ಮಹಾರಾಷ್ಟ್ರದಲ್ಲಿ ವಿಚಿತ್ರ ವೈದ್ಯಕೀಯ ಘಟನೆಯೊಂದು ವರದಿಯಾಗಿದೆ. ಬೆಳಗ್ಗೆ ಎಂದಿನಂತೆ ಹಲ್ಲುಜ್ಜುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬರೋಬ್ಬರಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ಅನ್ನೇ ನುಂಗಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಚಿತ್ರ ವೈದ್ಯಕೀಯ ಘಟನೆಯೊಂದು ವರದಿಯಾಗಿದೆ. ಬೆಳಗ್ಗೆ ಎಂದಿನಂತೆ ಹಲ್ಲುಜ್ಜುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬರೋಬ್ಬರಿ 19 ಸೆಂ.ಮೀ ಉದ್ದದ ಟೂತ್‌ಬ್ರಷ್ ಅನ್ನೇ ನುಂಗಿದ್ದಾರೆ. ಹೊಟ್ಟೆ ಸೇರಿದ್ದ ಬ್ರಷ್‌ ಅನ್ನು ಹೊರತೆಗೆಯಲು ವೈದ್ಯರು ವಿಶೇಷ ಚಿಕಿತ್ಸೆ ನಡೆಸಿದ್ದು, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ 30 ನಿಮಿಷಗಳಲ್ಲಿ ಯಶಸ್ವಿಯಾಗಿದ್ದಾರೆ. ಚಿಕಿತ್ಸೆ ಮುಗಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಹಲ್ಲುಜ್ಜುವಾಗಲೇ ಸಂಭವಿಸಿದ ಅನಿರೀಕ್ಷಿತ ಘಟನೆ

ಮಹಾರಾಷ್ಟ್ರದ ಪೆಣ್ ಪ್ರದೇಶದ ಆಟೋ ಚಾಲಕ ರಾಜೇಂದ್ರ ಮಲುಸಾರೆ (50) ಈ ವಿಚಿತ್ರ ಘಟನೆಗೆ ಒಳಗಾದವರು. ಬೆಳಗ್ಗೆ ಎಂದಿನಂತೆ ಹಲ್ಲುಜ್ಜುತ್ತಿದ್ದಾಗ ಆಕಸ್ಮಿಕವಾಗಿ ಕೈಯಲ್ಲಿದ್ದ ಟೂತ್‌ಬ್ರಷ್ ಸಂಪೂರ್ಣವಾಗಿ ಬಾಯಿಯೊಳಗೆ ಹೋಗಿ ಹೊಟ್ಟೆ ಸೇರಿದೆ. ಘಟನೆ ನಡೆದ ತಕ್ಷಣ ರಾಜೇಂದ್ರ ಅವರು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರ ಸಲಹೆಯಂತೆ ಎಕ್ಸ್‌ರೇ ಪರೀಕ್ಷೆ ಮಾಡಿಸಿದರೂ, ಅದರಲ್ಲೂ ಟೂತ್‌ಬ್ರಷ್ ಪತ್ತೆಯಾಗಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಅವರನ್ನು ನವಿ ಮುಂಬೈನ ಮೆಡಿಕವರ್ ಆಸ್ಪತ್ರೆಗೆ ಕಳುಹಿಸಲಾಯಿತು.

ಎಂಡೋಸ್ಕೋಪಿ ಪರೀಕ್ಷೆಯಲ್ಲಿ ಪತ್ತೆಯಾಯ್ತು ಟೂತ್‌ಬ್ರಷ್!

