ಕಾಂಗ್ರಾ(ಜು.27): ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತ ಕುಲದೀಪ್‌ ಕುಮಾರ್‌ ಎಂಬಾತ ಮಗಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಇದ್ದ ಒಂದು ಹಸುವನ್ನು 6 ಸಾವಿರ ರು.ಗೆ ಮಾರಿ, ಆಕೆಗೆ ಸ್ಮಾರ್ಟ್‌ಫೋನ್‌ ಕೊಡಿಸಿದ್ದ ವಿಷಯ ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಈಗ ತಿಳಿದುಬಂದಿದೆ.

ಆನ್‌ಲೈನ್‌ ಕ್ಲಾಸ್‌ಗಾಗಿ ಹಸು ಮಾರಿ ಮಕ್ಕಳಿಗೆ ಮೊಬೈಲ್‌ ತಂದ ಅಪ್ಪ..!

ಕುಲದೀಪ್‌ನ ಈ ಸಂಕಷ್ಟಮಾಧ್ಯಮಗಳಲ್ಲಿ ವರದಿ ಆದ ಬೆನ್ನಲ್ಲೇ ಖ್ಯಾತ ಬಾಲಿವುಡ್‌ ನಟ ಸೋನು ಸೂದ್‌ ಅವರು, ಮಾರಾಟವಾಗಿದ್ದ ಹಸುವನ್ನು ಖರೀದಿಸಿ ಪುನಃ ಕುಲದೀಪ್‌ನ ಕೊಟ್ಟಿಗೆ ಸೇರಿಸುವ ವಾಗ್ದಾನ ಮಾಡಿದ್ದರು. ಆದರೆ ಕಾಂಗ್ರಾ ಜಿಲ್ಲಾಧಿಕಾರಿ ರಾಕೇಶ್‌ ಪ್ರಜಾಪತಿ ಹಾಗೂ ಇತರ ಅಧಿಕಾರಿಗಳು ಈ ವಿಷಯದ ಪರಿಶೀಲನೆಗೆ ಕುಲದೀಪ್‌ನ ಸ್ವಂತ ಊರಿಗೆ ಭೇಟಿ ನೀಡಿದಾಗ ವಸ್ತುಸ್ಥಿತಿ ಬೇರೆಯೇ ಇದೆ ಎಂದು ಗೊತ್ತಾಗಿದೆ.

ಕುಲದೀಪ್‌ ಕೊಟ್ಟಿಗೆಯಲ್ಲಿ ಈಗಾಗಲೇ 7 ಹಸುಗಳಿದ್ದು, ಅವುಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಹೀಗಾಗಿ ಈ ಪೈಕಿ ಒಂದು ಹಸುವನ್ನು ಆತ ಜು.10ರಂದು ತನ್ನ ಪರಿಚಯಸ್ಥನಿಗೇ ಮಾರಿದ್ದ. 3 ತಿಂಗಳ ಹಿಂದೆಯೇ, ಅಂದರೆ ಏಪ್ರಿಲ್‌ 30ರಂದು ತನ್ನ ಮಗಳಿಗೆ ಆತ ಆನ್‌ಲೈನ್‌ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ ಕೊಡಿಸಿದ್ದ. ಅಲ್ಲದೆ, ಸಮೀಪದಲ್ಲೇ ಸರ್ಕಾರಿ ಶಾಲೆ ಇದ್ದರೂ ತನ್ನ ಮಕ್ಕಳನ್ನು ದುಬಾರಿ ಶುಲ್ಕದ ಖಾಸಗಿ ಶಾಲೆಗೆ ಸೇರಿಸಿದ್ದ ಎಂದು ಅಧಿಕಾರಿಗಳಿಗೆ ಮನವರಿಕೆ ಆಗಿದೆ.

ಆನ್‌ಲೈನ್‌ ಕ್ಲಾಸ್‌ಗೆ ಅಡ್ಡಿಯಾದ ಲೋಡ್‌ ಶೆಡ್ಡಿಂಗ್‌, ನೆಟ್‌ವರ್ಕ್

‘ಇಷ್ಟಾಗಿಯೂ 6 ಸಾವಿರ ರು.ಗೆ ಮಾರಿದ ಹಸುವನ್ನು ಖರೀದಿಸಿ ಪುನಃ ನಿನಗೆ ಕೊಡಿಸುತ್ತೇವೆ’ ಎಂದು ನಾವು ಹೇಳಿದೆವು. ಆದರೆ ‘ನನ್ನ ಕೊಟ್ಟಿಗೆಯಲ್ಲಿ ಅದನ್ನು ಸಾಕಲು ಜಾಗವಿಲ್ಲ’ ಎಂದು ನಮ್ಮ ಆಫರ್‌ ಅನ್ನು ಕುಲದೀಪ್‌ ತಿರಸ್ಕರಿಸಿದ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.