ಆನ್‌ಲೈನ್ ಕ್ಲಾಸ್‌ಗೆ ಅಡ್ಡಿಯಾದ ಲೋಡ್ ಶೆಡ್ಡಿಂಗ್, ನೆಟ್‌ವರ್ಕ್
ಬೆಂಗಳೂರು ನಗರದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ, ಪ್ರತಿ ದಿನ ವಿದ್ಯುತ್ ಕಡಿತ ಮಾಡುತ್ತಿದ್ದರೆ ಸಂಬಂಧಪಟ್ಟ ಬಡಾವಣೆ ನಿವಾಸಿಗಳು ದೂರು ನೀಡಿದರೆ ಕೂಡಲೇ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಗ್ರಾಹಕರ ಸಂಪರ್ಕ ವೇದಿಕೆ ಪ್ರಧಾನ ವ್ಯವಸ್ಥಾಪಕ ಸೋಮಶೇಖರ್ ತಿಳಿಸಿದ್ದಾರೆ
ಬೆಂಗಳೂರು(ಜು.24): ವಿದ್ಯುತ್ ಕಡಿತ ಹಾಗೂ ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಪರಿಣಾಮ ಆನ್‌ಲೈನ್ ಹಾಗೂ ‘ಚಂದನ’ ವಾಹಿನಿ ಮೂಲಕ ಮಕ್ಕಳಿಗೆ ಸರಿಯಾಗಿ ಕಲಿಯಲು ಆಗದೇ ತೊಂದರೆಯಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ನಿತ್ಯ ಹಲವಾರು ಬಾರಿ ಇದ್ದಕ್ಕಿದ್ದಂತೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದರಿಂದ ‘ಚಂದನ’ ವಾಹಿನಿಯಲ್ಲಿ ಪ್ರಸಾರವಾಗುವ ಪಾಠ ಕೇಳಲು ಆಗದೇ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ವಿಶೇಷವಾಗಿ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಅದೇ ರೀತಿ ದ್ವಿತೀಯ ಪಿಯುಸಿ ತರಗತಿ ವಿದ್ಯಾರ್ಥಿಗಳಿಗೆ ಯೂ ಟ್ಯೂಬ್ ಮೂಲಕ ಪ್ರಸಾರವಾಗುವ ತರಗತಿಗಳಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ.
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೂರದರ್ಶನದ ಚಂದನದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೂ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ಬೆಳಗ್ಗೆ 9ರಿಂದ 12 ಗಂಟೆಯವರೆಗೂ ಯೂಟ್ಯೂಬ್ ಮೂಲಕ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಇನ್ನು ಖಾಸಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯಾ ಶಾಲಾ ವೆಬ್‌ಸೈಟ್‌ಗಳು, ಆ್ಯಪ್‌ಗಳು ಸೇರಿದಂತೆ ಹಲವಾರು ರೀತಿಯಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಲೋಡ್ ಶೆಡ್ಡಿಂಗ್ ಇರುವುದರಿಂದ ವಿದ್ಯಾರ್ಥಿಗಳು ಸಮರ್ಪಕವಾಗಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದು ಪೋಷಕರ ಅಳಲಾಗಿದೆ.
ಆನ್‌ಲೈನ್ ಕ್ಲಾಸ್: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್ ಮೀಟ್ ತರಗತಿ
ಪ್ರತಿದಿನ ಬೆಳಗ್ಗೆ 9.30ರಿಂದ ಆನ್‌ಲೈನ್ ತರಗತಿಗಳು ಆರಂಭವಾಗಲಿವೆ. ಪ್ರತಿ ದಿನ ಹಠಾತ್ತಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿಯೂ ಬೆಸ್ಕಾಂ ಏಕೆ ವಿದ್ಯುತ್ ಕಡಿತ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಸಂಜಯನಗರ ಪೋಷಕರೊಬ್ಬರು ದೂರಿದ್ದಾರೆ.
ಮೊಬೈಲ್ ನೆಟ್ ವರ್ಕ್ ಸಮಸ್ಯೆ
ಇನ್ನು ಬೆಂಗಳೂರು ಹೊರ ವಲಯದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಎದುರಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ನೆಲೆಸಿರುವ ಪೋಷಕರು ಶಾಲೆಗಳಿಗೆ ರಜೆ ಇರುವುದರಿಂದ ಗ್ರಾಮಾಂತರ ಪ್ರದೇಶಗಳಿಗೆ ತೆರಳಿದ್ದಾರೆ. ನಗರದ ಹೊರ ವಲಯಗಳಾದ ಬನ್ನೇರುಘಟ್ಟ, ಅನೇಕಲ್, ರಾಜಾನಕುಂಟೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸಮಸ್ಯೆಯಿಂದಾಗಿ ಮಕ್ಕಳು ಆನ್‌ಲೈನ್ ತರಗತಿಗೆ ಹಾಜರಾಗದಂತಾಗಿದೆ.
ಒಂದು ವೇಳೆ ಕ್ಲಾಸ್‌ಗೆ ಲಾಗಿನ್ ಆದರೂ ಆನಂತರ ಶಿಕ್ಷಕರು ವåಾಡುವ ಬೋಧನೆ ಕೇಳಿಸುವುದು ಇಲ್ಲ, ಕಾಣಿಸುವುದು ಇಲ್ಲ. ನೆಟ್‌ವರ್ಕ್ಗಾಗಿ ಮನೆ ಮೇಲೆ ಹೋದರೂ ಪ್ರಯೋಜನವಾಗುತ್ತಿಲ್ಲ ಎಂದು ಮಕ್ಕಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ, ದೂರು ನೀಡಿದರೆ ಕ್ರಮ
ಬೆಂಗಳೂರು ನಗರದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಆದರೆ, ಪ್ರತಿ ದಿನ ವಿದ್ಯುತ್ ಕಡಿತ ಮಾಡುತ್ತಿದ್ದರೆ ಸಂಬಂಧಪಟ್ಟಬಡಾವಣೆ ನಿವಾಸಿಗಳು ದೂರು ನೀಡಿದರೆ ಕೂಡಲೇ ಸರಿಪಡಿಸಲಾಗುವುದು ಎಂದು ಬೆಸ್ಕಾಂ ಗ್ರಾಹಕರ ಸಂಪರ್ಕ ವೇದಿಕೆ ಪ್ರಧಾನ ವ್ಯವಸ್ಥಾಪಕ ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಮಳೆ ಬಂದಂತಹ ಸಂದರ್ಭದಲ್ಲಿ ಮರ ಬಿದ್ದರೆ ಅಥವಾ ಟ್ರಾನ್ಸ್‌ಫಾರ್ಮರ್ ಹಾಳಾದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಕಡಿತವಾಗಲಿದೆ. ಇಲಾಖೆ ಸಿಬ್ಬಂದಿ ಕೂಡ ದುರಸ್ತಿ ಕಾರ್ಯ ಕೈಗೊಳ್ಳುತ್ತಾರೆ. ಆದರೆ, ನಿಖರವಾಗಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.