ಮೆಡಿಕವರ್ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಎಂಡೋಸ್ಕೋಪಿ ಪರೀಕ್ಷೆ ನಡೆಸಿದರು. ಈ ವೇಳೆ 19 ಸೆಂ.ಮೀ ಉದ್ದದ ಸಂಪೂರ್ಣ ಟೂತ್‌ಬ್ರಷ್ ಹೊಟ್ಟೆಯೊಳಗೆ ಸಿಲುಕಿರುವುದು ಪತ್ತೆಯಾಯಿತು. ಇದು ಸಾಮಾನ್ಯ ಪ್ರಕರಣವಾಗಿರಲಿಲ್ಲ. ಹೀಗಾಗಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮಾಡುವ ಬದಲು, ಸುಧಾರಿತ ಎಂಡೋಸ್ಕೋಪಿ ವಿಧಾನದ ಮೂಲಕ ಬ್ರಷ್ ಹೊರತೆಗೆಯಲು ವೈದ್ಯರ ತಂಡ ನಿರ್ಧರಿಸಿತು.

ಕೇವಲ 30 ನಿಮಿಷದಲ್ಲಿ ಟೂತ್‌ಬ್ರಷ್ ಹೊರಕ್ಕೆ!

ಮೆಡಿಕವರ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹೆಪಟಾಲಜಿಸ್ಟ್ ಹಾಗೂ ಥೆರಪ್ಯೂಟಿಕ್ ಎಂಡೋಸ್ಕೋಪಿಸ್ಟ್ ಡಾ. ರಾವ್‌ಸಾಹೇಬ್ ರಾಥೋಡ್ ನೇತೃತ್ವದ ವೈದ್ಯರ ತಂಡ ಈ ಸವಾಲಿನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಸುಮಾರು 30 ನಿಮಿಷಗಳ ಕಾಲ ನಡೆದ ಎಂಡೋಸ್ಕೋಪಿ ಚಿಕಿತ್ಸೆಯ ಮೂಲಕ ಹೊಟ್ಟೆಯಲ್ಲಿದ್ದ ಟೂತ್‌ಬ್ರಷ್ ಅನ್ನು ಹೊರತೆಗೆಯಲಾಯಿತು. ವಿಶೇಷವೆಂದರೆ, ಇದಕ್ಕಾಗಿ ಯಾವುದೇ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯ ಬರಲಿಲ್ಲ. ಚಿಕಿತ್ಸೆ ಬಳಿಕ ರಾಜೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದ್ದು ಹೇಗೆ?

ದೇಹದೊಳಗೆ ಸಿಲುಕಿರುವ ವಸ್ತುಗಳನ್ನು ಹೊರತೆಗೆಯಲು ಕೆಲವು ಸಂದರ್ಭಗಳಲ್ಲಿ ಸುಧಾರಿತ ಎಂಡೋಸ್ಕೋಪಿ ತಂತ್ರಜ್ಞಾನ ನೆರವಾಗುತ್ತದೆ. ಬಾಯಿಯ ಮೂಲಕ ತೆಳುವಾದ, ಕ್ಯಾಮೆರಾ ಹೊಂದಿರುವ ಎಂಡೋಸ್ಕೋಪ್ ಉಪಕರಣವನ್ನು ಒಳಗೆ ಕಳುಹಿಸಿ, ವೈದ್ಯರು ಜೀರ್ಣಾಂಗದ ಒಳಭಾಗವನ್ನು ಪರಿಶೀಲಿಸುತ್ತಾರೆ. ಸೂಕ್ತ ಉಪಕರಣಗಳ ಸಹಾಯದಿಂದ ಸಿಲುಕಿರುವ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ. ರಾಜೇಂದ್ರ ಅವರ ಪ್ರಕರಣದಲ್ಲಿ ಇದೇ ವಿಧಾನ ಯಶಸ್ವಿಯಾಗಿದ್ದು, ದೊಡ್ಡ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಸಾಧ್ಯವಾಗಿದೆ. ಸಾಮಾನ್ಯ ಬೆಳಗಿನ ದಿನಚರಿಯಲ್ಲಿ ನಡೆದ ಸಣ್ಣ ಎಡವಟ್ಟು ಹೇಗೆ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿ ಬದಲಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.