ಪ್ರಧಾನಿ ಮಾತಾಡಲ್ಲ... ಮೋದಿ ವಿರುದ್ಧ 31 ಪಕ್ಷಗಳಿಂದ ರಾಷ್ಟ್ರಪತಿಗೆ ದೂರು

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದಂಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ತಿನಲ್ಲಿ ಉತ್ತರಿಸುವಂತೆ ಸೂಚನೆ ನೀಡಬೇಕು ಎಂದು ವಿಪಕ್ಷಗಳ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ.

Manipur riots: Complaint from 31 parties to the President against the Prime Minister Narendra modi

ನವದೆಹಲಿ: ಮಣಿಪುರ ವಿಚಾರವಾಗಿ ಮುಂಗಾರು ಅಧಿವೇಶನದ ಆರಂಭದಿಂದಲೂ ಗದ್ದಲ ನಡೆದು ಕಲಾಪಕ್ಕೆ ಪದೇ ಪದೇ ಅಡ್ಡಿಯುಂಟಾಗುತ್ತಿರುವುದಕ್ಕೆ ಸ್ಪೀಕರ್‌ ಓಂ ಬಿರ್ಲಾ ಬೇಸರಗೊಂಡಿದ್ದಾರೆ. ಹೀಗಾಗಿ ಅವರು ಬುಧವಾರದ ಕಲಾಪದಿಂದಲೇ ದೂರ ಉಳಿದಿದ್ದಾರೆ. ಮತ್ತೊಂದೆಡೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ದಂಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ತಿನಲ್ಲಿ ಉತ್ತರಿಸುವಂತೆ ಸೂಚನೆ ನೀಡಬೇಕು ಎಂದು ವಿಪಕ್ಷಗಳ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ. ಇದೇ ವೇಳೆ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವಂತೆ ಅವರಿಗೆ ಸೂಚನೆ ನೀಡಬೇಕು. ಮಣಿಪುರದಿಂದ ಇಬ್ಬರು ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಎಂದೂ ಆಗ್ರಹಿಸಿದೆ.

ವಿಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಮಣಿಪುರದ (Manipur) ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ಪ್ರತಿಪಕ್ಷಗಳ(Oppositions Party) ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿದೆ ಎಂಬುದನ್ನು ತಿಳಿದೇ ಅವು ಚರ್ಚೆಗೆ ಬಾರದೆ ಓಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

31 ನಾಯಕರಿಂದ ದೂರು ಸಲ್ಲಿಕೆ

ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ 31 ನಾಯಕರು ಬುಧವಾರ ರಾಷ್ಟ್ರಪತಿ ಮುರ್ಮು (Draupadi Marmu) ಅವರನ್ನು ಭೇಟಿಯಾಗಿ, ತಾವು ಮಣಿಪುರದ ಪ್ರವಾಸದಲ್ಲಿ ಕಲೆಹಾಕಿದ ವಿವರಗಳನ್ನು ಸಲ್ಲಿಸಿದರು. ಈ ವೇಳೆ, ಮಣಿಪುರದ ಪರಿಸ್ಥಿತಿ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಂತೆ ಪ್ರಧಾನಿಗೆ ಸೂಚಿಸಬೇಕು. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಲು ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಬೇಕು. ಮಣಿಪುರಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ಸಾಂಕೇತಿಕವಾಗಿ ಅಲ್ಲಿನ ಎರಡು ಸಮುದಾಯಗಳಿಗೆ ಸೇರಿದ ಇಬ್ಬರು ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಎಂದು ಮನವಿ ಮಾಡಿದರು.

ಮಣಿಪುರ ಪೊಲೀಸರಿಗೆ ಸುಪ್ರೀಂ ಹಿಗ್ಗಾಮುಗ್ಗಾ ಚಾಟಿ: ತನಿಖೆಗೆ ಎಸ್‌ಐಟಿ/ಜಡ್ಜ್‌ ಸಮಿತಿ ನೇಮಕದ ಸುಳಿವು

