ಒಬ್ಬ ಸೋಂಕಿತ ಸಿಕ್ಕರೆ 30 ಸಂಪರ್ಕಿತರ ಪತ್ತೆ ಹಚ್ಚಿ : ಒಬ್ಬನಿಂದ 406 ಜನಕ್ಕೆ ಕೋವಿಡ್
ಓರ್ವ ಸೋಂಕಿತ ಸಿಕ್ಕರೆ ಸೋಂಕಿತರ ಸಂಪರ್ಕಕ್ಕೆ ಬಂದ ಕನಿಷ್ಠ 30 ಜನರ ಪತ್ತೆ ಮಾಡಿ, ಅವರನ್ನು 72 ತಾಸು ಪ್ರತ್ಯೇಕವಾಗಿರಿಸಿ. ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರ ಕಠಿಣ ಆದೇಶಗಳನ್ನು ಜಾರಿ ಮಾಡಿದೆ
ನವದೆಹಲಿ (ಮಾ.28): ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿರುವ ಬೆನ್ನಲ್ಲೇ, ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ಕನಿಷ್ಠ 30 ಜನರ ಪತ್ತೆ ಮಾಡಿ, ಅವರನ್ನು 72 ತಾಸು ಪ್ರತ್ಯೇಕವಾಗಿರಿಸಿ. ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸಿ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಸೋಂಕು ಹೆಚ್ಚಿರುವ ಕಡೆ ಲಸಿಕೆ ವಿತರಣೆ ಸಾರ್ವತ್ರಿಕಗೊಳಿಸಿ ಎಂದು ರಾಜ್ಯಗಳಿಗೆ ಸೂಚನೆ ನೀಡಿದೆ.
ಕೋವಿಡ್ ಅಬ್ಬರವಿರುವ 12 ರಾಜ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಜತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ಅತ್ಯುನ್ನತ ಮಟ್ಟದ ಸಭೆಯನ್ನು ನಡೆಸಿದರು. ನಗರಪಾಲಿಕೆ ಆಯುಕ್ತರು, ಸೋಂಕು ಅಧಿಕವಿರುವ ಕರ್ನಾಟಕದ ಬೆಂಗಳೂರು ಸೇರಿ ದೇಶದ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೂಡ ಭಾಗವಹಿಸಿದ್ದ ಈ ಸಭೆಯಲ್ಲಿ, ಕೊರೋನಾ ಪ್ರಸರಣ ಕೊಂಡಿಯನ್ನು ತುಂಡರಿಸಬೇಕು. ಕಳೆದ ವರ್ಷ ನಿರಂತರ ಪ್ರಯತ್ನದಿಂದ ಗಳಿಸಿರುವ ಲಾಭ ಹಾಳಾಗಲು ಬಿಡಬಾರದು ಎಂದು ಸೂಚಿಸಲಾಯಿತು.
ಔರಂಗಬಾದ್‌ನಲ್ಲಿ ಸಂಪೂರ್ಣ ಲಾಕ್‌ಡೌನ್; ಅಗತ್ಯ ವಸ್ತು, ತುರ್ತು ಸೇವೆ ಮಾತ್ರ ಲಭ್ಯ! ..
ಸೋಂಕು ಅಧಿಕವಾಗಿರುವ 46 ಜಿಲ್ಲೆಗಳಲ್ಲಿ ಪರಿಣಾಮಕಾರಿ ಕಂಟೈನ್ಮೆಂಟ್ ಹಾಗೂ ಕಾಂಟಾಕ್ಟ್ ಟ್ರೇಸಿಂಗ್ ಅನ್ನು ಕಡೆ ಪಕ್ಷದ 14 ದಿನಗಳ ಕಾಲವಾದರೂ ಮಾಡುವ ಮೂಲಕ ಕೊರೋನಾ ಸರಪಳಿ ಕತ್ತರಿಸಲು ಸೂಚಿಸಲಾಯಿತು. ಮಹಾರಾಷ್ಟ್ರ, ಗುಜರಾತ್, ಹರಾರಯಣ, ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಜಮ್ಮು-ಕಾಶ್ಮೀರ, ಪಂಜಾಬ್ ಹಾಗೂ ಬಿಹಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಾರ್ಗಸೂಚಿಯಲ್ಲಿ ಏನಿದೆ?
