ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಹಂಬಲದಲ್ಲಿ ಯುವಕನೊಬ್ಬ ರಸ್ತೆ ಬದಿಯ ಟ್ರಾಫಿಕ್ ಫಲಕದ ಕಂಬವನ್ನೇರಿ ಫುಲ್ ಅಪ್ ವ್ಯಾಯಾಮ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರಿಗೆ ಜೀವ ಹೋದರೂ ತೊಂದರೆ ಇಲ್ಲ, ಆದರೆ ಜಸ್ಟ್ ವೈರಲ್ ಆಗಬೇಕಷ್ಟೆ, ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರಸ್ತೆ ಬದಿ ನಿರ್ಮಾಣ ಮಾಡಿರುವ ಟ್ರಾಫಿಕ್ ಫಲಕದ ಕಂಬವನ್ನೇರಿ ಅಲ್ಲಿ ಫುಲ್‌ ಅಪ್‌ ವ್ಯಾಯಾಮ ಮಾಡುತ್ತಿದ್ದು, ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಈ ಅಪಾಯಕಾರಿ ಸಾಹಸಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಅಮೇಥಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಇದು ಈಗ ಪೊಲೀಸರ ಗಮನವನ್ನು ಕೂಡ ಸೆಳೆದಿದೆ. 

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಕೇವಲ ಪ್ಯಾಂಟ್ ತೊಟ್ಟು ಬರೀ ಮೈಯಲ್ಲಿ ಇರುವ ಯುವಕ ಎಡಕ್ಕೆ ತಿರುಗಿದರೆ ಆರು ಕಿಲೋ ಮೀಟರ್‌ ಮುನ್ಸಿಗಂಜ್‌ಗೆ ಬಲಕ್ಕೆ ತಿರುಗಿದರೆ 3.5 ಕಿಲೋ ಅಮೇಥಿಗೆ ಎಂದು ತೋರಿಸುವ 10 ಮೀಟರ್‌ಗೂ ಅಧಿಕ ಎತ್ತರದಲ್ಲಿ ಕಬ್ಬಿಣದ ಕಂಬಕ್ಕೆ ಜಾಯಿಂಟ್‌ ಮಾಡಿರುವ ಟ್ರಾಫಿಕ್ ಫಲಕವನ್ನು ಹಿಡಿದು ಫುಲ್ ಅಪ್‌ ಮಾಡುತ್ತಿದ್ದಾನೆ. ರಾಷ್ಟ್ರೀಯ ಹೆದ್ದಾರಿ 931ರಲ್ಲಿ ಈ ಘಟನೆ ನಡೆದಿದೆ. 

ಚಲಿಸುವ ಬೈಕ್ ಮೇಲೆ ಯುವಕನ ಡೇಂಜರಸ್‌ ಸ್ಟಂಟ್‌: ವೈರಲ್ ವೀಡಿಯೋ ನೋಡಿ ಕೇಸ್ ಜಡಿದ ಪೊಲೀಸ್‌

17 ಸೆಕೆಂಡ್‌ಗಳ ಈ ವೀಡಿಯೋವನ್ನು ಅನೇಕರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಅಮೇಥಿಯ ರಸ್ತೆಯಲ್ಲಿನ ಅಪಾಯಕಾರಿ ಆಟಗಾರರು, ಯುವಕನೋರ್ವ ಕಿಲೋ ಮೀಟರ್‌ ತೋರಿಸುವ ಟ್ರಾಫಿಕ್ ಫಲಕದಲ್ಲಿ ಫುಲ್ ಅಪ್ ಮಾಡುವ ಮೂಲಕ ತನ್ನ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾನೆ. ಈ ಬೋರ್ಡ್‌ ರಸ್ತೆಯಿಂದ 10 ಮೀಟರ್‌ ಎತ್ತರದಲ್ಲಿದೆ. ಇನ್ಸ್ಟಾಗ್ರಾಮ್‌ನಲ್ಲಿ ಸಚಿನ್ ಎಂಬ ಹೆಸರಿನ ಐಡಿಯಿಂದ ಈ ವೀಡಿಯೋ ಪೋಸ್ಟ್ ಆಗಿದೆ. 

ಈ ವೀಡಿಯೋ ಈಗ ಪೊಲೀಸರ ಗಮನವನ್ನು ಕೂಡ ಸೆಳೆದಿದ್ದು, ಈ ಯುವಕನ ವಿರುದ್ಧ ಸರಿಯಾದ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಅಮೇಥಿ ಪೊಲೀಸರು, ಈ ವೈರಲ್ ವೀಡಿಯೋ ಬಗ್ಗೆ ತನಿಖೆ ಮಾಡಲಾಗುವುದು. ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಈತ ಜೈಲಿನಲ್ಲಿ ಕಂಬಿಗಳನ್ನು ಹಿಡಿದು ಫುಲ್ ಅಪ್ ಮಾಡುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಕೆಲವರು ಆತನನ್ನು ಒಲಿಂಪಿಕ್‌ಗೆ ಕಳುಹಿಸುವಂತೆ ಹಾಸ್ಯ ಮಾಡಿದ್ದಾರೆ. ಆದರೂ ಆತನ ಸಾಹಸದ ಬಗ್ಗೆ ಮೆಚ್ಚಲೇಬೇಕು ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. 

ರೀಲ್ಸ್‌ಗಾಗಿ ವಿದ್ಯುತ್ ಕಂಬ ಹತ್ತಿ ತುಂಬಿ ಹರಿಯುತ್ತಿರುವ ಗಂಗಾ ನದಿ ಹಾರಿದ ಯುವಕ!

ಹೀಗೆ ಜೀವದ ಹಂಗು ತೊರೆದು ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ಗಳು ಸಾಹಸ ಮಾಡುವುದು ಇದೇ ಮೊದಲೇನಲ್ಲ, ಅನೇಕರು ಹೀಗೆ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಈ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಬುದ್ಧಿ ಕಲಿಯುತ್ತಿಲ್ಲ, ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. 

Scroll to load tweet…