ತಮಿಳುನಾಡಲ್ಲಿ ಸಂಕ್ರಾಂತಿ ಸಂಭ್ರಮ, ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ದಾಳಿಗೆ 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಂಕ್ರಾಂತಿಯ ಪೊಂಗಲ್ ಹಬ್ಬದ ಹಿನ್ನೆಲೆ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 45 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರು (ಜ.15): ಸಂಕ್ರಾಂತಿಯ ಪೊಂಗಲ್ ಹಬ್ಬದ ಹಿನ್ನೆಲೆ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 45 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್ ಅನ್ನು ವಿಬೃಂಭಣೆಯಿಂದ ಆಚರಿಸಲಾಗುತ್ತದೆ. ಈ ವೇಳೆ ಸಾಂಪ್ರದಾಯಿಕ ಆಟ ಜಲ್ಲಿಕಟ್ಟನ್ನು ಏರ್ಪಡಿಸಲಾಗುತ್ತದೆ.
ಎತ್ತುಗಳನ್ನು ಪಳಗಿಸುವ ಕ್ರೀಡೆಯಾದ ಪ್ರಸಿದ್ಧ ಅವನಿಯಪುರಂ ಜಲ್ಲಿಕಟ್ಟು ಹಬ್ಬದ ಸಂದರ್ಭದಲ್ಲಿ ಮಧುರೈನಲ್ಲಿ ಈ ಕಾರ್ಯಕ್ರಮಕ್ಕೆ 1,000 ಎತ್ತುಗಳು ಮತ್ತು 600 ಪಳಗಿಸುವವರು ನೋಂದಾಯಿಸಿಕೊಂಡಿದ್ದಾರೆ. ಇದೀಗ ಇಲ್ಲಿ ಕ್ರೀಡೆ ವೇಳೆ ಎತ್ತುಗಳು ತಿವಿದು 45 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಇಬ್ಬರು ಪೊಲೀಸ್ ಪೇದೆಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಸೋಮವಾರ ಬೆಳಗ್ಗೆ 8 ಗಂಟೆಗೆ ಜಲ್ಲಿಕಟ್ಟು ಸ್ಪರ್ಧೆ ಪ್ರಾರಂಭವಾಗಿದ್ದು ಮತ್ತು ಮುಂದಿನ ಮೂರು ದಿನಗಳವರೆಗೆ ಸ್ಪರ್ಧೆ ನಡೆಯಲಿದೆ. ಅಂದರೆ ಜನವರಿ 17ಕ್ಕೆ ಕೊನೆಯ ದಿನ ಆಗಿರಲಿದೆ.