1. ಪರೀಕ್ಷಾ ಪ್ರಮಾಣ ಹೆಚ್ಚಿಸಿ. ಒಟ್ಟು ಪರೀಕ್ಷೆಯಲ್ಲಿ ಆರ್‌ಟಿ-ಪಿಸಿಆರ್ ಪಾಲು ಶೇ.70ರಷ್ಟಿರಲಿ. ಕೊರೋನಾ ಕ್ಲಸ್ಟರ್‌ಗಳಲ್ಲಿ ಆ್ಯಂಟಿಜೆನ್ ಪರೀಕ್ಷೆ ನಡೆಸಿ.
2. ಸೋಂಕಿತರ ಸಂಪರ್ಕಕ್ಕೆ ಬಂದ ಕನಿಷ್ಠ 30 ಜನರ ಪತ್ತೆ ಮಾಡಿ, ಅವರನ್ನು 72 ತಾಸು ಪ್ರತ್ಯೇಕವಾಗಿರಿಸಿ. ಕಂಟೈನ್ಮೆಂಟ್ ಕಟ್ಟುನಿಟ್ಟಾಗಿ ಜಾರಿಮಾಡಿ.
3. ಯಾವುದೇ ಸಂಭವನೀಯ ಪರಿಸ್ಥಿತಿ ಎದುರಿಸಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಿ.
4. ಮಾರುಕಟ್ಟೆ, ಅಂತಾರಾಜ್ಯ ಬಸ್ ನಿಲ್ದಾಣ, ಶಾಲೆ, ರೈಲ್ವೆ ನಿಲ್ದಾಣ ಮೊದಲಾದ ಕಡೆ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ. ಸೋಂಕಿನ ಅರಿವು ಮೂಡಿಸಲು ಧಾರ್ಮಿಕ, ಸಮುದಾಯ ನಾಯಕರ ಬಳಸಿ.
5. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಗೆ ಸೀಮಿತ ಮಾಡಲು ಸಲಹೆ ನೀಡಿ. ಮಾರ್ಗಸೂಚಿ ಪಾಲಿಸಿದರೆ ಶೇ.70ರಷ್ಟುಸೋಂಕು ನಿಗ್ರಹ ಸಾಧ್ಯ.
6. ಸೋಂಕು ಹೆಚ್ಚಿರುವ ಕಡೆ ಲಸಿಕೆ ವಿತರಣೆ ಸಾರ್ವತ್ರಿಕಗೊಳಿಸಿ. ಲಸಿಕೆ ವಿತರಣೆ ಸಾಮರ್ಥವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ. ಲಸಿಕೆ ಕಾಯ್ದಿಡುವ ಅಗತ್ಯ ಇಲ್ಲ. ಬೇಡಿಕೆ ಇದ್ದಷ್ಟುಲಸಿಕೆ ನೀಡಿ.
ಒಬ್ಬ ಸೋಂಕಿತ 406 ಜನಕ್ಕೆ ಕೋವಿಡ್ ಹರಡಬಲ್ಲ!
ಕೊರೋನಾ ಸೋಂಕಿಗೆ ತುತ್ತಾದ ವ್ಯಕ್ತಿ ಯಾವುದೇ ನಿರ್ಬಂಧವಿಲ್ಲದೇ ತಿರುಗಾಡಿದರೆ 30 ದಿನಗಳಲ್ಲಿ ಸರಾಸರಿ 406 ಮಂದಿಗೆ ಸೋಂಕು ಹರಡಬಲ್ಲ. ಆತನ ಮೇಲೆ ಶೇ.50ರಷ್ಟುನಿರ್ಬಂಧ ಹೇರಿದರೆ ಸೋಂಕಿನ ಸಂಖ್ಯೆಯನ್ನು 15ಕ್ಕೆ, ಶೇ.75ರಷ್ಟುನಿರ್ಬಂಧ ಹೇರಿದರೆ 2.5ಕ್ಕೆ ಇಳಿಕೆ ಮಾಡಬಹುದು ಎಂದು ಕೇಂದ್ರ ಸರ್ಕಾರದ ವಿಶ್ಲೇಷಣೆ ತಿಳಿಸಿದೆ.