ಇದೇ ವೇಳೆ, ಹರ್ಯಾಣದಲ್ಲಿ ನಡೆಯುತ್ತಿರುವ ಕೋಮು ಗಲಭೆಯ ಬಗ್ಗೆಯೂ ರಾಷ್ಟ್ರಪತಿಗೆ ದೂರು ನೀಡಿದ ಅವರು, ಪ್ರಧಾನಿ ಕಚೇರಿಯಿಂದ ಕೇವಲ 100 ಕಿ.ಮೀ. ದೂರದಲ್ಲಿರುವ ನೂಹ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆಯೂ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ (sharad Pawar) ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಖ್‌ ಅಬ್ದುಲ್ಲಾ, ಜೆಡಿಯು ನಾಯಕ ರಾಜೀವ್‌ ರಂಜನ್‌, ಶಿವಸೇನೆ (ಯುಬಿಟಿ) ನಾಯಕರಾದ ಅರವಿಂದ್‌ ಸಾವಂತ್‌ ಹಾಗೂ ಸಂಜಯ್‌ ರಾವತ್‌, ತೃಣಮೂಲ ಕಾಂಗ್ರೆಸ್‌ ನಾಯಕರಾದ ಸುದೀಪ್‌ ಬಂಡೋಪಾಧ್ಯಾಯ, ಡೆರೆಕ್‌ ಓಬ್ರಿಯಾನ್‌ ಸೇರಿ 31 ನಾಯಕರು ನಿಯೋಗದಲ್ಲಿದ್ದರು.

ಅಮಿತ್‌ ಶಾ ಉತ್ತರಿಸುತ್ತಾರೆ: 

ವಿಪಕ್ಷ ನಾಯಕರು ರಾಷ್ಟ್ರಪತಿಗೆ ನೀಡಿರುವ ದೂರಿನ ಬಗ್ಗೆ ಕಿಡಿಕಾರಿರುವ ಬಿಜೆಪಿ ನಾಯಕರು (BJP Leaders), ವಿಪಕ್ಷಗಳು ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಚರ್ಚೆ ನಡೆಸುವುದರಿಂದ ದೂರ ಓಡುತ್ತಿವೆ. ಏಕೆಂದರೆ ಅವರ ಪ್ರಶ್ನೆಗಳಿಗೆ ಸರ್ಕಾರದ ಬಳಿ ಸೂಕ್ತ ಉತ್ತರವಿದೆ ಎಂಬುದು ಅವರಿಗೆ ಗೊತ್ತಿದೆ ಎಂದು ಟೀಕಿಸಿದೆ. ಮಣಿಪುರಕ್ಕೆ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿದ್ದರು. ಅವರು ಸಂಸತ್ತಿನಲ್ಲಿ ಉತ್ತರ ನೀಡಲು ಸಿದ್ಧರಿದ್ದಾರೆ. ವಿಪಕ್ಷಗಳ ಸಮಸ್ಯೆಯೇನು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಜನರಿಗೂ ಅರ್ಥವಾಗುತ್ತಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

News 360°: ಮಣಿಪುರ ಹಿಂಸಾಚಾರಕ್ಕೆ ಧರ್ಮ ಸಂಘರ್ಷ ಕಾರಣನಾ?

ವಿಪಕ್ಷಗಳ ನಾಯಕರು ಮಣಿಪುರಕ್ಕೆ ಹೋಗುತ್ತಾರೆ, ರಾಷ್ಟ್ರಪತಿಗಳ ನಿವಾಸಕ್ಕೆ ಹೋಗುತ್ತಾರೆ, ಆದರೆ ಸಂಸತ್ತಿನಲ್ಲಿ ಚರ್ಚೆಗೆ ಬರಲು ಸಿದ್ಧರಿಲ್ಲ. ಪ್ರಧಾನಿಯೇ ಉತ್ತರಿಸಬೇಕು ಎಂದು ಅವರು ಆಗ್ರಹಿಸುತ್ತಿರುವುದು ತರ್ಕಹೀನ. ಅವರ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿದೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಚರ್ಚೆಗೆ ಬರುತ್ತಿಲ್ಲ ಎಂದು ಸುಶೀಲ್‌ ಮೋದಿ (Sushil Modi) ಹೇಳಿದ್ದಾರೆ.  ಮಣಿಪುರ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಪದೇಪದೇ ಹೇಳಿದ್ದೇವೆ. ಆದರೆ ಅವರಿಗೆ ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸುವುದಷ್ಟೇ ಬೇಕಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv chandrashekar) ಹೇಳಿದ್ದಾರೆ.

Latest Videos
Follow Us:
Download App:
  • android
  • ios