮಾಡಿಕೊಂಡಿವೆ ಎಂದಿದ್ದರು.
ಸಂಸತ್‌ನಲ್ಲಿ ಕನ್ನಡ ಡಿಂಡಿಮ, ಅಖಂಡ ಭಾರತದ ನಕ್ಷೆ: 5000 ಕ್ಕೂ ಹೆಚ್ಚು ವಿವಿಧ ಕಲಾಕೃತಿಗಳ ಸಂಗಮ
ಹೊಸ ಸಂಸತ್ತಿನಲ್ಲಿ ಅಳವಡಿಸಲಾಗಿರುವ ಅಖಂಡ ಭಾರತದ ನಕ್ಷೆಯು ಅಶೋಕ ಸಾಮ್ರಾಜ್ಯದ ವಿಸ್ತರಣೆಯನ್ನು ತೋರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಹಿಂದೆ ಹೇಳಿದ್ದರು. ಇದಕ್ಕಾಗಿ ನಕ್ಷೆಯ ಮುಂದೆ ಬೋರ್ಡ್ ಇಟ್ಟು ಮಾಹಿತಿಯನ್ನೂ ನೀಡಲಾಗಿದೆ ಎಂದಿದ್ದರು.
