ಮುಂಬೈ(ಡಿ.12): ಅನೇಕ ಬಾರಿ ಮನೆ ಸ್ವಚ್ಛಗೊಳಿಸುವಾಗ ಅಚ್ಚರಿಗೀಡು ಮಾಡುವ ವಿಚಾರಗಳು ಕಂಡು ಬರುತ್ತವೆ, ವಸ್ತುಗಳು ಲಭ್ಯವಾಗುತ್ತವೆ. ಕೆಲವರಿಗೆ ಬಾಲ್ಯದಲ್ಲಿ ಆಟವಾಡುತ್ತಿದ್ದ ಆಟದ ವಸ್ತುಗಳು ಸಿಕ್ಕರೆ, ಇನ್ನು ಕೆಲವರಿಗೆ ಅಜ್ಜ, ಅಜ್ಜಿಯ ಹಳೇ ವಸ್ತುಗಳು ಸಿಗುತ್ತವೆ. ಮುಂಬೈನ ವಿಜಯ್ ಬಸ್ರೂರು ಅವರಿಗೂ ತನ್ನ ಅಮ್ಮನ ಕೋಣೆ ಸ್ವಚ್ಛಗೊಳಿಸುವಾಗ ಇಂತಹುದೇ ಅಮೂಲ್ಯವಾದ ವಸ್ತುವೊಂದು ಲಭಿಸಿದೆ.

ಹೌದು ವಿಜಯ್ ಅವರಿಗೆ ತನ್ನ ಅಜ್ಜನ ಹಳೇ ಡೈರಿ ಸಿಕ್ಕಿದೆ, ಇದನ್ನು ಕುತೂಹಲದಿಂದ ತೆರೆದ ಅವರಿಗೆ ಅದರೊಳಗೆ ಮಹಾತ್ಮ ಗಾಂಧೀ, ಜವಾಹರಲಾಲ್ ನೆಹರೂರಂತಹ ಮಹಾನ್ ವ್ಯಕ್ತಿಗಳ ಸಹಿ ಇರುವುದು ಕಂಡು ಬಂದಿದೆ. ಇದನ್ನು ಕಂಡು ಅವರೂ ಕೂಡಾ ಒಂದು ಬಾರಿ ಅಚ್ಚರಿಗೀಡಾಗಿದ್ದಾರೆ.

ತನ್ನ ಅಜ್ಜನ ನೋಟ್‌ ಬುಕ್ ನೋಡಿದ ಬಳಿಕ ತನ್ನ ಬಳಿ ಮಹಾತ್ಮ ಗಾಂಧೀಜಿ, ನೆಹರೂ, ಬಿ. ಆರ್. ಅಂಬೇಡ್ಕರ್, ಸಿ. ವಿ. ರಾಮನ್‌ರಂತಹ ಮಹಾನ್ ವ್ಯಕ್ತಿಗಳ ಹಸ್ತಾಕ್ಷರವಿದೆ ಎಂದು ಖುಷಿಯಾಗಿದೆ. ತನ್ನ ಮನೆಯ ನಾಲ್ಕು ಗೋಡೆಗಳ ನಡುವೆ ಬಚ್ಚಿಟ್ಟುಕೊಂಡಿದ್ದ ಈ 'ಖಜಾನೆ' ಪಡೆದ ಬಸ್ರೂರು ತಮ್ಮ ಭಾವನೆಯನ್ನು ವಿಶ್ವದೆದುರು ತೆರೆದಿಡಲು ಹೆಚ್ಚು ಸಮಯ ವ್ಯಯಿಸಿಲ್ಲ.

ಈ ಆಟೋಗ್ರಾಫ್‌ಗಳ ಫೋಟೋವನ್ನು ಶೇರ್ ಮಾಡಿರುವ ಬಸ್ರೂರು ನಾಣು ಕಳೆದ ಕೆಲವು ದಿನಗಳಿಂದ ಅಮ್ಮನ ಕೋಣೆಯ ಕ್ಲೀನಿಂಗ್ ಮಾಡುತ್ತಿದ್ದೆ. ಶನಿವಾರದಂದು ನಮ್ಮ ಮನೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅಮೂಲ್ಯ ವಸ್ತುವೊಂದು ನನ್ನ ಕೈ ಸೇರಿದೆ. ಹೌದು ನನಗೆ ನಮ್ಮ ಅಜ್ಜನ ಆಟೋಗ್ರಾಫ್ ಪುಸ್ತಕ ಸಿಕ್ಕಿದೆ. ಇದರಲ್ಲಿ ಮಹಾತ್ಮ ಗಾಂಧೀಜಿ, ನೆಹರೂ, ಅಂಬೇಡ್ಕರ್ ಹಾಗೂ ಸಿ. ವಿ. ರಾಮನ್‌ರವರ ಹಸ್ತಾಕ್ಷರವಿದೆ ಎಂದಿದ್ದಾರೆ.

ಇದನ್ನು ಟ್ವೀಟ್ ಮಾಡಿದ ಬೆನ್ನಲ್ಲೇ ಇದು ಭಾರೀ ವೈರಲ್ ಆಗಿದೆ. ಅನೇಕ ಮಂದಿ ಈ ಪುಸ್ತಕ ಕಂಡ ಬಳಿಕ ನಿಮಗಾದ ಅಚ್ಚರಿ ಎಷ್ಟು ಎಂಬುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.